ಅಜೇಯ್ ರಾವ್ ಹಾಗೂ ಬೃಂದಾ ಆಚಾರ್ಯ ನಟನೆಯ ಪಾರ್ಟ್ನರ್ ಚಿತ್ರ ಈಗಾಗಲೇ ಎರಡೆರಡು ಹಾಡುಗಳ ಮೂಲಕ ಕಮಾಲ್ ಮಾಡಿದೆ. ಈಗಾಗಲೇ ಸೆನ್ಸಾರ್ ಪ್ರಕ್ರಿಯೆ ಮುಗಿದಿದ್ದು, ಯು/ಎ ಸರ್ಟಿಫಿಕೆಟ್ ದೊರಕಿದೆ.
ಕುನಾಲ್ ಗಾಂಜಾವಾಲ ಹಾಡಿರುವ ‘ಅಮೋರ’ ಹಾಗೂ ಲವಲವಿಕೆ ಹಾಡುಗಳಿಗೆ ಕೇಳುಗರಿಂದ ಮೆಚ್ಚುಗೆ ವ್ಯಕ್ತವಾಗಿದ್ದು, ಎರಡೂ ಹಾಡುಗಳೂ ಮಿಲಿಯನ್ಗೂ ಅಧಿಕ ಹಿಟ್ಸ್ ದಾಖಲಿಸಿದೆ. ಇದೇ ಖುಷಿಯಲ್ಲಿ ಸಿನಿಮಾವನ್ನು ಬಿಡುಗಡೆ ಮಾಡುವ ತಯಾರಿ ಮಾಡಿಕೊಳ್ಳುತ್ತಿದೆ ಚಿತ್ರತಂಡ. ಸಂಕ್ರಾಂತಿ ಹಬ್ಬಕ್ಕೆ ‘ಪಾರ್ಟ್ನರ್’ ಚಿತ್ರಮಂದಿರಗಳಿಗೆ ಆಗಮಿಸಲಿದೆ ಎಂದು ಚಿತ್ರತಂಡ ಖಚಿತಪಡಿಸಿದೆ. ‘ಪ್ರೇಮದ ಊರಲಿ’ ಮೂಲಕ ವಿತರಣಾ ಕ್ಷೇತ್ರದಲ್ಲಿ ಗಮನ ಸೆಳೆದಿರುವ ‘ಬಾಗೂರು ಟಾಕೀಸ್’ ಸಂಸ್ಥೆ ಮೂಲಕ ಪ್ರಶಾಂತ್ ಕರ್ನಾಟಕದಾದ್ಯಂತ ವಿತರಣೆಯ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
‘ಈಗಾಗಲೇ ಸಿನಿಮಾವನ್ನು ನೋಡಿದ್ದೇನೆ. ಕುಟುಂಬ ಸಮೇತ ಯಾವುದೇ ಮುಜುಗರವಿಲ್ಲದೇ ನೋಡಬಹುದಾದ ಚಿತ್ರ. ಹೊಸ ವರ್ಷಕ್ಕೆ ಕನ್ನಡ ಚಿತ್ರರಂಗದಲ್ಲಿ ‘ಪಾರ್ಟ್ನರ್’ ದೊಡ್ಡ ಮಟ್ಟದ ಕ್ರಾಂತಿ ಮಾಡಲಿದೆ. ಇತ್ತೀಚೆಗೆ ಫ್ಯಾಮಿಲಿ ಕಂಟೆಂಟ್ ಇರುವಂಥ ಸಿನಿಮಾಗಳನ್ನು ಪ್ರೇಕ್ಷಕರು ಇಷ್ಟಪಡುತ್ತಿದ್ದಾರೆ. ಹೀಗಾಗಿ ಪಾರ್ಟ್ನರ್ ಚಿತ್ರವನ್ನು ರಾಜ್ಯಾದ್ಯಂತ ಬಿಡುಗಡೆ ಮಾಡಲು ಮುಂದಾಗಿದ್ದೇನೆ’ ಎನ್ನುತ್ತಾರೆ ಪ್ರಶಾಂತ್ ಬಾಗೂರು.
ಶಿವತೇಜಸ್ ‘ಪಾರ್ಟ್ನರ್’ಗೆ ಆಕ್ಷನ್ ಕಟ್ ಹೇಳಿರುವ ಈ ಚಿತ್ರಕ್ಕೆ ಹೆಚ್.ಪಿ.ಆರ್ ಎಂಟರ್ಪ್ರೈಸಸ್ ಬ್ಯಾನರ್ ಅಡಿ ಹರೀಶ್ ದೇವಿತಂದ್ರೆ ನಿರ್ಮಿಸಿದ್ದಾರೆ.
ರಂಗಾಯಣ ರಘು, ಮೂಗು ಸುರೇಶ್, ಗೌರವ್ ಶೆಟ್ಟಿ, ಮನೋಹರ್ ಗೌಡ, ಚಿತ್ಕಲಾ, ಗಿರಿ ಶಿವಣ್ಣ, ಸುಷ್ಮಿತಾ ಗೌಡ, ಅರವಿಂದ ರಾವ್, ಶ್ರೀಭವ್ಯ ಹಾಗೂ ಮಧುಮತಿ ಸೇರಿದಂತೆ ಸಾಕಷ್ಟು ಕಲಾವಿದರ ದಂಡೇ ಈ ಚಿತ್ರದ ತಾರಾಗಣದಲ್ಲಿದ್ದಾರೆ. ‘ಲವ್ ಮಾಕ್ಟೇಲ್’ ಖ್ಯಾತಿಯ ನಕುಲ್ ಅಭಯಂಕರ್ ಸಂಗೀತ ಸಂಯೋಜಿಸಿರುವ ಈ ಸಿನಿಮಾಕ್ಕೆ ಸುಜ್ಞಾನ್ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನವಿದೆ.
-ಶ್ರೀಸಾಯಿ ಎಸ್ ಮಂಜು
