ಕೊರಟಗೆರೆ: ತಾಲ್ಲೂಕಿನ ನೀಲಗೊಂಡನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಕೋಟೆ ಗ್ರಾಮದಲ್ಲಿರುವ ಏಳು ಮಂದಮ್ಮ ತಾಯಿ ಹಾಗೂ ಜಡೆ ಮುನೇಶ್ವರಸ್ವಾಮಿ ಸನ್ನಿಧಿಯಲ್ಲಿ ಕಾರ್ತಿಕ ಮಾಸದ ಪ್ರಯುಕ್ತ ಲಕ್ಷ ದೀಪೋತ್ಸವ ಕಾರ್ಯಕ್ರಮವನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಸುಮಾರು 30 ವರ್ಷಗಳ ಇತಿಹಾಸ ಹೊಂದಿರುವ ದೇವಾಲಯದಲ್ಲಿ ಗ್ರಾಮಸ್ಥರು ಹಾಗೂ ಭಕ್ತಾದಿಗಳ ಸಹಕಾರದೊಂದಿಗೆ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

ಬೆಳಗ್ಗೆಯಿಂದಲೇ ಏಳು ಮಂದಮ್ಮ ತಾಯಿಯ ಸನ್ನಿಧಿಯಲ್ಲಿ ಪುಷ್ಪಾರ್ಚನೆ, ಮಂಗಳಾರತಿ, ಹೋಮ-ಹವನ, ವಿಶೇಷ ಪೂಜೆ, ಹೂವಿನ ಅಲಂಕಾರ ಹಾಗೂ ದೀಪಾಲಂಕಾರ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು. ಬಳಿಕ ಮೆರವಣಿಗೆಯೊಂದಿಗೆ ಲಕ್ಷ ದೀಪೋತ್ಸವ ಕಾರ್ಯಕ್ರಮಕ್ಕೆ ಮೆರುಗು ನೀಡಲಾಯಿತು.

ಕಾರ್ಯಕ್ರಮಕ್ಕೆ ಬಾಳೆಹೊನ್ನೂರು ಖಾಸಾ ಶಾಖಾ ಮಠದ ಶ್ರೀ ಕ್ಷೇತ್ರ ಸಿದ್ದರಬೆಟ್ಟದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿಗಳು ಭೇಟಿ ನೀಡಿ ಆಶೀರ್ವಚನ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಜಗತ್ತಿನ ಸೃಷ್ಟಿ ಪರಿಕಲ್ಪನೆಯಲ್ಲಿ ಸ್ತ್ರೀಶಕ್ತಿಗೆ ವಿಶಿಷ್ಟ ಸ್ಥಾನವಿದೆ. ಹೆಣ್ಣನ್ನು ಆದಿಶಕ್ತಿಯಾಗಿ, ಸೃಷ್ಟಿಯ ಮೂಲಶಕ್ತಿಯಾಗಿ ಆರಾಧಿಸುವ ಪರಂಪರೆ ಪ್ರಾಚೀನ ಕಾಲದಿಂದಲೂ ನಡೆದುಕೊಂಡು ಬಂದಿದೆ. ಸಪ್ತಮಾತೃಕೆಯರ ಆರಾಧನೆಯೂ ಇದೇ ಶಕ್ತಿಯ ಸಂಕೇತವಾಗಿದೆ ಎಂದರು.

ಏಳು ಮಂದಮ್ಮ ತಾಯಿಯ ಸನ್ನಿಧಿ ಸಣ್ಣ ದೇವಾಲಯವಾಗಿದ್ದರೂ ಭಕ್ತರ ನಂಬಿಕೆ ಮತ್ತು ಆರಾಧನೆಯಲ್ಲಿ ಮಹತ್ವದ ಸ್ಥಾನ ಹೊಂದಿದೆ. ತಾಯಿಯ ದರ್ಶನ ಪಡೆದು ಪೂಜೆ ಸಲ್ಲಿಸಿ ಹರಕೆ ಹೊತ್ತರೆ ಕಷ್ಟಕಾರ್ಪಣ್ಯಗಳು ದೂರವಾಗಿ ಮನೋರಥಗಳು ಈಡೇರುತ್ತವೆ ಎಂಬ ನಂಬಿಕೆ ಭಕ್ತರಲ್ಲಿದೆ. ವಿಶೇಷವಾಗಿ ಮಹಿಳೆಯರ ಸಮಸ್ಯೆಗಳಿಗೆ ತಾಯಿ ಕೃಪೆ ತೋರಿ ಸುಖ, ಸಮೃದ್ಧಿ ಕರುಣಿಸುತ್ತಾಳೆ ಎಂಬುದು ಭಕ್ತರ ವಿಶ್ವಾಸವಾಗಿದೆ ಎಂದು ತಿಳಿಸಿದರು.
ದೇವಾಲಯದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಮುಂದಿನ ಪೀಳಿಗೆಗೂ ಉಳಿಸಿ ಬೆಳೆಸುವಲ್ಲಿ ಗ್ರಾಮಸ್ಥರ ಒಗ್ಗಟ್ಟು ಮತ್ತು ಸಹಕಾರ ಮಹತ್ವದ್ದಾಗಿದೆ ಎಂದು ಹೇಳಿದರು.

ಲಕ್ಷ ದೀಪೋತ್ಸವಕ್ಕೆ ಆಗಮಿಸಿದ್ದ ಸಾವಿರಾರು ಭಕ್ತರಿಗೆ ಗ್ರಾಮಸ್ಥರ ವತಿಯಿಂದ ಕುಡಿಯುವ ನೀರು ಹಾಗೂ ಅನ್ನದಾನದ ವ್ಯವಸ್ಥೆ ಮಾಡಲಾಗಿತ್ತು. ಗ್ರಾಮಸ್ಥರು ಒಗ್ಗಟ್ಟಿನಿಂದ ಹೋಮ-ಹವನ, ವಿಶೇಷ ದೀಪಾಲಂಕಾರ ಮತ್ತು ಮೆರವಣಿಗೆಯನ್ನು ಆಯೋಜಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಯುವಕರು, ಮಹಿಳೆಯರು ಸೇರಿದಂತೆ ಅಪಾರ ಸಂಖ್ಯೆಯ ಭಕ್ತಾದಿಗಳು ಉಪಸ್ಥಿತರಿದ್ದು, ಏಳು ಮಂದಮ್ಮ ತಾಯಿ ಹಾಗೂ ಜಡೆ ಮುನೇಶ್ವರಸ್ವಾಮಿಯ ಕೃಪೆಗೆ ಪಾತ್ರರಾದರು.
ವರದಿ: ನರಸಿಂಹಯ್ಯ ಹೊಸಕೋಟೆ
