ತುಮಕೂರು: ಮನೆಗಳ ಒಳಾಂಗಣ ವಿನ್ಯಾಸ ಕ್ಷೇತ್ರದಲ್ಲಿ ತಂತ್ರಜ್ಞಾನ ಹಾಗೂ ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಸೇವೆಗಳನ್ನು ಒದಗಿಸುತ್ತಿರುವ ಹೋಮ್ಲೇನ್ ಸಂಸ್ಥೆಯ ನೂತನ ಅನುಭವ ಕೇಂದ್ರ (ಸ್ಟುಡಿಯೋ) ತುಮಕೂರು ನಗರದಲ್ಲಿ ಆರಂಭಗೊಂಡಿದೆ. ಗ್ರಾಹಕರಿಗೆ ಆಧುನಿಕ ವಿನ್ಯಾಸ, ಗುಣಮಟ್ಟದ ವಸ್ತುಗಳು ಹಾಗೂ ತಂತ್ರಜ್ಞಾನ ಆಧಾರಿತ ಒಳಾಂಗಣ ವಿನ್ಯಾಸ ಸೇವೆಗಳನ್ನು ಒಂದೇ ಸ್ಥಳದಲ್ಲಿ ಒದಗಿಸುವ ಉದ್ದೇಶದಿಂದ ಈ ಕೇಂದ್ರ ಸ್ಥಾಪಿಸಲಾಗಿದೆ ಎಂದು ಶಾಸಕ ಜಿ.ಬಿ. ಜ್ಯೋತಿಗಣೇಶ್ ತಿಳಿಸಿದರು.
ನಗರದ ಶೆಟ್ಟಿಹಳ್ಳಿ ಸರ್ಕಲ್ ಸಮೀಪ, ರಿಂಗ್ರಸ್ತೆಯ ಜಯನಗರ ಪಶ್ಚಿಮ ಮುಖ್ಯರಸ್ತೆಯಲ್ಲಿರುವ ಬಸವೇಶ್ವರ ಟ್ರೇಡರ್ಸ್ ಕಟ್ಟಡದ ಮೊದಲ ಮಹಡಿಯಲ್ಲಿ ಸ್ಥಾಪಿಸಿರುವ ಹೋಮ್ಲೇನ್ ಶೋರೂಂ ಉದ್ಘಾಟಿಸಿ ಅವರು ಮಾತನಾಡಿದರು.

ತುಮಕೂರು ನಗರದಲ್ಲಿ ಹೆಚ್ಚುತ್ತಿರುವ ವಸತಿ ಯೋಜನೆಗಳು ಹಾಗೂ ಗೃಹ ಒಳಾಂಗಣ ವಿನ್ಯಾಸ ಸೇವೆಗಳ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಈ ಕೇಂದ್ರ ಆರಂಭಿಸಲಾಗಿದೆ. ಸ್ಥಳೀಯ ಮನೆ ಮಾಲೀಕರಿಗೆ ವ್ಯವಸ್ಥಿತ, ವಿನ್ಯಾಸ ಆಧಾರಿತ ಹಾಗೂ ತಂತ್ರಜ್ಞಾನ ಸೌಲಭ್ಯವುಳ್ಳ ಒಳಾಂಗಣ ವಿನ್ಯಾಸ ಸೇವೆಗಳನ್ನು ಪಾರದರ್ಶಕ ದರಗಳಲ್ಲಿ ಒದಗಿಸುವುದು ಇದರ ಮುಖ್ಯ ಉದ್ದೇಶವಾಗಿದೆ ಎಂದರು.
ಸುಮಾರು 500 ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಿಸಿರುವ ಈ ಸ್ಟುಡಿಯೋದಲ್ಲಿ ಮಾಡ್ಯುಲರ್ ಅಡುಗೆ ಮನೆಗಳು, ವಾರ್ಡ್ರೋಬ್ಗಳು ಹಾಗೂ ಸಂಪೂರ್ಣ ಮನೆಗಳ ಒಳಾಂಗಣ ವಿನ್ಯಾಸದ ವಿವಿಧ ಮಾದರಿಗಳನ್ನು ಪ್ರದರ್ಶಿಸಲಾಗಿದೆ. ಗ್ರಾಹಕರು ವಿನ್ಯಾಸ ಮಾದರಿಗಳನ್ನು ನೈಜತೆಗೆ ಹತ್ತಿರವಾದ ಪ್ರದರ್ಶನಗಳ ಮೂಲಕ ವೀಕ್ಷಿಸುವುದರ ಜೊತೆಗೆ, ವಸ್ತುಗಳ ಗುಣಮಟ್ಟವನ್ನು ನೇರವಾಗಿ ಪರಿಶೀಲಿಸಬಹುದು. ತಂತ್ರಜ್ಞಾನ ಆಧಾರಿತ ಸಮಾಲೋಚನೆಗಳ ಮೂಲಕ ಕಾಮಗಾರಿ ಆರಂಭಿಸುವ ಮುನ್ನವೇ ತಮ್ಮ ಕನಸಿನ ಮನೆಯ ವಿನ್ಯಾಸವನ್ನು ದೃಶ್ಯ ರೂಪದಲ್ಲಿ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ. ಪರಿಕಲ್ಪನೆಯಿಂದ ಕಾಮಗಾರಿ ಪೂರ್ಣಗೊಳ್ಳುವವರೆಗೆ ಪ್ರತಿಯೊಂದು ಹಂತದಲ್ಲೂ ವೈಯಕ್ತಿಕ ಮಾರ್ಗದರ್ಶನ ನೀಡಲಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಹೋಮ್ಲೇನ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ತನುಜ್ ಚೌಧರಿ ಮಾತನಾಡಿ, ಕೈಗಾರಿಕಾ ಬೆಳವಣಿಗೆ ಹಾಗೂ ಬೆಂಗಳೂರಿನ ಸಮೀಪದಲ್ಲಿರುವ ಅನುಕೂಲಕರ ಪರಿಸ್ಥಿತಿಗಳಿಂದ ತುಮಕೂರು ನಗರ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ. ಇದರೊಂದಿಗೆ ಮನೆ ಮಾಲೀಕರ ನಿರೀಕ್ಷೆಗಳೂ ಬದಲಾಗುತ್ತಿದ್ದು, ಸ್ವಂತ ಮನೆ ನಿರ್ಮಿಸುವವರು ಹಾಗೂ ಹೊಸ ಅಪಾರ್ಟ್ಮೆಂಟ್ಗಳಿಗೆ ಸ್ಥಳಾಂತರಗೊಳ್ಳುವವರು ಉತ್ತಮ ವಿನ್ಯಾಸ ಮತ್ತು ಗುಣಮಟ್ಟದ ಒಳಾಂಗಣ ವ್ಯವಸ್ಥೆಗಳಿಗೆ ಆದ್ಯತೆ ನೀಡುತ್ತಿದ್ದಾರೆ ಎಂದರು.
ಹೋಮ್ಲೇನ್ ಪಾಲುದಾರ ಕೆಂಚೇಗೌಡ ಮಾತನಾಡಿ, ಸಂಸ್ಥೆಯ ತಂತ್ರಜ್ಞಾನ ಆಧಾರಿತ ಕಾರ್ಯನಿರ್ವಹಣೆ ಹಾಗೂ ಸ್ಥಳೀಯ ಮಾರುಕಟ್ಟೆಯ ಕುರಿತು ತಮ್ಮ ಅನುಭವ ಮತ್ತು ಪರಿಣತಿಯನ್ನು ಬಳಸಿಕೊಂಡು, ಗ್ರಾಹಕರ ಮನೆ ಒಳಾಂಗಣ ವಿನ್ಯಾಸದ ಸಂಪೂರ್ಣ ಪ್ರಕ್ರಿಯೆಯನ್ನು ಸುಗಮವಾಗಿ ಹಾಗೂ ವೃತ್ತಿಪರವಾಗಿ ನಿರ್ವಹಿಸಲು ನೆರವಾಗುವ ಉದ್ದೇಶ ಹೊಂದಲಾಗಿದೆ. ಉತ್ಪನ್ನಗಳಿಗೆ 10 ವರ್ಷಗಳ ವಾರಂಟಿ ನೀಡಲಾಗುತ್ತಿದ್ದು, ಗ್ರಾಹಕರು ಈ ಸೇವೆಯ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಹೋಮ್ಲೇನ್ನ ಬಿಸಿನೆಸ್ ವಿಭಾಗದ ಮುಖ್ಯಸ್ಥೆ ಸೌಮ್ಯ ಸಿಂಘಾ ರಾಯ್ ಮಾತನಾಡಿದರು.
ವರದಿ : ಕೆ ಬಿ ಚಂದ್ರಚೂಡ್
