ರಾಮನಾಥಪುರ: ಕಾವೇರಿ ನದಿ ತೀರದಲ್ಲಿರುವ ರಾಮನಾಥಪುರ ಕ್ಷೇತ್ರವು ಇಂದಿಗೂ ಭಕ್ತರ ಆಕರ್ಷಣೆಯ ಕೇಂದ್ರವಾಗಿ ತನ್ನ ಧಾರ್ಮಿಕ ಹಾಗೂ ಐತಿಹಾಸಿಕ ಮಹತ್ವವನ್ನು ಉಳಿಸಿಕೊಂಡಿರುವುದು ಸಂತಸದ ಸಂಗತಿ ಎಂದು ವಿಜಯಪುರ ಜಿಲ್ಲೆ ಅಲಮಟ್ಟಿಯ ಅನ್ನದಾನೀಶ್ವರ ಹಿರೇಮಠದ ಶ್ರೀ ರುದ್ರಮುನಿ ಮಹಾಸ್ವಾಮಿಗಳು ತಿಳಿಸಿದರು.
ಶ್ರೀ ಕ್ಷೇತ್ರ ರಾಮನಾಥಪುರದ ಪ್ರಸನ್ನ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ದೇವಾಲಯದ ವತಿಯಿಂದ ಗೌರವ ಸ್ವೀಕರಿಸಿ ಮಾತನಾಡಿದ ಅವರು, ರಾಮನಾಥಪುರವು ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿ ಪಡೆದಿದ್ದು, ಜೀವನಾಡಿ ಕಾವೇರಿ, ಅಗಸ್ತ್ಯೇಶ್ವರ, ಶ್ರೀ ರಾಮೇಶ್ವರ ಹಾಗೂ ಪ್ರಸನ್ನ ಶ್ರೀ ಸುಬ್ರಹ್ಮಣ್ಯಸ್ವಾಮಿಗಳ ಸನ್ನಿಧಾನ ಹೊಂದಿರುವ ಪವಿತ್ರ ಕ್ಷೇತ್ರವಾಗಿದೆ. ಈ ಕ್ಷೇತ್ರದ ಐತಿಹಾಸಿಕ ಹಿನ್ನೆಲೆ, ಧಾರ್ಮಿಕ ಪರಂಪರೆ ಹಾಗೂ ಮಹಿಮೆಯು ಅಪಾರವಾಗಿದ್ದು, ಸುವರ್ಣಾಕ್ಷರಗಳಲ್ಲಿ ದಾಖಲಿಸುವಂತಹ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದರು.

ಕ್ಷೇತ್ರದಲ್ಲಿರುವ ವಹ್ನಿಪುಷ್ಕರಣಿ, ಗಾಯತ್ರಿ ಶಿಲೆ, ಗೋಗರ್ಭ, ಗೌತಮ ಶಿಲೆ, ಶ್ರೀ ಕುಮಾರಧಾರೆ, ಶ್ರೀ ಕಾವೇರಿ ಸನ್ನಿಧಿ, ಚತುರ್ಯುಗಮೂರ್ತಿ ರಾಮೇಶ್ವರಸ್ವಾಮಿ ದೇವಾಲಯ, ಶ್ರೀ ಪಟ್ಟಾಭಿರಾಮಸ್ವಾಮಿ ದೇವಾಲಯ ಹಾಗೂ ಪ್ರಸನ್ನ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಾಲಯ ಸೇರಿದಂತೆ ಹಲವು ಪವಿತ್ರ ಸ್ಥಳಗಳನ್ನು ವೀಕ್ಷಿಸಿ ಸಂತಸ ವ್ಯಕ್ತಪಡಿಸಿದರು.

ಇಲ್ಲಿನ ಹತ್ತಾರು ದೇವಾಲಯಗಳಲ್ಲಿರುವ ದೇವರ ಮೂರ್ತಿಗಳು, ಸನ್ನಿಧಾನಗಳು ಹಾಗೂ ಧಾರ್ಮಿಕ ಆಚರಣೆಗಳ ಮಹಿಮೆ ವರ್ಣಿಸಲಸದಳ. ಇಂತಹ ಪುಣ್ಯಕ್ಷೇತ್ರದಲ್ಲಿ ಪ್ರತಿನಿತ್ಯ ನಡೆಯುವ ಧಾರ್ಮಿಕ ಸಂಸ್ಕಾರಗಳು ಹಾಗೂ ಪೂಜಾ ಕೈಂಕರ್ಯಗಳು ಭಕ್ತರ ಮನಸ್ಸಿಗೆ ನೆಮ್ಮದಿ ನೀಡುತ್ತವೆ. ಜೀವನದಲ್ಲಿ ಎದುರಾಗುವ ಸಂಕಷ್ಟಗಳನ್ನು ನಿವಾರಿಸಿಕೊಳ್ಳಲು ದೇವರ ಮೇಲಿನ ಭಕ್ತಿ, ನಂಬಿಕೆ ಮತ್ತು ಶ್ರದ್ಧೆಯನ್ನು ಬೆಳೆಸಿಕೊಂಡು ನಿರಂತರ ಆರಾಧನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಶ್ರೀಗಳು ಸಲಹೆ ನೀಡಿದರು.
ಅಲ್ಲದೆ, ದೇವಾಲಯಕ್ಕೆ ಪ್ರತಿನಿತ್ಯ ಆಗಮಿಸುವ ಭಕ್ತರಿಗೆ ಅನ್ನದಾಸೋಹ ವ್ಯವಸ್ಥೆ ಮಾಡುತ್ತಿರುವ ದೇವಾಲಯದ ಆಡಳಿತ ಮಂಡಳಿಯ ಸೇವಾ ಕಾರ್ಯವನ್ನು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ದೇವಾಲಯದ ವೇ. ಅಭಿಷೇಕ್ ಪ್ರಸನ್ನ, ವಿಶ್ವ ವೀರಶೈವ–ಲಿಂಗಾಯತ ಮಹಾವೇದಿಕೆಯ ರಾಜ್ಯಾಧ್ಯಕ್ಷ ಎಂ.ಎನ್. ಕುಮಾರಸ್ವಾಮಿ, ಉಪಾಧ್ಯಕ್ಷ ಸುತ್ತೂರು ಪಂಚಾಕ್ಷರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ವರದಿ : ಕುಮಾರಸ್ವಾಮಿ, ರಾಮನಾಥಪುರ
