ಹಾಸನ : ಕನ್ನಡ ನಾಡಿನ ನೆಲ ಜಲ ಭಾಷೆ ಹಾಗೂ ಇನ್ನಿತರ ಸಂಪನ್ಮೂಲವನ್ನು ಸ್ವ ಇಚ್ಛೆಯಿಂದ ಕಾಪಾಡಿಕೊಂಡು ಹೋಗುವುದು ಪ್ರತಿಯೊಬ್ಬ ಕನ್ನಡಿಗರ ಕರ್ತವ್ಯವಾಗಿದೆ ಎಂದು ರೋಟರಿ ಮಿಡ್ ಟೌನ್ 3182 ಜೋನ್ 9 ಸಂಸ್ಥೆಯ ಅಧ್ಯಕ್ಷರಾದ ಎನ್ ವಿಶ್ವನಾಥ್ ಅಭಿಪ್ರಾಯ ಪಟ್ಟರು.
ರೋಟರಿ ಮಿಡ್ ಟೌನ್ ಸಂಸ್ಥೆಯವರು ಆಚರಿಸಿದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ ಕನ್ನಡ ಭಾಷೆಗೆ ಪ್ರಾಚೀನ ಇತಿಹಾಸವಿದೆ,ಈ ನಾಡಿನಲ್ಲಿ ಜನಿಸಿದ ನಾವೇ ಧನ್ಯರು. ರೋಟರಿ ಸಂಸ್ಥೆ ವತಿಯಿಂದ ಸಮಾಜ ಸೇವೆಯನ್ನು ಮಾಡುವುದರೊಂದಿಗೆ ನಾಡು ನುಡಿಯ ಬಗ್ಗೆ ಅರಿವನ್ನು ಮೂಡಿಸುವುದು ಪ್ರಮುಖ ಜವಾಬ್ದಾರಿಯಾಗಿದೆ ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಹಾಸನ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಬಾ. ನಂ ಲೋಕೇಶ ಕರ್ನಾಟಕ ಇಂದು ಸಮೃದ್ಧವಾಗಿರಲು ಕಾರಣ ಕರ್ನಾಟಕ ನಾಡಿಗಾಗಿ, ಕರ್ನಾಟಕದ ಏಕೀಕರಣಕ್ಕಾಗಿ ಶ್ರಮಿಸಿದ ಮಹನೀಯರು. ಎಲ್ಲಾ ಭಾಷೆಗಳ ರಾಣಿ ಕನ್ನಡ ಭಾಷೆ ಎಂದು ಕರೆಯಲು ಕಾರಣ ಶೇಕಡ ನೂರರಷ್ಟು ಉಚ್ಚಾರಣೆಯ ಹಾಗೂ ಬರವಣಿಗೆ ಎರಡೂ ಒಂದೇ ಆಗಿರುವ ಭಾಷೆ ಎಂದರೆ ಅದು ಕನ್ನಡ ಭಾಷೆ ಮಾತ್ರ. ಬಹಳ ಪ್ರಾಚೀನ ಇತಿಹಾಸವಿರುವ ಕನ್ನಡ ಭಾಷೆಯ ಪ್ರಾಚೀನತೆಗೆ ಹೆಸರಾಗಿರುವ ಗ್ರೀಕ್ ಭಾಷೆಯ ನಾಟಕದಲ್ಲಿಯೂ ಕೂಡ ಕನ್ನಡ ಪದಗಳ ಬಳಕೆಯಾಗಿದೆ ಎಂದಾದಲ್ಲಿ ಇದರ ಹಿರಿತನ ಎಂತಹದ್ದು ಎಂದು ಪಂಡಿತರಿಂದ ಪಾಮರರವರೆಗೆ ಗೊತ್ತಾಗುತ್ತದೆ.
ಹಲ್ಮಿಡಿ ಶಾಸನಕ್ಕಿಂತ ಹಿಂದೆ ಹಲವಾರು ತಾಮ್ರ ಶಾಸನಗಳಲ್ಲಿ ಕನ್ನಡ ಪದಬಳಕೆ ಆಗಿರುವುದು ಕಂಡು ಬಂದಿದೆ.
ಆದಿ ಕವಿಗಳಿಂದ ಹಿಡಿದು ಇಂದಿನವರೆಗೆ ವಚನಕಾರರು, ದಾಸ ಶ್ರೇಷ್ಠರು ಕನ್ನಡ ಭಾಷೆಯನ್ನು ಶ್ರೀಮಂತ ಗೊಳಿಸಿದ್ದಾರೆ. ಕನ್ನಡ ನಾಡು, ನೆಲ,ಜಲ ದ ಸಮಸ್ಯೆ ಬಂದಾಗ ಪ್ರತಿಯೊಬ್ಬ ಕನ್ನಡಿಗನೂ ಕಂಕಣ ತೊಟ್ಟು ನಾಡಿನ ರಕ್ಷಣೆಗಾಗಿ ನಿಲ್ಲಬೇಕಾಗುತ್ತದೆ. ಹಾಗಾಗಿ ಕವಿ ಕುವೆಂಪುರವರು ಭಾರತ ಜನನಿಯ ತನುಜಾತೆ ಜಯ ಹೇ ಕರ್ನಾಟಕ ಮಾತೆ ಎಂದು ಹೇಳಿದ ಗೀತೆ ನಾಡಗೀತೆಯಾಗಿದೆ.ಅನ್ಯ ಭಾಷೆಯನ್ನು ಕಲಿಯಬಾರದೆಂದೇನಿಲ್ಲ.ಆದರೆ ಕನ್ನಡ ಭಾಷೆಯನ್ನು ಹೆಚ್ಚು ಬಳಕೆಯನ್ನು ಮಾಡಿ ಸಮಯ ಸಂದರ್ಭ ಅನುಸಾರ ಮಾತ್ರ ಅನ್ಯ ಭಾಷೆಗಳನ್ನು ಬಳಕೆ ಮಾಡಿದ್ದಲ್ಲಿ ಭಾಷಾ ಶ್ರೀಮಂತಿಕೆ ಹೆಚ್ಚುತ್ತದೆ ಎಂದು ಮಾರ್ಮಿಕವಾಗಿ ನುಡಿದರು.

ಕರ್ನಾಟಕ ರಾಜ್ಯ ಐಎಪಿ ಅಧ್ಯಕ್ಷರಾದ ಡಾ. ದಿನೇಶ್ ಬೈರೇಗೌಡ ಮಾತನಾಡುತ್ತಾ ನಮ್ಮ ರೋಟರಿ ಸಂಸ್ಥೆಯು ವರ್ಷಪೂರ್ತಿ ಹಲವಾರು ಸಾಮಾಜಿಕ ಉಪಯುಕ್ತ ಕಾರ್ಯಕ್ರಮಗಳನ್ನು ಮಾಡಿಕೊಂಡು ಬರುತ್ತಿದೆ. ಅದರೊಟ್ಟಿಗೆ ಕನ್ನಡ ರಾಜ್ಯೋತ್ಸವವನ್ನು ಇಂದು ಅದ್ದೂರಿಯಾಗಿ ಆಚರಿಸುತ್ತಿದ್ದೇವೆ. ಇದು ನಮಗೆ ತುಂಬಾ ಸಂತೋಷ ತಂದಿದೆ. ಸುಮಾರು 19 ರಾಜ್ಯಗಳು ಒಟ್ಟಿಗೆ ಉದಯಿಸಿದರು ಕೂಡ ಕರ್ನಾಟಕದಲ್ಲಿ ಮಾತ್ರ ರಾಜ್ಯೋತ್ಸವದ ಆಚರಣೆ ಆಗುತ್ತಿರುವುದು ವಿಶೇಷವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಶಿಕ್ಷಕಿ ಪೂರ್ಣಿಮಾ ರವರನ್ನು ಸನ್ಮಾನಿಸಲಾಯಿತು. ಕಾರ್ಯದರ್ಶಿ ಭವಾನಿ ವಾರ್ಷಿಕ ವರದಿಯನ್ನು ಮಂಡಿಸಿದರು. ಕನ್ನಡ ನಾಡು ನುಡಿಗೆ ಸಂಬಂಧಿಸಿದಂತೆ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು.
ಕಾರ್ಯಕ್ರಮದಲ್ಲಿ ಕೋಶಾಧ್ಯಕ್ಷರಾದ ಎಂ ಆರ್ ಶಶಿಕಲಾ ವಿಶ್ವನಾಥ್,ಜೋನಲ್ ಲೆಫ್ಟಿನೆಂಟ್ ಡಾ. ತೇಜಸ್ವಿ, ಸೀನಿಯರ್ ಅಡ್ವಕೇಟ್ ಹರೀಶ್ ಬಾಬು, ಮಮತಾ ಪಾಟೀಲ್,ಡಾ. ಜಗದೀಶ್, ಡಾ. ಸುಧೀರ್ ಬೆಂಗಳೂರು,ಡಾ. ಹೇಮಂತ್,ಮಹೇಶ್ ಗೌಡ ಇನ್ನಿತರರು ಉಪಸ್ಥಿತರಿದ್ದರು.
