ತುಮಕೂರು: ತುಮಕೂರಿನ 26ನೇ ವಾರ್ಡಿನ ಎಸ್.ಐ.ಟಿ.ಬಡಾವಣೆಯ 1ನೇ ಕ್ರಾಸ್ನಲ್ಲಿರುವ ದೋಭಿಘಾಟ್ನಲ್ಲಿ ಮುಂದೆ ಇದ್ದ ಸ್ಮಶಾನ ಜಾಗದಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಿಸಿ ಮೂರು ವರ್ಷ ಕಳೆದರೂ ಇದುವರೆಗೂ ಜನರ ಬಳಕೆಗೆ ಅವಕಾಶ ಕಲ್ಪಿಸಿಲ್ಲ. ಶೌಚಾಲಯ ಕಟ್ಟಿಸಿದವರಿಗೆ ಅದನ್ನು ನಿರ್ಮಿಸಿದ ಉದ್ದೇಶವೇನೆಂಬುದು ಅರ್ಥವಾದಂತಿಲ್ಲ.
ತುಮಕೂರು ಮಹಾನಗರ ಪಾಲಿಕೆ,ಸ್ಮಾರ್ಟ್ಸಿಟಿ ಹಣದಲ್ಲಿ ಈ ಶೌಚಾಲಯವನ್ನು ಲಕ್ಷಾಂತರ ಹಣವನ್ನು ವ್ಯಯಿಸಿ ಖರ್ಚು ಮಾಡಿ ಕಾಮಗಾರಿ ಪೂರ್ಣಗೊಂಡು ಸುಮಾರು 3ವರ್ಷವಾದರೂ ಸಹ ಈವರೆವಿಗೂ ಸಾರ್ವಜನಿರಕ ಬಳಕೆಗೆ ಪಾಲಿಕೆಯವರು ಬೀಗ ತೆರಿದಿಲ್ಲ,ದಾರಿಹೋಕರು, ಅಕ್ಕಪಕ್ಕದ ಅಂಗಡಿಗಳ ವ್ಯಾಪಾರಿಗಳು, ದ್ವಿಚಕ್ರ ವಾಹನ ಸವಾರರು ದೋಭಿಘಾಟ್ನಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದರು. ಇದು ಗಬ್ಬು ವಾಸನೆ ಬರುತ್ತಿತ್ತು. ಪಾದಚಾರಿಗಳು ಮೂಗು ಮುಚ್ಚಿಕೊಂಡು ಓಡಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದನ್ನು ಮನಗಂಡ ತುಮಕೂರು ಮಹಾನಗರ ಪಾಲಿಕೆ ವತಿಯಿಂದ ಶೌಚಾಲಯ ನಿರ್ಮಿಸಲಾಗಿದೆ. ಕಟ್ಟಡ ಪೂರ್ಣಗೊಂಡ ದಿನದಿಂದಲೂ ಮುಚ್ಚಿದ ಬಾಗಿಲು ಮುಚ್ಚಿದಂತೆಯೇ ಇದೆ.
ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಶೌಚಾಲಯ ಕಟ್ಟಡ ನಿರ್ಮಾಣ ಮಾಡಲಾಗಿದೆಯಾದರೂ ಅದು ಬಳಕೆಗೆ ಬಾರದೆ ವ್ಯರ್ಥವಾಗಿ ಬಿದ್ದಿದೆ. ಶೌಚಾಲಯ ನಿರ್ಮಾಣಕ್ಕೆ ಎಷ್ಟು ಹಣ ವೆಚ್ಚ ಮಾಡಲಾಗಿದೆ. ಕಟ್ಟಿದ ವರ್ಷ ಯಾವುದು. ಯಾವ ಯೋಜನೆಯಡಿಲ್ಲಿ ಶೌಚಾಲಯ ನಿರ್ಮಾಣ ಮಾಡಲಾಗಿದೆ. ಉದ್ಘಾಟಿಸಿದ ದಿನಾಂಕ, ಉದ್ಘಾಟಿಸಿದವರ ಹೆಸರು ಯಾವುದನ್ನೂ ಶೌಚಾಲಯ ಕಟ್ಟಡದ ಮೇಲೆ ನಮೂದಿಸಿಲ್ಲ.

ನಗರದಲ್ಲಿ ಶೌಚಾಲಯಗಳೇ ಇರಲಿಲ್ಲ. ಸ್ಮಾರ್ಟ್ಸಿಟಿ ಯೋಜನೆ ಜಾರಿಗೆ ಬಂದ ಮೇಲೆ ಕೆಲವೊಂದು ಕಡೆ ಶೌಚಾಲಯ ನಿರ್ಮಾಣ ಮಾಡಿ ಪೇ ಅಂಡ್ ಯೂಸ್ ವ್ಯವಸ್ಥೆ ಮಾಡಲಾಗಿದೆ.ಹಿಂದೆ ಸ್ಮಶಾನವಾಗಿದ್ದ ದೋಭಿಘಾಟ್ ಜಾಗದಲ್ಲಿ ಕಟ್ಟಡಗಳ ನಿರ್ಮಾಣ ಮಾಡಿದೆ. ಪೌರಕಾರ್ಮಿಕರ ವಿಶ್ರಾಂತಿ ಗೃಹ ಇದ್ದರೂ ಅಲ್ಲಿ ಯಾವ ಪೌರ ಕಾರ್ಮಿಕರು ವಿಶ್ರಾಂತಿ ಪಡೆಯುತ್ತಿಲ್ಲ. ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಕಟ್ಟಡ ನಿರ್ಮಾಣ ಮಾಡಿದ್ದರೂ ಅದನ್ನು ಸಹ ಬಳಕೆಗೆ ಅವಕಾಶ ನೀಡಿಲ್ಲ. ಶೌಚಾಲಯದ ವ್ಯವಸ್ಥೆಯೂ ಅದೇ ರೀತಿ ಆಗಿದೆ.ಆದ್ದರಿಂದ ಹಿರಿಯ ನಾಗರೀಕರು,ದೋಭಿಘಾಟ್ ನಲ್ಲಿ ಬಟ್ಟೆಹೊಗೆಯುವ ಅಗಸರು,ದ್ವಿಚಕ್ರವಾಹನ ಸವಾರರು,ಸಾರ್ವಜನಿಕರು ಮತ್ತು ಅಕ್ಕಪಕ್ಕದಲ್ಲಿರುವ ನರ್ಸಿಂಗ್ ಹೋಂಗೆ ಬರುವ ರೋಗಿಗಳು ಮತ್ತು ಅವರ ಸಂಬಂಧಿಕರು ತಕ್ಷಣವೇ ಪಾಲಿಕೆ ಅಧಿಕಾರಿಗಳು ಸದರಿ ಶೌಚಾಲಯದ ಬೀಗ ತೆರೆದು ಸಾರ್ವಜನಿಕರ ಸೇವೆಗೆ ಒದಗಿಸಬೇಕೆಂದು ಆಗ್ರಹಿಸಿದ್ದಾರೆ.
ವಿಶೇಷ ವರದಿ:ಕೆ.ಬಿ.ಚಂದ್ರಚೂಡ
