ಕೊರಟಗೆರೆ:– ಗ್ರಾಮೀಣ ಭಾಗದ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವ ಉದ್ದೇಶದಿಂದ ಶ್ರೀ ಗೊರವನಹಳ್ಳಿ ಮಹಾಲಕ್ಷ್ಮೀ ಚಾರಿಟಬಲ್ ಟ್ರಸ್ಟ್ ಹಾಗೂ ಲಯನ್ಸ್ ಇಂಟರ್ನ್ಯಾಷನಲ್ ಜಿಲ್ಲೆ 317ಎ ಇವರ ಸಂಯುಕ್ತ ಆಶ್ರಯದಲ್ಲಿ ನವೆಂಬರ್ 17ರಂದು ಗೊರವನಹಳ್ಳಿಯಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ.
ತಾಲ್ಲೂಕಿನ ಗೊರವನಹಳ್ಳಿಯ ಮಹಾಲಕ್ಷ್ಮೀ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಬೆಳಿಗ್ಗೆ 10ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಶಿಬಿರ ನಡೆಯಲಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವಂತೆ ಆಯೋಜಕರು ಮನವಿ ಮಾಡಿದ್ದಾರೆ.
ವಿವಿಧ ಕಾಯಿಲೆಗಳ ಉಚಿತ ತಪಾಸಣೆ
ಶಿಬಿರದಲ್ಲಿ ರಕ್ತದೊತ್ತಡ (ಬಿಪಿ), ಮಧುಮೇಹ (ಶುಗರ್), ಸಾಮಾನ್ಯ ಆರೋಗ್ಯ ತಪಾಸಣೆ, ಕಣ್ಣಿನ ಪರೀಕ್ಷೆ, ಹೃದಯ ಸಂಬಂಧಿ ಕಾಯಿಲೆಗಳು, ಮೂಳೆ ಮತ್ತು ಕೀಲು ಸಮಸ್ಯೆಗಳು ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳಿಗೆ ತಜ್ಞ ವೈದ್ಯರಿಂದ ತಪಾಸಣೆ ನಡೆಸಲಾಗುತ್ತದೆ.
ಹೃದಯದ ಆರೋಗ್ಯ ಪರೀಕ್ಷೆಗಾಗಿ ಇಸಿಜಿ ಮತ್ತು ಎಕೋ ತಪಾಸಣೆ ಉಚಿತವಾಗಿ ಮಾಡಲಾಗುತ್ತದೆ. ಕಣ್ಣಿನ ತಪಾಸಣೆ ನಡೆಸಿ ಅಗತ್ಯವಿರುವವರಿಗೆ ಉಚಿತ ಕನ್ನಡಕ ವಿತರಣೆ ಹಾಗೂ ಶಸ್ತ್ರಚಿಕಿತ್ಸೆಯ ಸೌಲಭ್ಯ ಕಲ್ಪಿಸಲಾಗುತ್ತದೆ. ಪೈಲ್ಸ್, ಹರ್ನಿಯಾ, ಅಪೆಂಡಿಕ್ಸ್, ಕಿಡ್ನಿ ಸ್ಟೋನ್ ಸೇರಿದಂತೆ ವಿವಿಧ ಕಾಯಿಲೆಗಳಿಗೆ ಸಂಬಂಧಿಸಿದಂತೆ ತಪಾಸಣೆ ನಡೆಸಿ ಅಗತ್ಯ ಚಿಕಿತ್ಸೆಗೆ ಮಾರ್ಗದರ್ಶನ ನೀಡಲಾಗುತ್ತದೆ.
ಮಹಿಳೆಯರಿಗೆ ಗರ್ಭಕೋಶ ಸಂಬಂಧಿತ ಕಾಯಿಲೆಗಳ ತಪಾಸಣೆ ಹಾಗೂ ಅಗತ್ಯ ಶಸ್ತ್ರಚಿಕಿತ್ಸೆಯ ವ್ಯವಸ್ಥೆ ಮಾಡಲಾಗಿದೆ. ಕಿವಿ, ಮೂಗು, ಗಂಟಲು, ಶ್ರವಣ ಮತ್ತು ಮಾತಿನ ತೊಂದರೆಗಳಿಗೂ ತಪಾಸಣೆ ನಡೆಸಲಾಗುತ್ತದೆ. ಶ್ರವಣದೋಷ ಇರುವ ಅರ್ಹ ಫಲಾನುಭವಿಗಳಿಗೆ ಉಚಿತ ಶ್ರವಣ ಯಂತ್ರ ವಿತರಿಸುವ ವ್ಯವಸ್ಥೆಯೂ ಇದೆ. ಇದರೊಂದಿಗೆ ಮೂಳೆ ಸಾಂದ್ರತೆ ಪರೀಕ್ಷೆ ಹಾಗೂ ರಕ್ತದಾನ ಶಿಬಿರವನ್ನು ಸಹ ಆಯೋಜಿಸಲಾಗಿದೆ.
ಅಗತ್ಯವಿರುವವರಿಗೆ ಉಚಿತ ಶಸ್ತ್ರಚಿಕಿತ್ಸೆ
ಶಿಬಿರದಲ್ಲಿ ತಪಾಸಣೆ ನಡೆಸಿದ ಬಳಿಕ ಹೆಚ್ಚಿನ ಚಿಕಿತ್ಸೆ ಅಥವಾ ಶಸ್ತ್ರಚಿಕಿತ್ಸೆಯ ಅಗತ್ಯವಿರುವ ರೋಗಿಗಳನ್ನು ಗುರುತಿಸಿ ಮುಂದಿನ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗುತ್ತದೆ. ಹೃದಯರೋಗ, ನರರೋಗ, ಕ್ಯಾನ್ಸರ್, ಕಿಡ್ನಿ ಮತ್ತು ಪಿತ್ತಕೋಶದ ಕಲ್ಲು, ಹರ್ನಿಯಾ, ಪೈಲ್ಸ್, ಅಪೆಂಡಿಸೈಟಿಸ್, ಸ್ತನ ಕ್ಯಾನ್ಸರ್, ಉಬ್ಬಿರುವ ರಕ್ತನಾಳ, ಗರ್ಭಕೋಶದ ಸಮಸ್ಯೆಗಳು, ಮೂಳೆ ಮತ್ತು ಕೀಲು ಸಮಸ್ಯೆಗಳು ಹಾಗೂ ಥೈರಾಯ್ಡ್ ಸೇರಿದಂತೆ ವಿವಿಧ ಕಾಯಿಲೆಗಳಿಗೆ ಅಗತ್ಯವಿರುವ ಶಸ್ತ್ರಚಿಕಿತ್ಸೆಯನ್ನು ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆಯಲ್ಲಿ ಉಚಿತವಾಗಿ ಒದಗಿಸುವ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಯಶಸ್ವಿನಿ ಕಾರ್ಡ್ ಹಾಗೂ ಬಿಪಿಎಲ್, ಹಸಿರು ಮತ್ತು ಅಂತ್ಯೋದಯ ಪಡಿತರ ಚೀಟಿಗಳನ್ನು ಹೊಂದಿರುವ ಅರ್ಹ ಫಲಾನುಭವಿಗಳಿಗೆ ನಿಯಮಾನುಸಾರ ಹೆಚ್ಚಿನ ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆಯ ಸೌಲಭ್ಯ ದೊರೆಯಲಿದೆ.
ದಾಖಲೆಗಳನ್ನು ತರಲು ಮನವಿ
ಶಿಬಿರಕ್ಕೆ ಆಗಮಿಸುವ ಸಾರ್ವಜನಿಕರು ಕಡ್ಡಾಯವಾಗಿ ಆಧಾರ್ ಕಾರ್ಡ್ ಮತ್ತು ಬಿಪಿಎಲ್ ಕಾರ್ಡ್ ತರಬೇಕು. ಈಗಾಗಲೇ ಚಿಕಿತ್ಸೆ ಪಡೆದಿರುವವರು ತಮ್ಮ ಹಳೆಯ ವೈದ್ಯಕೀಯ ದಾಖಲೆಗಳು, ಪರೀಕ್ಷಾ ವರದಿಗಳು ಹಾಗೂ ಔಷಧಿಗಳ ವಿವರಗಳನ್ನು ತಂದರೆ ವೈದ್ಯರಿಗೆ ರೋಗದ ಹಿನ್ನೆಲೆ ತಿಳಿದುಕೊಳ್ಳಲು ಅನುಕೂಲವಾಗಲಿದೆ.
ಗ್ರಾಮೀಣ ಭಾಗದ ಜನರು ದುಬಾರಿ ವೈದ್ಯಕೀಯ ಪರೀಕ್ಷೆ ಮತ್ತು ಚಿಕಿತ್ಸೆಯಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಈ ಶಿಬಿರ ಆಯೋಜಿಸಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ಟ್ರಸ್ಟ್ ಹಾಗೂ ಲಯನ್ಸ್ ಸಂಸ್ಥೆಯ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.
ಶ್ರೀ ಮಹಾಲಕ್ಷ್ಮೀ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಬಿ.ಜಿ. ವಾಸುದೇವ, ಕಾರ್ಯದರ್ಶಿ ಮುರಳಿಕೃಷ್ಣ ಆರ್., ಪದಾಧಿಕಾರಿಗಳಾದ ಆರ್. ಜಗದೀಶ್, ರಂಗಸ್ವಾಮಿ, ಕಾರ್ಯನಿರ್ವಾಹಣಾಧಿಕಾರಿ ಕೇಶವಮೂರ್ತಿ, ವಿಶೇಷ ಅಧಿಕಾರಿ ಹಾಗೂ ಆಡಳಿತ ಮಂಡಳಿಯ ಧರ್ಮದರ್ಶಿಗಳು ಮತ್ತು ಸಿಬ್ಬಂದಿ ಶಿಬಿರದ ಆಯೋಜನೆಯಲ್ಲಿ ತೊಡಗಿದ್ದಾರೆ.
ಮಂಜುನಾಥ ನೇತ್ರಾಲಯದ ನಿರ್ದೇಶಕ ಡಾ. ಮಂಜುನಾಥ್ ಎಂ.ಸಿ., ವೈದ್ಯಕೀಯ ನಿರ್ದೇಶಕ ಡಾ. ತುಂಗಪ್ಪ ಕೆ.ಎಸ್., ಸಮಾಜಸೇವಕ ಸಂತೋಷ್ ಜಿ. ಸೇರಿದಂತೆ ವೈದ್ಯಕೀಯ ತಂಡದ ಸಹಕಾರ ಇರಲಿದೆ. ಲಯನ್ ಕೆ. ಈಶ್ವರನ್ ಅವರು ಮುಖ್ಯ ಸಂಯೋಜಕರಾಗಿ ಕಾರ್ಯನಿರ್ವಹಿಸಲಿದ್ದು, ಲಯನ್ಸ್ ಇಂಟರ್ನ್ಯಾಷನಲ್ ಜಿಲ್ಲೆ 317ಎ ಪದಾಧಿಕಾರಿಗಳು ಸಹಕರಿಸಲಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಕೇಶವಮೂರ್ತಿ, ವಿಶೇಷ ಅಧಿಕಾರಿ (9900826342), ಲಯನ್ ಸಹನ ಭಟ್ (9739488005), ಲಯನ್ ಸುರೇಶ್ (9886934342) ಹಾಗೂ ಆನಂದ್ (9035957039) ಅವರನ್ನು ಸಂಪರ್ಕಿಸಬಹುದು.
