ಬೆಂಗಳೂರು:
ರಾಜಧಾನಿ ಬೆಂಗಳೂರಿನ ಸಾರಿಗೆ ಮಾರುಕಟ್ಟೆಗೆ ವಿಯೆಟ್ನಾಂ ಮೂಲದ ಪ್ರಸಿದ್ಧ ಕೈಗಾರಿಕಾ ಸಮೂಹ ವಿನ್ಗ್ರೂಪ್ನ (Vingroup) ಸಂಪೂರ್ಣ ಎಲೆಕ್ಟ್ರಿಕ್ ಟ್ಯಾಕ್ಸಿ ಸೇವೆಯಾದ ‘ಗ್ರೀನ್ ಎಸ್ಎಂ’ (Green SM) ಅಧಿಕೃತವಾಗಿ ಲಗ್ಗೆಯಿಡಲು ಸಜ್ಜಾಗಿದೆ. ರಾಜ್ಯ ಸಾರಿಗೆ ಇಲಾಖೆಯು ಈ ಸಂಸ್ಥೆಗೆ ಆ್ಯಪ್ ಆಧಾರಿತ ಕ್ಯಾಬ್ ಸೇವೆಗಳನ್ನು ಒದಗಿಸಲು ಅಧಿಕೃತ ಪರವಾನಗಿ ನೀಡಿದೆ.
‘ಕರ್ನಾಟಕ ಆನ್-ಡಿಮ್ಯಾಂಡ್ ಟ್ರಾನ್ಸ್ಪೋರ್ಟೇಶನ್ ಟೆಕ್ನಾಲಜಿ ಅಗ್ರಿಗೇಟರ್ಸ್ ನಿಯಮಗಳು-2016’ರ ಅಡಿಯಲ್ಲಿ ಈ ಅನುಮೋದನೆ ದೊರೆತಿದ್ದು, ಈ ಪರವಾನಗಿಯು 2031ರ ಸೆಪ್ಟೆಂಬರ್ವರೆಗೆ ಮಾನ್ಯತೆ ಹೊಂದಿರಲಿದೆ. ಇದರಿಂದಾಗಿ ಈಗಾಗಲೇ ಓಲಾ, ಉಬರ್, ರ್ಯಾಪಿಡೋ ಮತ್ತು ನಮ್ಮ ಯಾತ್ರಿಗಳ ನಡುವೆ ತೀವ್ರ ಪೈಪೋಟಿ ಇರುವ ಬೆಂಗಳೂರಿನ ಸಾರಿಗೆ ಮಾರುಕಟ್ಟೆಯಲ್ಲಿ ಮತ್ತೊಂದು ಬೃಹತ್ ಬಹುರಾಷ್ಟ್ರೀಯ ಕಂಪನಿ ಸ್ಪರ್ಧೆಗೆ ಇಳಿಯಲಿದೆ.
ಚಾಲಕ ಸಂಘಟನೆಗಳಿಂದ ತೀವ್ರ ವಿರೋಧ:
ವಿದೇಶಿ ಇವಿ ಕ್ಯಾಬ್ ಕಂಪನಿಯ ಪ್ರವೇಶಕ್ಕೆ ಕರ್ನಾಟಕ ರಾಜ್ಯ ಚಾಲಕರ ಪರಿಷತ್, ಪೀಸ್ ಆಟೋ ಯೂನಿಯನ್ ಸೇರಿದಂತೆ ಹಲವು ಸ್ಥಳೀಯ ಚಾಲಕರ ಒಕ್ಕೂಟಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ.
ಕಂಪನಿಯೇ ಸ್ವಂತ ವಾಹನಗಳ ಸಮೂಹವನ್ನು (Fleet) ಹೊಂದಿ, ಸಂಬಳದ ಆಧಾರದಲ್ಲಿ ಚಾಲಕರನ್ನು ನೇಮಿಸಿಕೊಂಡು ಕಾರ್ಯನಿರ್ವಹಿಸುವ ಕಾರ್ಪೊರೇಟ್ ಮಾದರಿಯಿಂದಾಗಿ ಸ್ವಂತ ವಾಹನ ಇಟ್ಟುಕೊಂಡು ದುಡಿಯುವ ಸ್ಥಳೀಯ ಚಾಲಕರ ದಿನನಿತ್ಯದ ಆದಾಯ ಮತ್ತಷ್ಟು ಕುಸಿಯಲಿದೆ ಎಂದು ಸಂಘಟನೆಗಳು ಆತಂಕ ವ್ಯಕ್ತಪಡಿಸಿವೆ. ಹೆಚ್ಚುತ್ತಿರುವ ಇಂಧನ, ನಿರ್ವಹಣಾ ವೆಚ್ಚದ ನಡುವೆ ಇಂತಹ ಬಹುರಾಷ್ಟ್ರೀಯ ಕಂಪನಿಗಳಿಗೆ ಅನುಮತಿ ನೀಡಿರುವುದು ಸ್ಥಳೀಯರ ಹೊಟ್ಟೆಯ ಮೇಲೆ ಹೊಡೆದಂತಾಗಿದ್ದು, ಸರ್ಕಾರ ತಕ್ಷಣವೇ ಈ ಪರವಾನಗಿಯನ್ನು ಮರುಪರಿಶೀಲಿಸಿ ರದ್ದುಪಡಿಸಬೇಕು ಎಂದು ಚಾಲಕ ಸಂಘಟನೆಗಳು ಪಟ್ಟು ಹಿಡಿದಿವೆ.
ಏನಿದು ಗ್ರೀನ್ ಎಸ್ಎಂ ಸೇವೆ?:
ಗ್ರೀನ್ ಎಸ್ಎಂ ಸಂಪೂರ್ಣ ಪರಿಸರಸ್ನೇಹಿ ಇವಿ ವಾಹನಗಳನ್ನಷ್ಟೇ ಒಳಗೊಂಡಿರುವ ಟ್ಯಾಕ್ಸಿ ಸೇವೆಯಾಗಿದೆ. 2026ರ ಜೂನ್ನಲ್ಲಿ ದೆಹಲಿ-ಎನ್ಸಿಆರ್ ಮೂಲಕ ಭಾರತೀಯ ಮಾರುಕಟ್ಟೆಗೆ ಪ್ರವೇಶಿಸಿದ ಈ ಸಂಸ್ಥೆ, ಬಳಿಕ ಹೈದರಾಬಾದ್ಗೂ ವಿಸ್ತರಿಸಿತ್ತು. ಕಂಪನಿಯು ಏಳು ಆಸನಗಳ ‘ವಿನ್ಫಾಸ್ಟ್ ಲಿಮೋ ಗ್ರೀನ್’ ಎಲೆಕ್ಟ್ರಿಕ್ ಎಂಪಿವಿ ವಾಹನಗಳನ್ನು ಬಳಸಲಿದ್ದು, ಪ್ರತಿ ಕಿಲೋಮೀಟರ್ಗೆ ಅಂದಾಜು ₹8 ದರದಲ್ಲಿ ಸೇವೆ ನೀಡುವ ಯೋಜನೆಯಲ್ಲಿದೆ. ಅಲ್ಲದೆ ಸುರಕ್ಷತೆಗಾಗಿ ಕ್ಯಾಮೆರಾಗಳು, ಎಐ (AI) ತಂತ್ರಜ್ಞಾನ ಮತ್ತು ತುರ್ತು ಎಸ್ಒಎಸ್ ಬಟನ್ಗಳ ಸೌಲಭ್ಯವನ್ನು ವಾಹನಗಳಲ್ಲಿ ಒದಗಿಸುವುದಾಗಿ ಕಂಪನಿ ತಿಳಿಸಿದೆ.
