ಕೊರಟಗೆರೆ:- ಒಕ್ಕಲಿಗರು ಈ ರಾಜ್ಯಕ್ಕೆ ಅನ್ನವನ್ನು ನೀಡುವ ಸಮುದಾಯವಾಗಿದ್ದು, ತಮ್ಮ ಅಭಿವೃದ್ಧಿಯೊಂದಿಗೆ ತಳಸಮುದಾಯದ ಹಿತವನ್ನು ಬಯಸುವ ಜನಾಂಗವಾಗಿದೆ. ರಾಜ್ಯದಲ್ಲಿ ಒಕ್ಕಲಿಗ ಮುಖ್ಯಮಂತ್ರಿಗಳು ಅಧಿಕಾರಕ್ಕೆ ಬಂದಾಗ ರಾಜ್ಯಕ್ಕೆ ಅಪೂರ್ವವಾದ ಕೊಡುಗೆ ನೀಡಿದ್ದಾರೆ ಎಂದು ಪಟ್ಟನಾಯಕನಹಳ್ಳಿಯ ಸ್ಪಟಿಕಪುರಿ ಸಂಸ್ಥಾನದ ನಂಜಾವಧೂತ ಸ್ವಾಮೀಜಿ ತಿಳಿಸಿದರು.
ಅವರು ಪಟ್ಟಣದ ಹೊರವಲಯದಲ್ಲಿ ತಾಲ್ಲೂಕು ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ನಿರ್ಮಿಸಲಾಗುತ್ತಿರುವ ಒಕ್ಕಲಿಗರ ಭವನಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ರಾಜ್ಯದಲ್ಲಿ ಒಕ್ಕಲಿಗ ನಾಯಕರು ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ ಬಂದಾಗಲೆಲ್ಲ ಈ ರಾಜ್ಯದ ಎಲ್ಲ ವರ್ಗಗಳ ಜನರಿಗೆ ವಿಶೇಷವಾಗಿ ರೈತರಿಗೆ ಅಭಿವೃದ್ಧಿ ಕ್ರಾಂತಿಯನ್ನೆ ಮಾಡಿದ್ದಾರೆ.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮುಖ್ಯಮಂತ್ರಿಯಾಗಿದ್ದಾಗ ಹಿಂದುಳಿದ ವರ್ಗಗಳಿಗೆ ರಾಜಕೀಯ ಮೀಸಲಾತಿ ನೀಡಿದರು. ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಎರಡು ಬಾರಿ ರೂ. 26 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಿದರು. ರೂ.28 ಸಾವಿರ ಕೋಟಿ ಭದ್ರ ಮೇಲ್ದಂಡೆಯೋಜನೆಗೆ ಬುನಾಧಿಯನ್ನು ಹಾಕಿದರು. ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ರಾಜ್ಯಕ್ಕೆ ಶಾಸ್ವತವಾದ ಆದಾಯ ತರುವಂತ ಯೋಜನೆಗಳನ್ನು ಮಾಡಿದರು. ಈಗ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾದ ಬಳಿಕ ರಾಜ್ಯದಲ್ಲಿ ನೀರಾವರಿ ಯೋಜನೆಗಳು ಅನುಷ್ಠಾನಗೊಳ್ಳುತ್ತಿವೆ. ಒಟ್ಟಾರೆ ಒಕ್ಕಲಿಗ ನಾಯಕರು ಅಧಿಕಾರದಲ್ಲಿದ್ದಾಗ ತಮ್ಮ ಜಾತಿಯ ಸ್ವಹಿತಕಷ್ಟೆ ಮಾಡದೇ ಎಲ್ಲ ವರ್ಗಗಳ ಜನರ ಅಭಿವೃದ್ಧಿಗೆ ಶ್ರಮಿಸಿದ್ದಾರೆ.
ಒಕ್ಕಲಿಗ ಸಮುದಾಯವು ರಾಜ್ಯದಲ್ಲಿ ಬಲಿಷ್ಟವಾದ ಸಮುದಾಯವಾಗಿದೆ. ಆ ಸಮುದಾಯವು ಉಪಪಂಗಡಗಳಲ್ಲಿ ಹೊಡೆದು ಹೋದರೆ ಶಕ್ತಿಯುತವಾಗಿ ಇರುವುದಿಲ್ಲ. ರಾಜ್ಯದಿಂದಾಗಲೀ, ಮೀಸಲಾತಿಯಿಂದಾಗಲಿ ಒಕ್ಕಲಿಗ ಜಾತಿ ನಮೂದಾದರೆ ಯಾರಿಗೂ ಯಾವುದೇ ರೀತಿ ತೊಂದರೆಯಾಗುವುದಿಲ್ಲ.
ರಾಜ್ಯದಲ್ಲಿ ಒಕ್ಕಲಿಗರ ಸಮುದಾಯ ಬಹುಸಂಖ್ಯೆಯಲ್ಲಿದ್ದಾರೆ. ಆದರೆ ಅವರಿಗೆ ನೀಡಿರುವ ಶೇಕಡಾವಾರು ಮೀಸಲಾತಿ ತುಂಬಾ ಅನ್ಯಾಯವಾಗಿದೆ. ಆ ಮೀಸಲಾತಿಯಲ್ಲಿ ಶೋಷಿತ ತಳಸಮುದಾಯವಾದ ಬಲಿಜ ಸಮುದಾಯವನ್ನು ತಂದು ಸೇರಿಸಿದ್ದಾರೆ. ಆ ಸಮುದಾಯವನ್ನು 2ಎ ಅಥವಾ ಪ್ರವರ್ಗ 1ಕ್ಕೆ ಸೇರಿಸಬೇಕಿತ್ತು. ಇದರಿಂದ ಈ ಎರಡೂ ಸಮುದಾಯಗಳಿಗೂ ಅನ್ಯಾಯವಾಗಿದೆ. ರಾಜ್ಯ ಸರ್ಕಾರವು ಇದನ್ನು ಸರಿಪಡಿಸಬೇಕಿದೆ ಎಂದರು.
ಕೆಂಗೇರಿಯ ವಿಶ್ವ ಒಕ್ಕಲಿಗ ಮಹಾಸಂಸ್ಥಾನದ ನಿಶ್ಚಲಾನಂದನಾಥ ಸ್ವಾಮೀಜಿ ಮಾತನಾಡಿ, ಒಕ್ಕಲಿಗರ ಉಪಪಂಗಡಗಳ ಆಚರಣೆಗಳಲ್ಲಿ ಭಿನ್ನತೆಗಳಿದ್ದರೂ ನಾವೆಲ್ಲರೂ ಒಂದೇ ಸಮುದಾಯದವರು ಎಂಬ ಭಾವನೆ ಮೂಡಬೇಕು. ಹಿಂದೆ ಇದ್ದ ಭಿನ್ನಾಭಿಪ್ರಾಯಗಳು ದೂರವಾಗಿ ಪರಸ್ಪರ ಕೊಟ್ಟು-ತೆಗೆದುಕೊಳ್ಳುವ ಮನೋಭಾವ ಬೆಳೆಯುತ್ತಿರುವುದು ಉತ್ತಮ ಬೆಳವಣಿಗೆ. ಈ ಒಗ್ಗಟ್ಟು ಮತ್ತಷ್ಟು ಗಟ್ಟಿಯಾಗಬೇಕು ಎಂದರು.
ಶಾಸಕ ಬಿ.ಸುರೇಶ್ ಗೌಡ ಮಾತನಾಡಿ, ನಮ್ಮವರನ್ನು ನಮ್ಮವರೇ ಕಾಲೆಳೆಯುವ ಪ್ರವೃತ್ತಿಯಿಂದಾಗಿ ದೊಡ್ಡ ಒಕ್ಕಲಿಗ ಸಮುದಾಯ ರಾಜಕೀಯವಾಗಿ ಹಿಂದುಳಿದಿದೆ. ಎಸ್.ಎಂ.ಕೃಷ್ಣ ಅವರನ್ನು ಹೊರತುಪಡಿಸಿದರೆ ಒಕ್ಕಲಿಗ ಸಮುದಾಯದ ನಾಯಕರಿಗೆ ಐದು ವರ್ಷ ಪೂರ್ಣಾವಧಿ ಮುಖ್ಯಮಂತ್ರಿಯಾಗುವ ಅವಕಾಶ ಸಿಕ್ಕಿಲ್ಲ. ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿಯೂ ಒಕ್ಕಲಿಗರು ನಿರ್ಣಾಯಕ ಸಂಖ್ಯೆಯಲ್ಲಿದ್ದರೂ, ಟಿ.ಬಿ.ಜಯಚಂದ್ರ ಅವರ ನಂತರ ಸಮುದಾಯದವರಿಗೆ ಸಚಿವ ಸ್ಥಾನ ದೊರೆತಿಲ್ಲ. ಸಮುದಾಯದವರು ರಾಜಕೀಯವಾಗಿ ಜಾಗೃತರಾಗಬೇಕು ಎಂದರು.
ಸಮುದಾಯದ ಮುಖಂಡ ಪಿ.ಎನ್.ಕೃಷ್ಣಮೂರ್ತಿ, ಕೇಂದ್ರ ಒಕ್ಕಲಿಗ ಸಂಘದ ನಿರ್ದೇಶಕ ಹನುಮಂತರಾಯಪ್ಪ, ಮುಖಂಡರಾದ ಆಡಿಟರ್ ನಾಗರಾಜು, ಎಂ.ಎನ್.ಜೆ.ಮಂಜುನಾಥ್, ಜಿ.ಎಂ.ಕಾಮರಾಜು ಮಾತನಾಡಿದರು.
ವೇದಿಕೆಯಲ್ಲಿ ಸಂಘದ ಅಧ್ಯಕ್ಷ ರಂಗರಸಪ್ಪ, ಕಾರ್ಯದರ್ಶಿ ಜೆ.ಎನ್.ನರಸಿಂಹರಾಜು, ಜಯಮ್ಮ, ಟಿ.ಡಿ.ಪ್ರಸನ್ನಕುಮಾರ್, ವಿ.ಕೆ.ವೀರಕ್ಯಾತರಾಯ, ಎಲ್.ವಿ.ಪ್ರಕಾಶ್, ಜಿ.ಎಸ್.ರವಿಕುಮಾರ್, ಮಾವತ್ತೂರು ಮಂಜುನಾಥ್, ಟಿ.ಸಿ.ಲಕ್ಷ್ಮೀಶ್, ಡಿ.ಎಂ.ಸಾಕರಾಜು, ಟಿ.ವಿ.ದೊಡ್ಡಯ್ಯ, ವೆಂಕಟಪ್ಪ, ಕೆ.ಎಸ್.ನಾಗೇಶ್ ಕುಮಾರ್, ಡಿ.ಎನ್.ರಮೇಶ್, ಮಲ್ಲಿಕಾರ್ಜುನ, ರಂಗರಾಜು, ಕೃಷ್ಣಮೂರ್ತಿ ಮತ್ತಿತರರು ಇದ್ದರು.
– ಶ್ರೀನಿವಾಸ್ ಕೊರಟಗೆರೆ.
