ತುಮಕೂರು: ನಗರ ಪ್ರದೇಶಗಳ ಮಕ್ಕಳಿಗೆ ಹೊಲಿಕೆ ಮಾಡಿದರೆ, ಹಳ್ಳಿಗಾಡಿನ ಮಕ್ಕಳು ಅತ್ಯಂತ ಧೈರ್ಯ ಶಾಲಿಗಳು, ಆತ್ಮವಿಶ್ವಾಸ ಉಳ್ಳವರು.ಇಂಗ್ಲೀಷ್ ಬರಲ್ಲ, ಇನ್ನಿತರ ಅಡೆ, ತಡೆಗಳನ್ನು ಮೆಟ್ಟಿನಿಂತರೇ, ಸಾಧನೆಯ ಶಿಖರ ನಿಮ್ಮದಾಗಲಿದೆ ಎಂದು ಕೌಶಲ್ಯಾಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಹಾಗೂ ಹಾಲಪ್ಪ ಪ್ರತಿಷ್ಠಾನ ಅಧ್ಯಕ್ಷ ಮುರಳೀಧರ ಹಾಲಪ್ಪ ಪ್ರತಿಪಾದಿಸಿದ್ದಾರೆ.ಂನಗರದ ತುಮಕೂರು ವಿವಿ ಸರ್.ಎಂ.ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ತುಮಕೂರು ವಿವಿ ಐಕ್ಯೂಎಸಿ ಘಟಕ,ಎಲ್ಲಾ ಪದವಿ ಕಾಲೇಜುಗಳ ಸಹಕಾರದೊಂದಿಗೆ,ಹಾಲಪ್ಪ ಪ್ರತಿಷ್ಠಾನ ಆಯೋಜಿಸಿದ್ದ ಎರಡು ದಿನಗಳ ಸ್ಪರ್ಧಾತ್ಮಕ ಪರೀಕ್ಷೆಗಳ ಮಾರ್ಗದರ್ಶನ ಕಾರ್ಯಾಗಾರದಲ್ಲಿ ಕೈಪಿಡಿ ಬಿಡುಗಡೆ ಮಾಡಿ,ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡುತಿದ್ದ ಅವರು, ಇಂದು ವೃತ್ತಿ ನಿರತ ಐಎಎಸ್,ಐಪಿಎಸ್, ಕೆ.ಎ.ಎಸ್ ಅಧಿಕಾರಿಗಳಲ್ಲಿ ಬಹುತೇಕರು ಗ್ರಾಮೀಣ ಹಿನ್ನೆಲೆಯಿಂದ, ಕನ್ನಡ ಮಾಧ್ಯಮದಿಂದ ಬಂದವರು.ಇದನ್ನು ಅರ್ಥಮಾಡಿಕೊಂಡು, ಅಡೆ, ತಡೆಗಳನ್ನು ಮೆಟ್ಟಿನಿಲ್ಲುವ ಮೂಲಕ ನಿಮ್ಮ ಪೋಷಕರ ಮಹಾದಾಸೆಯನ್ನು ಈಡೇರಿಸಲು ಮುಂದಾಗಿ ಎಂದರು.
ನಾನು ಕೌಶಲ್ಯಾಭಿವೃದ್ದಿ ಮಂಡಳಿ ಅಧ್ಯಕ್ಷನಾಗಿದ್ದ ಸಂದರ್ಭದಲ್ಲಿ ನಡೆದ ಬಹುತೇಕ ಉದ್ಯೋಗ ಮೇಳಗಳಿಗೆ ಸಾವಿರಾರು ಜನ ಪದವಿಧರರು ಬರುತ್ತಿದ್ದರು,ಆದರೆ ಆಯ್ಕೆಯಾಗುತಿದ್ದವರ ಸಂಖ್ಯೆ ತೀರ ಕಡಿಮೆ.ಇದಕ್ಕೆ ಪ್ರಮುಖ ಕಾರಣ ಕಮ್ಯುನಿಕೇಷನ್ ಸ್ಕಿಲ್,ಪ್ರಜೆಂಟೇಷನ್ನ ಕೊರತೆ.ವಿಷಯದ ಬಗ್ಗೆ ತಿಳುವಳಿಕೆಯಿದ್ದರೂ ಅದನ್ನು ನಾಲ್ವರ ಮುಂದೆ ಧೈರ್ಯವಾಗಿ ಹೇಳುವಲ್ಲಿ ಇರುವ ಭಾಷೆಯ ಹಿಂಜರಿಕೆ. ಈ ಕೊರತೆ ನೀಗಿಸುವ ನಿಟ್ಟಿನಲ್ಲಿ ಜೊತೆಗೆ, ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ,ಪರೀಕ್ಷೆ ವಿಧಾನ ಇವುಗಳ ಬಗ್ಗೆ ತಿಳುವಳಿಕೆಯನ್ನು ಈಗಾಗಲೇ ಕ್ಷೇತ್ರದಲ್ಲಿಯೇ ಕೆಲಸ ಮಾಡುತ್ತಿರುವ ನುರಿತ ಮಾರ್ಗದರ್ಶಕರಿಂದ ಮನದಟ್ಟು ಮಾಡಿಸುವುದು ಈ ಕಾರ್ಯಾಗಾರದ ಉದ್ದೇಶ ಎಂದು ಮುರುಳೀಧರ ಹಾಲಪ್ಪ ನುಡಿದರು.

ತುಮಕೂರು 10 ತಾಲೂಕುಗಳನ್ನು ಹೊಂದಿರುವ ದೊಡ್ಡಜಿಲ್ಲೆ. ಬೇರೆ ಜಿಲ್ಲೆಗಳಿಗೆ ಹೊಲಿಕೆ ಮಾಡಿದರೆ ಐಎಎಸ್, ಕೆಎಎಸ್ ಅಧಿಕಾರಿಗಳ ಸಂಖ್ಯೆ ಕಡಿಮೆ.ಜಿಲ್ಲೆಯ 18 ಜನ ಐಎಎಸ್, 40ಕ್ಕೂ ಹೆಚ್ಚು ಜನ ಕೆ.ಎ.ಎಸ್ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ.ಇವರ ಸಂಖ್ಯೆ ಹೆಚ್ಚಾಗಬೇಕು ಎಂಬುದು ಈ ಕಾರ್ಯಗಾರದ ಹಿಂದಿನ ಉದ್ದೇಶ.ಯುಪಿಎಸ್ಸಿ ಮುಖ್ಯ ಪರೀಕ್ಷೆಗೆ ಬರುವ ವಿದ್ಯಾರ್ಥಿಗಳಿಗೆ ಅಗತ್ಯ ಸೌಲಭ್ಯವನ್ನು ಹಾಲಪ್ಪ ಪ್ರತಿಷ್ಠಾನ ನೀಡಲಿದೆ. ದೆಹಲಿಯಲ್ಲಿ ಇದಕ್ಕಾಗಿ ಒಂದು ತಂಡ ಕೆಲಸ ಮಾಡುತ್ತಿದೆ.ಕಾರ್ಯಗಾರಕ್ಕೆ ಬಂದಿರುವ 600ಕ್ಕೂ ಹೆಚ್ಚು ಮಕ್ಕಳಲ್ಲಿ ಓರ್ವ ಐಎಎಸ್,ಐಪಿಎಸ್, ಕೆ.ಎ.ಎಸ್ ಅಧಿಕಾರಿಯಾದರೂ ನಮ್ಮ ಪ್ರಯತ್ನ ಫಲಿಸಿದಂತೆ. ಹಾಗಾಗಿ ಎರಡು ದಿನಗಳ ಈ ಕಾರ್ಯಗಾರದಲ್ಲಿ ನಿಮ್ಮ ಮೊಬೈಲ್, ರೀಲ್ಸ್, ಸೋಷಿಯಲ್ ಮೀಡಿಯಾ ಬದಿಗಿಟ್ಟು, ಭವಿಷ್ಯದಕಡೆಗೆ ಗಮನಹರಿಸಿ ಎಂದು ಮುರುಳೀಧರ ಹಾಲಪ್ಪ ಕಿವಿ ಮಾತು ಹೇಳಿದರು.
ತುಮಕೂರು ವಿವಿ ಐಕ್ಯೂಎಸಿ ನಿರ್ದೇಶಕ,ಕಲಾ ನಿಕಾಯದ ಮುಖ್ಯಸ್ಥ ಹಾಗೂ ಸ್ನಾತಕೋತ್ತರ ಸಮಾಜಕಾರ್ಯ ವಿಭಾಗದ ಮುಖ್ಯಸ್ಥ ಡಾ.ಕೆ.ಜಿ.ಪರುಶುರಾಮ್ ಪ್ರಸ್ತಾವಿಕ ನುಡಿಗಳನ್ನಾಡಿದರು,ಸ್ಪರ್ಧಾತ್ಮಕ ಪರೀಕ್ಷೆಗಳ ಆಕಾಂಕ್ಷಿಗಳಿಗೆ ಇನ್ಸ್ಫೈರನ ಆರ್.ಉಪೇಂದ್ರಶೆಟ್ಟಿ, ಕೃಷಿಕ ಸರ್ವೋದಯ ಫೌಂಡೇಷನ್ನ ಗೋಪಾಲಕೃಷ್ಣ ಮೂರ್ತಿ, ಇನ್ಸೈಟ್ನ ತೇಜಸ್, ಭಾರತೀಯ ಇತಿಹಾಸ ಕುರಿತು ಶರಣ್ಯ ಬಂಡಾರಿ ಮಠ್, ನೆಲ್ನುಡಿ ಪತ್ರಿಕೆಯ ಸಂಪಾದಕ ಪ್ರಸನ್ನ ಅವರುಗಳು ಯುಪಿಎಸ್ಸಿ, ಕೆ.ಎ.ಎಸ್, ಎಫ್.ಡಿ.ಎ, ಎಸ್.ಡಿ.ಎ, ಕೆ.ಇ.ಎ, ಎಸ್.ಎಸ್.ಸಿ ಮತ್ತು ಆರ್.ಆರ್.ಬಿ ಸೇರಿದಂತೆ ಹಲವು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸುವುದು, ಪಠ್ಯಕ್ರಮ, ಪರೀಕ್ಷಾ ವಿಧಾನ,ಸಂದರ್ಶನ ಹೇಗೆ ಎಂಬ ಮಾಹಿತಿ ನೀಡಿದರಲ್ಲದೆ, ಸಂವಾದದಲ್ಲಿ ಪಾಲ್ಗೊಂಡು ಸ್ಪರ್ಧಾಕಾಂಕ್ಷಿಗಳ ಪ್ರಶ್ನೆಗಳಿಗೆ ಉತ್ತರಿಸಿ,ಹುರಿದುಂಬಿಸಿದರು.
– ಚಂದ್ರಚೂಡ ಕೆ.ಬಿ.
