ಕೊರಟಗೆರೆ:- ಪೂರ್ವಿಕರ ಕಾಲದಿಂದಲೂ ಸುಮಾರು 80–90 ವರ್ಷಗಳಿಂದ ವಾಸವಿದ್ದು, ಉಳುಮೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಜಮೀನನ್ನು ಉಳಿಸಿಕೊಡುವಂತೆ ಆಗ್ರಹಿಸಿ ದಲಿತ ಕುಟುಂಬವೊಂದು ಗೃಹ ಸಚಿವ ಹಾಗೂ ಶಾಸಕ ಡಾ.ಜಿ.ಪರಮೇಶ್ವರ್ ಅವರಿಗೆ ಪ್ರಜಾಸೇವಾ ಅಭಿಯಾನದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಮನವಿ ಸಲ್ಲಿಸಿದೆ.
ತಾಲ್ಲೂಕಿನ ಕೋರ ಹೋಬಳಿಯ ಚನ್ನಪಟ್ಟಣ ಗ್ರಾಮದ ಸರ್ವೆ ನಂ.77ರ ಜಮೀನಿನಲ್ಲಿ ಹಲವು ತಲೆಮಾರುಗಳಿಂದ ವಾಸವಿದ್ದು, ಕೃಷಿ ಮಾಡಿಕೊಂಡು ಜೀವನ ನಡೆಸುತ್ತಿದ್ದೇವೆ. ಆದರೆ ಅಗ್ರಹಾರ ಗ್ರಾಮ ಪಂಚಾಯಿತಿ ಅಧಿಕಾರಿಗಳು ಏಕಾಏಕಿ ಜಮೀನಿನಿಂದ ನಮ್ಮನ್ನು ಒಕ್ಕಲೆಬ್ಬಿಸಲು ಮುಂದಾಗಿದ್ದಾರೆ ಎಂದು ಮುದ್ದಮ್ಮ, ಕ್ಯಾಟಮ್ಮ, ಲಕ್ಷ್ಮಮ್ಮ, ಪುಟ್ಟರಾಜು, ದೊಡ್ಡಯ್ಯ, ರತ್ನಮ್ಮ ಸೇರಿದಂತೆ ಕುಟುಂಬದ ಸದಸ್ಯರು ದೂರಿದ್ದಾರೆ.
ಅಧಿಕಾರಿಗಳು ಜೆಸಿಬಿ ಯಂತ್ರದ ಮೂಲಕ ಜಮೀನಿನಲ್ಲಿದ್ದ ಗಿಡಮರಗಳನ್ನು ಕಡಿದು ಹಾಕುವುದರ ಜತೆಗೆ, ನಮ್ಮ ಪೂರ್ವಿಕರ ಸಮಾಧಿಗಳನ್ನೂ ನೆಲಸಮಗೊಳಿಸಿದ್ದಾರೆ. ಹಲವು ದಶಕಗಳಿಂದ ನೆಲೆಸಿರುವ ಕುಟುಂಬವನ್ನು ಬೀದಿಪಾಲು ಮಾಡುವ ಪ್ರಯತ್ನ ನಡೆಯುತ್ತಿದೆ ಎಂದು ಮನವಿಯಲ್ಲಿ ಆರೋಪಿಸಿದ್ದಾರೆ.
ಈ ಜಮೀನನ್ನು ಹೊರತುಪಡಿಸಿ ಕುಟುಂಬಕ್ಕೆ ಬೇರೆ ಯಾವುದೇ ಆಸ್ತಿ ಅಥವಾ ಜೀವನೋಪಾಯದ ಮೂಲವಿಲ್ಲ. ಜಮೀನಿನಿಂದ ಹೊರಹಾಕಿದರೆ ವಾಸಿಸಲು ಸೂರಿಲ್ಲದೆ, ಬದುಕು ನಡೆಸುವುದೇ ದುಸ್ತರವಾಗಲಿದೆ. ಆದ್ದರಿಂದ ಅಕ್ರಮವಾಗಿ ಮಾಡಿರುವ ಪಹಣಿಯನ್ನು ರದ್ದುಗೊಳಿಸಿ, ಹಲವು ವರ್ಷಗಳಿಂದ ತಮ್ಮ ಅನುಭವದಲ್ಲಿರುವ ಜಮೀನನ್ನು ಪರಿಶೀಲಿಸಿ ಕಾನೂನುಬದ್ಧವಾಗಿ ಮಂಜೂರು ಮಾಡಿಕೊಡಬೇಕು ಎಂದು ಕುಟುಂಬ ಮನವಿ ಮಾಡಿದೆ.
ಅಲ್ಲದೆ, ತಮ್ಮ ವಿರುದ್ಧ ಜಾತಿನಿಂದನೆ ಮಾಡಿರುವವರ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆಯಡಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ನಮಗೆ ನ್ಯಾಯ ಕೊಡಿಸಿ, ಇಲ್ಲವೇ ದಯಾಮರಣಕ್ಕೆ ಅನುಮತಿ ನೀಡಿ.
ದಶಕಗಳಿಂದ ಬದುಕು ಕಟ್ಟಿಕೊಂಡಿರುವ ಜಮೀನನ್ನೇ ಕಳೆದುಕೊಂಡರೆ ನಮ್ಮ ಕುಟುಂಬಕ್ಕೆ ಬದುಕಲು ಬೇರೆ ದಾರಿಯಿಲ್ಲ. ಅಧಿಕಾರಿಗಳಿಂದ ನ್ಯಾಯ ದೊರೆಯದ ಹಿನ್ನೆಲೆಯಲ್ಲಿ ಸಚಿವರೇ ಮಧ್ಯಪ್ರವೇಶಿಸಿ ನಮಗೆ ನ್ಯಾಯ ಒದಗಿಸಬೇಕು ಎಂದು ಕುಟುಂಬದ ಸದಸ್ಯರು ಮನವಿಯಲ್ಲಿ ಕಣ್ಣೀರಿನ ಅಳಲು ತೋಡಿಕೊಂಡಿದ್ದಾರೆ.
– ಶ್ರೀನಿವಾಸ್ ಕೊರಟಗೆರೆ.
