ಉಜಿರೆ, ನ. 19: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಸಂಘ (ಎಸ್ಡಿಎಂಇ ಸೊಸೈಟಿ), ಉಜಿರೆ ಇದರ ಪ್ರಾಧ್ಯಾಪಕ ಹಾಗೂ ಮುಖ್ಯ ಶೈಕ್ಷಣಿಕ ಅಧಿಕಾರಿಯಾಗಿ (ಸಿಎಒ) ಡಾ. ಹೇಮಂತ್ ಕುಮಾರ್ ಎಸ್. ಅವರನ್ನು ನೇಮಕ ಮಾಡಲಾಗಿದೆ.
ಬೋಧನೆ, ಸಂಶೋಧನೆ, ಶೈಕ್ಷಣಿಕ ಆಡಳಿತ ಹಾಗೂ ಸಾಂಸ್ಥಿಕ ನಾಯಕತ್ವ ಕ್ಷೇತ್ರದಲ್ಲಿ 22 ವರ್ಷಗಳಿಗೂ ಅಧಿಕ ಅನುಭವ ಹೊಂದಿರುವ ಡಾ. ಹೇಮಂತ್ ಕುಮಾರ್ ಅವರು, ಇದೀಗ ಎಸ್ಡಿಎಂಇ ಸೊಸೈಟಿಯ ಅಧೀನದಲ್ಲಿರುವ 56 ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕ ಪ್ರಗತಿಯ ಜವಾಬ್ದಾರಿ ನಿರ್ವಹಿಸಲಿದ್ದಾರೆ.
ಶೈಕ್ಷಣಿಕ ಉತ್ಕೃಷ್ಟತೆ, ಸಾಂಸ್ಥಿಕ ಗುಣಮಟ್ಟ, ನವೀನ ಬೋಧನಾ ವಿಧಾನಗಳು, ಸಂಶೋಧನೆ, ಕೃತಕ ಬುದ್ಧಿಮತ್ತೆ ಸೇರಿದಂತೆ ಆಧುನಿಕ ತಂತ್ರಜ್ಞಾನಗಳ ಅಳವಡಿಕೆ ಹಾಗೂ ಬೋಧಕ ವರ್ಗದ ವೃತ್ತಿಪರ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಿದ್ದಾರೆ.
ನೇಮಕಾತಿ ಕುರಿತು ಮಾತನಾಡಿದ ಎಸ್ಡಿಎಂಇ ಸೊಸೈಟಿಯ ನಿರ್ದೇಶಕ ಶ್ರೇಯಸ್ ಕುಮಾರ್ ಡಿ. ಅವರು, ಜಾಗತಿಕ ಬದಲಾವಣೆಗಳಿಗೆ ಹೊಂದಿಕೊಳ್ಳುವ ದೂರದೃಷ್ಟಿಯ ಶಿಕ್ಷಣ ಸಂಸ್ಥೆಗಳ ನಿರ್ಮಾಣ ಇಂದಿನ ಅಗತ್ಯವಾಗಿದೆ. ನಾವೀನ್ಯತೆ, ಉದಯೋನ್ಮುಖ ತಂತ್ರಜ್ಞಾನಗಳ ಬಳಕೆ, ವಿದ್ಯಾರ್ಥಿಗಳಲ್ಲಿ ಜ್ಞಾನಾನ್ವೇಷಣೆ ಮತ್ತು ಜೀವನಪರ್ಯಂತ ಕಲಿಕೆಯ ಮನೋಭಾವ ಬೆಳೆಸುವುದು ಮುಖ್ಯವಾಗಿದೆ. ಡಾ. ಹೇಮಂತ್ ಅವರ ಶೈಕ್ಷಣಿಕ ನಾಯಕತ್ವ ಹಾಗೂ ಬಹುಶಿಸ್ತೀಯ ಪರಿಣತಿಯು ಸಂಸ್ಥೆಯ ಶೈಕ್ಷಣಿಕ ಪ್ರಗತಿಗೆ ಮಹತ್ವದ ಕೊಡುಗೆ ನೀಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಶಿಕ್ಷಣ ಮತ್ತು ಸಂಶೋಧನಾ ಕ್ಷೇತ್ರದಲ್ಲಿ 22 ವರ್ಷಗಳ ಅನುಭವ
ಡಾ. ಹೇಮಂತ್ ಕುಮಾರ್ ಅವರು ಈ ಹಿಂದೆ CMS ಬಿಸಿನೆಸ್ ಸ್ಕೂಲ್, ಜೈನ್ (ಡೀಮ್ಡ್ ಟು ಬಿ ಯೂನಿವರ್ಸಿಟಿ)ಯಲ್ಲಿ ಪ್ರಾಧ್ಯಾಪಕ, ಏರಿಯಾ ಚೇರ್, ಆಂತರಿಕ ಗುಣಮಟ್ಟ ಭರವಸೆ ಕೋಶದ ಮುಖ್ಯಸ್ಥ ಹಾಗೂ ಅಡ್ವಾನ್ಸ್ಡ್ ಅಕಾಡೆಮಿಕ್ ಲರ್ನಿಂಗ್ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದಾರೆ.
NAAC, NBA, AMBA, AACSB, CRISIL ಹಾಗೂ ISO 9001:2015 ಸೇರಿದಂತೆ ವಿವಿಧ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಗುಣಮಟ್ಟದ ಮಾನ್ಯತೆ ವ್ಯವಸ್ಥೆಗಳಲ್ಲಿ ಅನುಭವ ಹೊಂದಿದ್ದಾರೆ.
150ಕ್ಕೂ ಹೆಚ್ಚು ಸಂಶೋಧನಾ ಲೇಖನಗಳ ಪ್ರಕಟಣೆ
ಶೈಕ್ಷಣಿಕ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿರುವ ಅವರು 11 ಪಠ್ಯಪುಸ್ತಕಗಳನ್ನು ರಚಿಸಿದ್ದು, 23ಕ್ಕೂ ಹೆಚ್ಚು ಪುಸ್ತಕ ಅಧ್ಯಾಯಗಳಿಗೆ ಕೊಡುಗೆ ನೀಡಿದ್ದಾರೆ. ಪರಿಶೀಲಿತ ಸಂಶೋಧನಾ ನಿಯತಕಾಲಿಕೆಗಳಲ್ಲಿ 150ಕ್ಕೂ ಹೆಚ್ಚು ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದಾರೆ. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಮ್ಮೇಳನಗಳಲ್ಲಿ 70ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ್ದಾರೆ. ಅಲ್ಲದೆ, ಆರು ಪೇಟೆಂಟ್ಗಳು ಮಂಜೂರಾಗಿವೆ.
ಮಾನ್ಯತೆ ಪಡೆದ ಸಂಶೋಧನಾ ಮಾರ್ಗದರ್ಶಕರಾಗಿರುವ ಅವರು, 10 ಸಂಶೋಧನಾ ವಿದ್ಯಾರ್ಥಿಗಳಿಗೆ ಪಿಎಚ್.ಡಿ. ಪದವಿ ಪಡೆಯಲು ಮಾರ್ಗದರ್ಶನ ನೀಡಿದ್ದಾರೆ. ನವೀನ ಬೋಧನಾ ವಿಧಾನಗಳ ಕುರಿತು 46 ಕಾರ್ಯಾಗಾರಗಳು, ಸಂಶೋಧನಾ ವಿಧಾನಶಾಸ್ತ್ರದ ಕುರಿತು 30ಕ್ಕೂ ಹೆಚ್ಚು ಕಾರ್ಯಾಗಾರಗಳು ಹಾಗೂ 36ಕ್ಕೂ ಹೆಚ್ಚು ಅತಿಥಿ ಉಪನ್ಯಾಸಗಳನ್ನು ನೀಡಿದ್ದಾರೆ.
ದೂರದರ್ಶನ ಚರ್ಚೆಗಳಲ್ಲೂ ಸಕ್ರಿಯ
ಶೈಕ್ಷಣಿಕ ಕ್ಷೇತ್ರದ ಜೊತೆಗೆ ಆರ್ಥಿಕ ಮತ್ತು ವ್ಯವಹಾರಿಕ ವಿಚಾರಗಳ ಕುರಿತ ಚರ್ಚೆಗಳಲ್ಲೂ ಅವರು ಗುರುತಿಸಿಕೊಂಡಿದ್ದಾರೆ. ಕೇಂದ್ರ ಹಾಗೂ ರಾಜ್ಯ ಬಜೆಟ್, ಆರ್ಥಿಕ ನೀತಿಗಳು ಮತ್ತು ವ್ಯವಹಾರ ತಂತ್ರಗಳ ಕುರಿತು ಕನ್ನಡ ಸುದ್ದಿ ವಾಹಿನಿಗಳಲ್ಲಿ 60ಕ್ಕೂ ಹೆಚ್ಚು ನೇರ ಚರ್ಚೆಗಳಲ್ಲಿ ತಜ್ಞರಾಗಿ ಭಾಗವಹಿಸಿದ್ದಾರೆ.
ಹಿಂದೂ ಕಾಲಗಣನೆಯ ದೀರ್ಘ ಕಾಲಘಟ್ಟಕ್ಕೆ ಸಂಬಂಧಿಸಿದ ಕಾರ್ಯಕ್ಕೆ ಗಿನ್ನೆಸ್ ವಿಶ್ವ ದಾಖಲೆಗಳ ಮಾನ್ಯತೆ ಹಾಗೂ ಅತ್ಯಂತ ಹಳೆಯ ಲೋಹದ ನಾಣ್ಯಕ್ಕೆ ಸಂಬಂಧಿಸಿದ ಸಂಶೋಧನೆಗೆ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ಮಾನ್ಯತೆ ದೊರೆತಿದೆ. ಸ್ಕೌಟ್ಸ್ ಕ್ಷೇತ್ರದಲ್ಲಿ ರಾಜ್ಯ ಪುರಸ್ಕಾರ ಮತ್ತು ರಾಷ್ಟ್ರಪತಿ ಪುರಸ್ಕಾರಗಳಿಗೂ ಭಾಜನರಾಗಿದ್ದಾರೆ.
ಜವಾಬ್ದಾರಿಯುತ ನಾಗರಿಕರನ್ನು ರೂಪಿಸುವ ಗುರಿ
ನೇಮಕಾತಿ ಕುರಿತು ಮಾತನಾಡಿದ ಡಾ. ಹೇಮಂತ್ ಕುಮಾರ್ ಎಸ್. ಅವರು, ಸೇವೆ, ಜ್ಞಾನ ಮತ್ತು ಸಾಮಾಜಿಕ ಜವಾಬ್ದಾರಿಯ ಮೌಲ್ಯಗಳಲ್ಲಿ ಬೇರೂರಿರುವ ಎಸ್ಡಿಎಂಇ ಸೊಸೈಟಿಯೊಂದಿಗೆ ಕಾರ್ಯನಿರ್ವಹಿಸುವ ಅವಕಾಶ ದೊರೆತಿರುವುದು ಗೌರವದ ವಿಷಯವಾಗಿದೆ. ಶೈಕ್ಷಣಿಕ ಉತ್ಕೃಷ್ಟತೆಯನ್ನು ಬಲಪಡಿಸುವುದು, ನಾವೀನ್ಯತೆಯನ್ನು ಉತ್ತೇಜಿಸುವುದು ಹಾಗೂ ಆಧುನಿಕ ತಂತ್ರಜ್ಞಾನಗಳನ್ನು ಶಿಕ್ಷಣದೊಂದಿಗೆ ಸಮರ್ಥವಾಗಿ ಸಂಯೋಜಿಸುವ ನಿಟ್ಟಿನಲ್ಲಿ ಸಂಸ್ಥೆಯ ನಾಯಕತ್ವ, ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಮತ್ತು ಬೋಧಕ ವರ್ಗದವರೊಂದಿಗೆ ಕಾರ್ಯನಿರ್ವಹಿಸುವುದಾಗಿ ತಿಳಿಸಿದರು.
ವಿದ್ಯಾರ್ಥಿಗಳನ್ನು ಕೇವಲ ಉದ್ಯೋಗಕ್ಕೆ ಸಜ್ಜುಗೊಳಿಸುವುದಷ್ಟೇ ಅಲ್ಲದೆ, ಜವಾಬ್ದಾರಿಯುತ ನಾಗರಿಕರನ್ನಾಗಿ ರೂಪಿಸುವುದು ಮತ್ತು ಅವರಲ್ಲಿ ಜೀವನಪರ್ಯಂತ ಕಲಿಕೆಯ ಮನೋಭಾವ ಬೆಳೆಸುವುದು ತಮ್ಮ ಪ್ರಮುಖ ಆಶಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
