ಚನ್ನರಾಯಪಟ್ಟಣ: ತಾಲ್ಲೂಕಿನ ಕಸಬಾ ಹೋಬಳಿಯ ಜನಿವಾರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ರೈತರಿಗೆ ಹೊಸ ಸಾಲ ಹಾಗೂ ಹೆಚ್ಚುವರಿ ಸಾಲದ ಚೆಕ್ಗಳನ್ನು ವಿತರಿಸಲಾಯಿತು.
ಜನಿವಾರ ಗ್ರಾಮದ ಸಹಕಾರ ಸಂಘದ ಆವರಣದಲ್ಲಿ ಸಂಘದ ಅಧ್ಯಕ್ಷ ಜೆ.ಕೆ. ಪ್ರಸನ್ನ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಕರ್ನಾಟಕ ಸಹಕಾರ ಮಾರಾಟ ಮಂಡಳಿಯ ನಿರ್ದೇಶಕ ಹಾಗೂ ಟಿಎಪಿಎಂಎಸ್ನ ಮಾಜಿ ಅಧ್ಯಕ್ಷ, ಹಾಲಿ ನಿರ್ದೇಶಕ ಸಿ.ಎನ್. ಪುಟ್ಟಸ್ವಾಮಿಗೌಡ ಉದ್ಘಾಟಿಸಿ ಸಾಲದ ಚೆಕ್ಗಳನ್ನು ವಿತರಿಸಿದರು.
ನಂತರ ಮಾತನಾಡಿದ ಅವರು, ಸಂಘದ ವತಿಯಿಂದ ಹೊಸ ಸದಸ್ಯರಿಗೆ ಹೊಸ ಸಾಲದ ಚೆಕ್ಗಳನ್ನು ಹಾಗೂ ಹಳೆಯ ಸದಸ್ಯರಿಗೆ ಹೆಚ್ಚುವರಿ ಸಾಲದ ಚೆಕ್ಗಳನ್ನು ವಿತರಿಸಲಾಗಿದೆ. ಈ ದಿನ ಒಟ್ಟು ₹50 ಲಕ್ಷ ಮೊತ್ತದ ಸಾಲವನ್ನು ಈ ಭಾಗದ ರೈತರಿಗೆ ನೀಡಲಾಗಿದೆ ಎಂದರು.

ಸಹಕಾರಿ ತತ್ವದಡಿ ಎಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿದರೆ ಪ್ರತಿಯೊಬ್ಬ ಕೃಷಿಕರೂ ಉತ್ತಮ ಬದುಕು ಕಟ್ಟಿಕೊಳ್ಳಲು ಸಾಧ್ಯ. ರೈತರ ಅಭಿವೃದ್ಧಿಗಾಗಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಜಿಲ್ಲೆಯ ಸಹಕಾರ ಕ್ಷೇತ್ರವನ್ನು ಉನ್ನತ ಮಟ್ಟಕ್ಕೆ ಬೆಳೆಸಿದ್ದಾರೆ. ಒಂದು ಕಾಲದಲ್ಲಿ ನೌಕರರಿಗೆ ಸಂಬಳ ನೀಡಲೂ ಹಣವಿಲ್ಲದೆ ಸಂಕಷ್ಟದಲ್ಲಿದ್ದ ಸಹಕಾರ ಕ್ಷೇತ್ರ, ದೇವೇಗೌಡರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಜಾರಿಗೆ ತಂದ ಪೈಲಟ್ ಯೋಜನೆಯ ಫಲವಾಗಿ ಇಂದು ಜಿಲ್ಲೆಯಲ್ಲಿ ಸುಮಾರು ₹2 ಸಾವಿರ ಕೋಟಿ ವಹಿವಾಟು ನಡೆಸುವ ಮಟ್ಟಕ್ಕೆ ಬೆಳೆದಿದೆ. ಜಿಲ್ಲೆಯಲ್ಲಿ ₹1,300 ಕೋಟಿಗೂ ಅಧಿಕ ಮೊತ್ತದ ಸಾಲವನ್ನು ಶೂನ್ಯ ಬಡ್ಡಿದರದಲ್ಲಿ ವಿತರಿಸಲಾಗಿದೆ ಎಂದು ತಿಳಿಸಿದರು.

ಮಾಜಿ ಸಚಿವ ಎಚ್.ಡಿ. ರೇವಣ್ಣ ಹಾಗೂ ಶಾಸಕ ಸಿ.ಎನ್. ಬಾಲಕೃಷ್ಣ ಅವರ ಸಹಕಾರದಿಂದ ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿ ಸಹಕಾರ ಕ್ಷೇತ್ರವು ಉತ್ತಮ ಸೇವೆ ಸಲ್ಲಿಸುತ್ತಿದೆ ಎಂದರು.
ಜೆಡಿಎಸ್ ಹಿರಿಯ ಮುಖಂಡ ಹಾಗೂ ಟಿಎಪಿಎಂಎಸ್ನ ಮಾಜಿ ಅಧ್ಯಕ್ಷ, ಹಾಲಿ ನಿರ್ದೇಶಕ ಕುಂಬಾರಹಳ್ಳಿ ರಮೇಶ್ ಮಾತನಾಡಿ, ಸಿ.ಎನ್. ಪುಟ್ಟಸ್ವಾಮಿಗೌಡ ಅವರು ಕರ್ನಾಟಕ ಸಹಕಾರ ಮಾರಾಟ ಮಂಡಳಿಯ ನಿರ್ದೇಶಕರಾದ ನಂತರ ತಾಲ್ಲೂಕಿನ ವಿವಿಧ ಸಹಕಾರ ಸಂಘಗಳ ಅಭಿವೃದ್ಧಿಗೆ ವಿಶೇಷ ಅನುದಾನ ಒದಗಿಸುವ ಮೂಲಕ ಶ್ರಮಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಂಘದ ಕಾರ್ಯನಿರ್ವಹಣಾಧಿಕಾರಿ ಶೀಲಾ ಅವರು ಅತಿಥಿಗಳು ಹಾಗೂ ಸದಸ್ಯರನ್ನು ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಜೆ.ಕೆ. ಪ್ರಸನ್ನ, ಉಪಾಧ್ಯಕ್ಷೆ ಪದ್ಮ, ನಿರ್ದೇಶಕರಾದ ಕಾಳೇಗೌಡ, ಶಿವಕುಮಾರ್, ನಾಗರಾಜು, ಕಾಂತರಾಜು, ಮಲ್ಲೇಶ್, ಪರಮೇಶ್, ರಾಮಚಂದ್ರನಾಯಕ್, ಮಂಜುನಾಥ್, ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಸತೀಗೌಡ, ಗ್ರಾಮದ ಮುಖಂಡರಾದ ನಾಗೇಶ, ಪಿ. ನಾಗೇಶ, ಜೆ.ಆರ್. ನಂಜೇಗೌಡ, ಜೆ.ಎಲ್. ಶಿವನಂಜೇಗೌಡ, ಮೋಹನ್ ಕುಮಾರ್, ಡಿಸಿಸಿ ಬ್ಯಾಂಕ್ ವಿಸ್ತರಣಾಧಿಕಾರಿ ಮಧು, ಕಾರ್ಯನಿರ್ವಹಣಾಧಿಕಾರಿ ಶೀಲಾ ಮಂಜುನಾಥ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
