ಕೊರಟಗೆರೆ:- ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಗೊರವನಹಳ್ಳಿ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ್ದ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿಯಾಗಿ ನಡೆಯಿತು. ಗೊರವನಹಳ್ಳಿ ಶ್ರೀ ಮಹಾಲಕ್ಷ್ಮಿ ಚಾರಿಟಬಲ್ ಟ್ರಸ್ಟ್ ಹಾಗೂ ಲಯನ್ಸ್ ಇಂಟರ್ನ್ಯಾಷನಲ್ ಜಿಲ್ಲೆ 317ಎ ಸಹಯೋಗದಲ್ಲಿ ನಡೆದ ಶಿಬಿರದಲ್ಲಿ ನೂರಾರು ಸ್ಥಳೀಯರು ಹಾಗೂ ದೇವಿಯ ದರ್ಶನಕ್ಕೆ ಆಗಮಿಸಿದ್ದ ಭಕ್ತರು ಪಾಲ್ಗೊಂಡು ಆರೋಗ್ಯ ತಪಾಸಣೆ ಮಾಡಿಸಿಕೊಂಡರು.
ಶಿಬಿರದಲ್ಲಿ ಕಣ್ಣಿನ ತಪಾಸಣೆ ನಡೆಸಿ ಅಗತ್ಯವಿರುವವರಿಗೆ ಉಚಿತ ಕನ್ನಡಕ ವಿತರಿಸಲಾಯಿತು. ದೃಷ್ಟಿದೋಷ ಹೊಂದಿರುವವರಿಗೆ ಶಸ್ತ್ರಚಿಕಿತ್ಸೆ ಸೌಲಭ್ಯ ಕಲ್ಪಿಸುವ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಹೃದಯ ಸಂಬಂಧಿ ಕಾಯಿಲೆಗಳ ತಪಾಸಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಮತ್ತು ಸ್ಥಳೀಯರು ಆಗಮಿಸಿದ್ದು ವಿಶೇಷವಾಗಿತ್ತು.
ರಕ್ತದೊತ್ತಡ, ಮಧುಮೇಹ, ಇಸಿಜಿ ಹಾಗೂ ಎಕೋ ಪರೀಕ್ಷೆಗಳನ್ನು ಉಚಿತವಾಗಿ ನಡೆಸಲಾಯಿತು. ಪೈಲ್ಸ್, ಹರ್ನಿಯಾ, ಅಪೆಂಡಿಕ್ಸ್, ಕಿಡ್ನಿ ಸ್ಟೋನ್ ಸೇರಿದಂತೆ ವಿವಿಧ ಕಾಯಿಲೆಗಳಿಗೆ ತಪಾಸಣೆ ಹಾಗೂ ಅಗತ್ಯ ಶಸ್ತ್ರಚಿಕಿತ್ಸೆಯ ವ್ಯವಸ್ಥೆ ಮಾಡಲಾಗಿತ್ತು. ಕೀಲು ಮತ್ತು ಮೂಳೆ ಸಂಬಂಧಿತ ಸಮಸ್ಯೆಗಳಿಗೂ ವೈದ್ಯಕೀಯ ತಪಾಸಣೆ ನಡೆಸಲಾಯಿತು.
ಮಹಿಳೆಯರಿಗೆ ಗರ್ಭಕೋಶ ಸಂಬಂಧಿತ ಕಾಯಿಲೆಗಳ ತಪಾಸಣೆ ಹಾಗೂ ಶಸ್ತ್ರಚಿಕಿತ್ಸೆ ಕುರಿತು ಸಲಹೆ ನೀಡಲಾಯಿತು. ಕಿವಿ, ಮೂಗು, ಗಂಟಲು ಮತ್ತು ಮಾತಿನ ಸಮಸ್ಯೆಗಳಿಗೆ ತಜ್ಞ ವೈದ್ಯರಿಂದ ತಪಾಸಣೆ ನಡೆಸಿ, ಶ್ರವಣದೋಷವಿರುವವರಿಗೆ ಉಚಿತ ಶ್ರವಣ ಯಂತ್ರ ವಿತರಿಸುವ ವ್ಯವಸ್ಥೆ ಮಾಡಲಾಗಿತ್ತು. ಇದರೊಂದಿಗೆ ಉಚಿತ ರಕ್ತದಾನ ಶಿಬಿರವನ್ನೂ ಆಯೋಜಿಸಲಾಗಿತ್ತು.
ಗ್ರಾಮೀಣ ಭಾಗದ ಜನರಿಗೆ ಒಂದೇ ವೇದಿಕೆಯಲ್ಲಿ ವಿವಿಧ ವೈದ್ಯಕೀಯ ಸೇವೆಗಳನ್ನು ಒದಗಿಸುವ ಮೂಲಕ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವುದು ಶಿಬಿರದ ಪ್ರಮುಖ ಉದ್ದೇಶವಾಗಿತ್ತು. ಧಾರ್ಮಿಕ ಕ್ಷೇತ್ರಕ್ಕೆ ಆಗಮಿಸುವ ಭಕ್ತರಿಗೂ ಆರೋಗ್ಯ ಸೇವೆ ದೊರೆಯುವಂತೆ ವ್ಯವಸ್ಥೆ ಕಲ್ಪಿಸಿದ್ದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು.
ಗೊರವನಹಳ್ಳಿ ಮಹಾಲಕ್ಷ್ಮಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ವಾಸುದೇವ್, ಕಾರ್ಯದರ್ಶಿ ಮುರಳಿಕೃಷ್ಣ ಆರ್, ಖಜಾಂಚಿ ಜಗದೀಶ್ ಆರ್, ಧರ್ಮದರ್ಶಿಗಳಾದ ಲಕ್ಷ್ಮಿಕಾಂತ್, ರವಿರಾಜ್ ಅರಸ್, ಚಿಕ್ಕನರಸಯ್ಯ, ನಾಗರಾಜು ಎನ್.ಜಿ, ನರಸರಾಜು, ಶ್ರೀಪ್ರಸಾದ್, ನಟರಾಜು, ಟಿ.ಆರ್. ಮಂಜುನಾಥ್, ವಿಶೇಷಾಧಿಕಾರಿ ಕೇಶವಮೂರ್ತಿ, ಕಾರ್ಯನಿರ್ವಹಣಾಧಿಕಾರಿ ರಂಗಶಾಮಯ್ಯ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಲಯನ್ಸ್ ಇಂಟರ್ನ್ಯಾಷನಲ್ ಜಿಲ್ಲೆ 317ಎ ರಾಜ್ಯಪಾಲ ಲಯನ್ ಕೆ. ಈಶ್ವರನ್ ಅವರ ಅನುಮೋದನೆಯಂತೆ ಶಿಬಿರವನ್ನು ಆಯೋಜಿಸಲಾಗಿತ್ತು. ಲಯನ್ ಕಮಿಟಿ ಅಧ್ಯಕ್ಷೆ ಸಹನಾ ಭಟ್, ಕಾರ್ಯದರ್ಶಿ ಲಯನ್ ಸುರೇಶ್ ಕುಮಾರ್, ಖಜಾಂಚಿ ಲಯನ್ ಉಮಾ ಮೋಹನ್, ಎಡಿಟೋರಿಯಲ್ ಕ್ಯಾಬಿನೆಟ್ ಕಾರ್ಯದರ್ಶಿ ಲಯನ್ ದೀಪಿಕಾ ಚೇತನ್, ಸಲಹೆಗಾರರಾದ ಲಯನ್ ಮನೋಜ್ ಕುಮಾರ್ ಹಾಗೂ ನಟರಾಜ್ ಅವರ ನೇತೃತ್ವದಲ್ಲಿ ಶಿಬಿರ ಯಶಸ್ವಿಯಾಗಿ ನಡೆಯಿತು.
– ಶ್ರೀನಿವಾಸ್ ಕೊರಟಗೆರೆ.
