ಹಾಸನ: ರವಿ ಹಂಜ ಅವರು ತಮ್ಮ ಪುಸ್ತಕದಲ್ಲಿ ಹಾಗೂ ನಂತರದ ಹೇಳಿಕೆಗಳಲ್ಲಿ ವ್ಯಕ್ತಪಡಿಸಿರುವ ಆಕ್ಷೇಪಾರ್ಹ, ಅವಹೇಳನಕಾರಿ ಮತ್ತು ನೋವುಂಟುಮಾಡುವ ಅಭಿಪ್ರಾಯಗಳನ್ನು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ರಾಷ್ಟ್ರೀಯ ಯುವ ಅಧ್ಯಕ್ಷರು ಹಾಗೂ ವೈಯಕ್ತಿಕ ನೆಲೆಯಲ್ಲಿ ತೀವ್ರವಾಗಿ ಖಂಡಿಸಿದ್ದಾರೆ.
ವೀರಶೈವ ಲಿಂಗಾಯತ ಸಮುದಾಯವು ಜಗಜ್ಯೋತಿ ಶ್ರೀ ಬಸವಣ್ಣನವರ ಉದಾತ್ತ ತತ್ವಾದರ್ಶಗಳು ಮತ್ತು ಮಾನವೀಯ ಮೌಲ್ಯಗಳ ತಳಹದಿಯ ಮೇಲೆ ರೂಪುಗೊಂಡಿದೆ. ಸತ್ಯ, ಸಮಾನತೆ, ಕರುಣೆ ಮತ್ತು ಮಾನವ ಘನತೆಯನ್ನು ತಮ್ಮ ಬದುಕಿನ ಮೂಲಕವೇ ಸಾಕಾರಗೊಳಿಸಿದ ಬಸವಣ್ಣನವರ ಪರಂಪರೆಯನ್ನು ಗೌರವಿಸಿ, ಸಂರಕ್ಷಿಸಿ ಮುಂದಿನ ಪೀಳಿಗೆಗೆ ಕೊಂಡೊಯ್ಯುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಅವರು ತಿಳಿಸಿದ್ದಾರೆ.
ಮಹಾಸಭೆಯ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಈಶ್ವರ ಖಂಡ್ರೆ ಅವರು ಈಗಾಗಲೇ ಈ ಬೆಳವಣಿಗೆಯನ್ನು ಬಲವಾಗಿ ಖಂಡಿಸಿದ್ದು, ಸೂಕ್ತ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಸಕ್ರಿಯವಾಗಿ ಕಾರ್ಯಪ್ರವೃತ್ತರಾಗಿದ್ದಾರೆ. ಮಹಾಸಭೆಯ ವಿವಿಧ ಘಟಕಗಳು ರಾಜ್ಯಾದ್ಯಂತ ಪ್ರತಿಭಟನೆಗಳನ್ನು ಹಮ್ಮಿಕೊಂಡಿವೆ. ರಾಜ್ಯಾಧ್ಯಕ್ಷರಾದ ಶ್ರೀ ಶಂಕರ್ ಬಿದರಿ ಅವರೂ ರವಿ ಹಂಜ ಅವರ ಹೇಳಿಕೆಗಳನ್ನು ಖಂಡಿಸಿ, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ ಎಂದು ತಿಳಿಸಿದ್ದಾರೆ.
ಶಂಕರ್ ಬಿದರಿ ಅವರು ಹಲವು ದಶಕಗಳ ವೃತ್ತಿಪರ ಹಾಗೂ ವೈಯಕ್ತಿಕ ಸೇವೆ ಮತ್ತು ಸಾಧನೆಗಳ ಮೂಲಕ ಸಮಾಜದಲ್ಲಿ ಗೌರವಯುತ ಸ್ಥಾನಮಾನ ಗಳಿಸಿದ್ದಾರೆ. ಸಮುದಾಯದ ಬೆಳವಣಿಗೆಗೆ ಅವರ ಕೊಡುಗೆ ಅಪಾರವಾಗಿದೆ. ರವಿ ಹಂಜ ಅವರ ಪುಸ್ತಕದಲ್ಲಿರುವ ಆಕ್ಷೇಪಾರ್ಹ ವಿಚಾರಗಳ ಬಗ್ಗೆ ಯಾವುದೇ ಪೂರ್ವಭಾವಿ ಅರಿವಿಲ್ಲದೆ, ವಿಶ್ವಾಸ ಮತ್ತು ಸದುದ್ದೇಶದಿಂದ ಅವರು ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದ್ದರು ಎಂಬುದು ತಮ್ಮ ದೃಢ ನಂಬಿಕೆಯಾಗಿದೆ. ಪ್ರಸ್ತುತ ಬೆಳವಣಿಗೆಗಳಿಂದ ಬಿದರಿ ಅವರೂ ನೋವು ಮತ್ತು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ವೀರಶೈವ ಲಿಂಗಾಯತ ಸಮುದಾಯದ ಏಕತೆ, ಒಗ್ಗಟ್ಟು ಮತ್ತು ಸಾಮೂಹಿಕ ಹಿತಾಸಕ್ತಿಗಳನ್ನು ಕಾಪಾಡುವುದು ಮಹಾಸಭೆಯ ಪ್ರಮುಖ ಆಶಯವಾಗಿದೆ. ರವಿ ಹಂಜ ಅವರಿಗೆ ಸಂಬಂಧಿಸಿದ ಈ ವಿಚಾರದಲ್ಲಿ ಸೂಕ್ತ ಕಾನೂನು ಕ್ರಮಕ್ಕಾಗಿ ಎಲ್ಲ ಕಾನೂನುಬದ್ಧ ಮಾರ್ಗಗಳ ಮೂಲಕ ಹೋರಾಟ ಮುಂದುವರಿಸಲು ಮಹಾಸಭೆ ನಿರ್ಧರಿಸಿದೆ ಎಂದು ತಿಳಿಸಿದ್ದಾರೆ.
ಈಗಾಗಲೇ ನೀಡಲಾಗಿರುವ ಸ್ಪಷ್ಟೀಕರಣಗಳನ್ನು ಗೌರವಿಸಿ, ಎಲ್ಲರೂ ಸಂಯಮದಿಂದ ವರ್ತಿಸಬೇಕು. ವಿಷಯದ ಸಂಪೂರ್ಣ ವಾಸ್ತವಾಂಶಗಳನ್ನು ಅರಿತು ಜವಾಬ್ದಾರಿಯುತ ಹೇಳಿಕೆಗಳನ್ನು ನೀಡಬೇಕು. ಸಮುದಾಯವನ್ನು ಒಗ್ಗೂಡಿಸಲು ನಿರಂತರವಾಗಿ ಶ್ರಮಿಸಿದವರ ಪ್ರಯತ್ನಗಳನ್ನು ಕಡೆಗಣಿಸಬಾರದು ಅಥವಾ ದುರ್ಬಲಗೊಳಿಸಬಾರದು ಎಂದು ಅವರು ಮನವಿ ಮಾಡಿದ್ದಾರೆ.
ಜೈ ಬಸವ!
