ದೇವಪ್ಪ ಹೇಳಿದ ದಾರಿಯಲ್ಲೇ ಸ್ವಲ್ಪ ದೂರ ನಡೆದ ನನಗೆ ದಟ್ಟ ಅರಣ್ಯವೊಂದು ಎದುರಾಯಿತು. ಆಕಾಶದೆತ್ತರಕ್ಕೆ ತಲೆ ಎತ್ತಿ ನಿಂತಿದ್ದ ಮರಗಳು, ಇನ್ನೂ ಬೆಳಗಿನ ಇಬ್ಬನಿಯ ಹನಿಗಳನ್ನು ಅಷ್ಟೆತ್ತರದಿಂದ ಥಟ್ ಥಟ್ ಎಂದು ಬೀಳಿಸುತ್ತಿದ್ದವು. ಚಿಕ್ಕ ಕಾಲುದಾರಿಯೊಂದು ಹಳ್ಳದವರೆಗೆ ಕಾಣುತ್ತಿತ್ತು. ಅದರಲ್ಲೇ ಮುಂದುವರಿದಂತೆ ನನಗೆ ದೊಡ್ಡ ಹಳ್ಳದ ದಡದಲ್ಲಿದ್ದ ಬೃಹತ್ ಬಂಡೆಗಳು ಎದುರಾದವು. ಹಳ್ಳದ ನೀರಿನಲ್ಲಿ ಮುಖ ತೊಳೆದುಕೊಂಡು, ಬಂಡೆಗಳ ನಡುವೆ ದಾರಿ ಮಾಡಿಕೊಂಡು ವಿಸ್ತಾರವಾದ ಕಲ್ಲೊಂದನ್ನು ಏರಿ ತಲೆ ಎತ್ತಿದಾಗ ಕಂಡದ್ದು, ಕಲ್ಲಿನ ಬೃಹದಾಕಾರದ ಕಂಬಗಳ ಸೇತುವೆಯ ಮೇಲೆ ಗಾಂಭೀರ್ಯದಿಂದ ಪವಡಿಸಿದ್ದ ರೈಲು ಹಳಿಗಳು.
ನಮ್ಮ ಚಾರಣದ ಎರಡನೆಯ ದಿನವದು. ನಾವು ತಂಗಬೇಕಿದ್ದ ಎಡಕುಮರಿ ರೈಲು ನಿಲ್ದಾಣದ ಪಾಳುಬಿದ್ದ ಕಟ್ಟಡವನ್ನು ಸಂಜೆ ಕತ್ತಲಾಗುತ್ತಾ ಬಂದರೂ ತಲುಪಲಾಗಿರಲಿಲ್ಲ. ಅಂದು ಮಧ್ಯಾಹ್ನ ನಮ್ಮ ತಂಡದಲ್ಲಿದ್ದ ಮಧ್ಯವಯಸ್ಕರೊಬ್ಬರಿಗೆ ಹಿಮ್ಮಡಿ ನೋವು ಕಾಣಿಸಿಕೊಂಡಿತ್ತು. ಯಾರನ್ನೂ ಹಿಂದೆ ಬಿಟ್ಟು ಇತರರು ಮುಂದೆ ಹೋಗುವಂತಿರಲಿಲ್ಲ.
ಹಾದಿಯಲ್ಲಿನ ರೈಲ್ವೆ ಕಂಬಿಗಳು ಮುಚ್ಚಿಹೋಗುವಂತೆ ಕಾಡುಸಸ್ಯಗಳು ಹಾಗೂ ಸಣ್ಣ ಗಾತ್ರದ ಮರಗಳು ಬೆಳೆದು ನಿಂತಿದ್ದವು. ಹಲವೆಡೆ ಬಳ್ಳಿಗಳು ಇಡೀ ರೈಲು ಸೇತುವೆಯನ್ನೇ ಆವರಿಸಿಕೊಂಡಿದ್ದವು. ಕಂಬಿಗಳ ಸಂದಿಯಲ್ಲಿ ಈವರೆಗೂ ಕಂಡಿರದಂಥ ಹಾವುಗಳು ಸುರುಳಿ ಸುತ್ತಿಕೊಂಡೋ, ಸಳಸಳನೆ ಹರಿದಾಡಿಕೊಂಡೋ ಗಾಬರಿ ಹುಟ್ಟಿಸುತ್ತಿದ್ದವು. ಪ್ರತಿಯೊಂದು ಹೆಜ್ಜೆಯನ್ನೂ ಅತೀವ ಎಚ್ಚರಿಕೆ ಹಾಗೂ ಆತಂಕದಿಂದ ಇಡಬೇಕಿತ್ತು.
ರೈಲು ಮಾರ್ಗದ ಮೇಲೆಯೇ ನಡೆಯಬೇಕಿದ್ದರಿಂದ ಒಂದು ನಿರ್ದಿಷ್ಟ ಅಂತರದ ನಡಿಗೆಯನ್ನೇ ಪಾಲಿಸಬೇಕಿತ್ತು. ರೈಲು ಹಳಿಗಳ ಕೆಳಗೆ ಕೊಳೆತು ಲದ್ದಿಯಾಗಿದ್ದ ಮರದ ಪಟ್ಟಿಗಳು, ಆ ಮರದ ಪಟ್ಟಿಗಳ ಸಂದಿಯಲ್ಲಿ ಅಡಗಿರಬಹುದಾದ ಚೇಳು-ಹಾವುಗಳು ನಗರದಿಂದ ಚಾರಣಕ್ಕೆ ಬಂದವರಿರಲಿ, ಹಳ್ಳಿಗಾಡಿನ ನನ್ನಂಥವನನ್ನೂ ದಿಗಿಲಿಗೆ ನೂಕಿದ್ದವು.

ನಮ್ಮ ನಡಿಗೆಯ ಸದ್ದಿಗೆ ಆ ವಿಷಜಂತುಗಳು ದೂರ ಹೋಗಲಿ ಎಂದು ಹೆಜ್ಜೆಯನ್ನು ಎತ್ತಿ ಎತ್ತಿ ದಢ್ದಢ್ ಎಂದು ನೆಲಕ್ಕೆ ಬಡಿಯುತ್ತಿದ್ದೆವು. ಮಾರುದ್ದದ ಕೋಲಿನಿಂದ ರೈಲ್ವೆ ಕಂಬಿಯನ್ನು ಕುಟ್ಟಿ ಸದ್ದು ಮಾಡುತ್ತಾ ಸಾಗುತ್ತಿದ್ದೆವು.
ಅಲ್ಲಲ್ಲಿ ಸಿಗುತ್ತಿದ್ದ ಸುರಂಗಗಳು ನಮ್ಮ ಆತಂಕ ಹಾಗೂ ಭಯವನ್ನು ಇನ್ನಷ್ಟು ಹೆಚ್ಚಿಸುತ್ತಿದ್ದವು. ನೂರಾರು ಮೀಟರ್ ಉದ್ದವಿದ್ದ ಸುರಂಗಗಳು ಕತ್ತಲೆಯ ಕೂಪಗಳಾಗಿದ್ದವಲ್ಲದೆ, ಸಾವಿರಾರು ಬಾವಲಿಗಳ ಆಶ್ರಯತಾಣಗಳೂ ಆಗಿದ್ದವು. ಬೆಟ್ಟಗುಡ್ಡಗಳ ನೂರಾರು ಅಡಿ ತಳದಲ್ಲಿ ಭೂಗರ್ಭದೊಳಗೆ ಹಾದುಹೋಗುವ ಈ ಸುರಂಗಗಳೊಳಗೆ ಒಮ್ಮೆ ನುಸುಳಿ ನಡೆದರೆ ಹೊರಬರಲು ಹತ್ತು ನಿಮಿಷದಿಂದ ಇಪ್ಪತ್ತೈದು ನಿಮಿಷಗಳೇ ಬೇಕಾಗುತ್ತಿದ್ದವು.
ಬಾವಲಿಗಳ ಉಚ್ಚಿಷ್ಟದ ಮುಗ್ಗಲು ವಾಸನೆ, ಸುರಂಗದ ಮೇಲ್ಭಾಗದಿಂದ ಥಟ್ ಥಟ್ಟೆಂದು ಜಿನುಗುವ ನೀರ ಹನಿಗಳು, ಸುರಂಗದ ಒಳಭಾಗದ ಎರಡೂ ಮಗ್ಗುಲಲ್ಲಿನ ಚರಂಡಿಯಲ್ಲಿ ಹರಿಯುವ ತೆಳುವಾದ ನೀರಿನ ಹರಿವು, ಕಂಬಿಗಳ ಸಂದಿಯಲ್ಲಿ ಸುತ್ತಿಕೊಂಡು ಮಲಗಿರಬಹುದಾದ ಉರಗಗಳು, ಇನ್ನೇನು ಮುಖಕ್ಕೇ ಬಡಿದೇ ಬಿಡುತ್ತವೆ ಎಂಬಂತೆ ಗಾಬರಿ ಹುಟ್ಟಿಸುವ ಬಾವಲಿಗಳು, ದೂರದಲ್ಲೆಲ್ಲೋ ಸುರಂಗದ ಕೊನೆ ಇದೆ ಎಂಬುದಕ್ಕೆ ಭರವಸೆಯಾಗಿ ಕಾಣುವ ಕ್ಷೀಣವಾದ ಬೆಳಕು… ನಮ್ಮ ದನಿಯೇ ನಮಗೆ ಅಪರಿಚಿತವಾಗಿಬಿಡುವ ನೀರವ ಕತ್ತಲು… ಸುರಂಗದೊಳಗೆ ಹೊಕ್ಕೊಡನೆ ಸುರಂಗದ ಎರಡೂ ಬದಿಯ ಬೆಟ್ಟಗಳು ಜರುಗಿದರೆ ಶಾಶ್ವತವಾಗಿ ಜೀವಂತ ಸಮಾಧಿಯಾಗುವ ಭೀಭತ್ಸ ಕಲ್ಪನೆಯ ಭಯವಿಹ್ವಲತೆ!
ಅಂತೂ ಇಂತೂ ಅಂದು ತಂಗಲು ನಿಗದಿಯಾಗಿದ್ದ ಪಾಳುಬಿದ್ದ ರೈಲ್ವೆ ನಿಲ್ದಾಣವನ್ನು ತಲುಪಿದಾಗ ಕತ್ತಲು ಕವಿದಿತ್ತು. ಅತ್ತ ಸಂಜೆಯೂ ಅಲ್ಲದ, ಇತ್ತ ರಾತ್ರಿಯೂ ಅಲ್ಲದ ಏಳೂಕಾಲು ಗಂಟೆಯಾಗಿತ್ತು. ನಮ್ಮ ಚಾರಣ ನಿರ್ದೇಶಕರ ಲೆಕ್ಕಾಚಾರ ತಪ್ಪಿಹೋಗಿ, ಚಾರಣಿಗರೆಲ್ಲರೂ ಒಂದು ಸಲ ತಂಗುವ ಸ್ಥಳ ತಲುಪಿದರೆ ಸಾಕೆಂದು ಹಲ್ಲುಮುಡಿ ಕಚ್ಚಿ, ಆ ಮಬ್ಬುಗತ್ತಲಲ್ಲೇ ಅಸಡಾಬಸಡಾ ಹೆಜ್ಜೆ ಹಾಕುತ್ತಾ, ತತ್ತರಿಸುತ್ತ ನಡೆದು ಹೈರಾಣಾಗಿದ್ದೆವು.

ವರ್ಷಗಳ ಕಾಲ ಯಾರೂ ಓಡಾಡದೆ ನಿರ್ಮಾನುಷವಾಗಿದ್ದ ರೈಲು ನಿಲ್ದಾಣ ಭೂತಬಂಗಲೆಯನ್ನು ನೆನಪಿಸುತ್ತಿತ್ತು. ನೆಲದ ಸಿಮೆಂಟ್ ಕಿತ್ತುಹೋಗಿದ್ದ ಜಾಗಗಳಲ್ಲಿ ಆಳೆತ್ತರದ ಕಾಡುಗಿಡಗಳು ಬೆಳೆದಿದ್ದವು. ಕುಂಭದ್ರೋಣ ಮಳೆಯಾಗುವ ಪ್ರದೇಶವಾದ್ದರಿಂದ ಗೋಡೆಗಳ ಮೇಲೂ ರತ್ನಗಂಬಳಿಯನ್ನು ನೆನಪಿಸುವಷ್ಟು ದಪ್ಪನೆಯ ಪಾಚಿಯ ಹೊದಿಕೆ ಆವರಿಸಿತ್ತು. ಆ ಹಸಿರು ಹೊದಿಕೆಯ ಮೇಲೆ ನಯವಾಗಿ ತೆವಳುತ್ತಾ ಹರಿದಾಡುವ ಚಿತ್ರವಿಚಿತ್ರ ಎಳನಾಗರ ಮಾದರಿಯ ಹುಳುಗಳು, ನಿಲ್ದಾಣದ ನೆಲಕ್ಕಂಟಿಕೊಂಡಿದ್ದ ಕೌದಿಯಷ್ಟು ದಪ್ಪದ ಪರ್ಣಹಾಸು, ಅಲ್ಲೆಲ್ಲೋ ಮೂಲೆಯಲ್ಲಿದ್ದ ಪ್ರಯಾಣಿಕರು ವಿಶ್ರಮಿಸಲು ಹಾಕಿದ್ದ ತುಕ್ಕು ಹಿಡಿದು ಸೊರಗಿದ್ದ ಕಬ್ಬಿಣದ ಒರಗು ಬೆಂಚಿನ ಕಾಲ ಬುಡದಲ್ಲಿ ಎಂದೋ ಕಳಚಿಹೋಗಿದ್ದ ಹಾವಿನ ಪೊರೆ…
ಹೀಗೆ ವಿಶ್ರಮಿಸಲು, ನಿದ್ರೆ ಮಾಡಲು ಹಾಗೂ ರಾತ್ರಿ ಕಳೆಯಲು ಯಾವುದೇ ರೀತಿಯಲ್ಲೂ ಪ್ರಶಸ್ತವಲ್ಲದ ಜಾಗದಲ್ಲಿ ಕ್ಯಾಂಪ್ ಮಾಡುವುದೆಂದು ತಂಡದ ನಾಯಕ ಆನಂದ್ ಹೇಳಿದಾಗ ಎಲ್ಲರಿಗೂ ದಿಗಿಲಾಯಿತು. ಸುತ್ತಮುತ್ತ ನೋಡಿದರೂ ಅದಕ್ಕಿಂತ ಸುರಕ್ಷಿತವಾದ ಪ್ರದೇಶ ಕಾಣದಿದ್ದುದರಿಂದ ಹಾಗೂ ಬೇರೊಂದು ಜಾಗ ಹುಡುಕಲು ಯಾರಿಗೂ ತಾಕತ್ತೂ ಉಳಿದಿರದಿದ್ದುದರಿಂದ ಎಲ್ಲರೂ ಗಪ್ಚುಪ್ ಆದೆವು.

