ಶ್ಲೋಕ – 26
ಮುಕ್ತಸಂಗೋSನಹಂವಾದೀ ಧೃತ್ಯುತ್ಸಾಹಸಮನ್ವಿತಃ ।
ಸಿದ್ಧ್ಯಸಿದ್ಧ್ಯೋರ್ನಿರ್ವಿಕಾರಃ ಕರ್ತಾ ಸಾತ್ತ್ವಿಕ ಉಚ್ಯತೇ ॥೨೬॥
ಮುಕ್ತ ಸಂಗಃ ಅನಹಂವಾದೀ ಧೃತಿ ಉತ್ಸಾಹ ಸಮನ್ವಿತಃ ।
ಸಿದ್ಧಿ ಅಸಿಧ್ಯೋಃ ನಿರ್ವಿಕಾರಃ ಕರ್ತಾ ಸಾತ್ತ್ವಿಕಃ ಉಚ್ಯತೇ — ಹಚ್ಚಿಕೊಳ್ಳದವನು, ನಾನು ಮಾಡಿದೆ ಎಂದು ಕೊಚ್ಚಿಕೊಳ್ಳದವನು, ಹುರುಪಳಿಯದ ಗಟ್ಟಿಗ, ಗಳಿಕೆ-ಅಳಿಕೆಗಳಿಂದ ವಿಚಲಿತನಾಗದವನು ಸಾತ್ವಿಕ ಕರ್ತಾರ ಎನಿಸುತ್ತಾನೆ.
ಸಾತ್ವಿಕ ಕರ್ತಾ ಯಾವುದನೂ ಅಂಟಿಸಿಕೊಳ್ಳುವುದಿಲ್ಲ. ಹೇಗೆ ಯಾವುದೇ ಪೂಜೆಯ ಕೊನೆಯಲ್ಲಿ ‘ಶ್ರೀ ಕೃಷ್ಣಾರ್ಪಣಮಸ್ತು’ ಎಂದು ಅರ್ಪಿಸುವ ಪದ್ಧತಿ ಇದೆಯೊ ಹಾಗೆ ಸಾತ್ವಿಕ ತನ್ನ ಜೀವನದಲ್ಲಿ ತಾನು ಮಾಡುವ ಎಲ್ಲ ಕರ್ಮವನ್ನು ಭಗವದ್ ಭಕ್ತಿಯಿಂದ ಭಗವದರ್ಪಣಾಭಾವದಿಂದ ಮಾಡುತ್ತಾನೆ. ಅವನಿಗೆ ‘ನಾನು ಮಾಡಿದೆ’ ಎನ್ನುವ ಅಹಂಕಾರವೇ ಇಲ್ಲ. ಯಾವುದೇ ಕೆಲಸವಿರಲಿ ಆತ ಅದನ್ನು ಅತ್ಯುತ್ಸಾಹದಿಂದ ಮಾಡುತ್ತಾನೆ. ಮಾಡಿದ ಕೆಲಸ ಕೈಗೂಡದಿದ್ದಾಗ ಆತ ಕುಸಿಯುವುದಿಲ್ಲ, ಯಶಸ್ವೀಯಾದಾಗ ಹಾರಾಡುವುದಿಲ್ಲ. ಎಲ್ಲವನ್ನು ವಿರ್ವಿಕಾರನಾಗಿ ಮಾಡುತ್ತಾನೆ. ಇದನ್ನೇ ದ್ವಾದಷಸ್ತೋತ್ರದಲ್ಲಿ ಆಚಾರ್ಯರು ಈ ರೀತಿ ಸುಂದರವಾಗಿ ಹೇಳಿದ್ದಾರೆ:
ಕುರು ಭುಂಕ್ಷ್ವ ಚ ಕರ್ಮ ನಿಜಂ ನಿಯತಂ ಹರಿಪಾದವಿನಮ್ರಧಿಯಾ ಸತತಂ |
ಹರಿರೇವ ಪರೋ ಹರಿರೇವ ಗುರುಃ ಹರಿರೇವ ಜಗತ್ಪಿತೃಮಾತೃಗತಿಃ ||
ನಿನ್ನ ಪಾಲಿನ ಕರ್ಮ ನೀನು ಮಾಡು. ಬಂದುದನುಣ್ಣು. ಹರಿಪಾದದ ಸ್ಮರಣೆ ತಪ್ಪದಿರಲಿ-ಇದು ಸಾತ್ವಿಕನ ಜೀವನದ ಮೂಲ ಮಂತ್ರ.
