ಚನ್ನರಾಯಪಟ್ಟಣ: ಗ್ರಾಮೀಣ ಪುನರ್ವಸತಿ ಯೋಜನೆಯಡಿ ಕಳೆದ 19 ವರ್ಷಗಳಿಂದ ವಿಶೇಷ ಚೇತನರ ಸೇವೆಯಲ್ಲಿ ತೊಡಗಿಸಿಕೊಂಡಿರುವ ರಾಜ್ಯದ 6,022 ಗ್ರಾಮೀಣ ಪುನರ್ವಸತಿ ಕಾರ್ಯಕರ್ತರಿಗೆ (VRW/MRW/URW) ಕನಿಷ್ಠ ವೇತನ ನಿಗದಿಪಡಿಸುವುದರ ಜೊತೆಗೆ ಕಾಯಂ ನೇಮಕಾತಿ ಮಾಡಬೇಕೆಂದು ಒತ್ತಾಯಿಸಿ ನವ ಕರ್ನಾಟಕ ವಿಕಲಚೇತನ ಗೌರವದನ ಕಾರ್ಯಕರ್ತರ ಸಂಘದ ವತಿಯಿಂದ ವಿಧಾನ ಪರಿಷತ್ ಸದಸ್ಯ ಡಾ. ಸೂರಜ್ ರೇವಣ್ಣ ಅವರಿಗೆ ಮನವಿ ಸಲ್ಲಿಸಲಾಯಿತು.
ಸಂಘದ ರಾಜ್ಯ ಸಂಚಾಲಕ ಅನಿಲ್ ಕೆ. ಗೌಡ ಅವರ ನೇತೃತ್ವದಲ್ಲಿ ಮನವಿ ಸಲ್ಲಿಸಿ, 19 ವರ್ಷಗಳಿಂದ ನಿರಂತರವಾಗಿ ವಿಶೇಷ ಚೇತನರ ಸೇವೆ ಸಲ್ಲಿಸುತ್ತಿರುವ ಕಾರ್ಯಕರ್ತರ ಸೇವೆಯನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ, ಕನಿಷ್ಠ ವೇತನ ಹಾಗೂ ಕಾಯಂ ನೇಮಕಾತಿಗೆ ಸರ್ಕಾರಕ್ಕೆ ಶಿಫಾರಸು ಮಾಡುವಂತೆ ಮನವಿ ಮಾಡಲಾಯಿತು.
ರಾಮನಗರದಲ್ಲಿ ಸತತ 29 ದಿನಗಳ ಕಾಲ ನಡೆಸಿದ ಹೋರಾಟದ ಫಲವಾಗಿ ಮುಖ್ಯಮಂತ್ರಿ ಅವರು ಕನಿಷ್ಠ ವೇತನಕ್ಕೆ ಶಿಫಾರಸು ಮಾಡಿದ್ದು, ಸಂಬಂಧಪಟ್ಟ ಕಡತ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಕಚೇರಿಯಲ್ಲಿದೆ. ಅದಕ್ಕೆ ಶೀಘ್ರ ಅನುಮೋದನೆ ನೀಡುವಂತೆ ಒತ್ತಾಯಿಸಲಾಯಿತು.
ಇದೇ ವೇಳೆ ರಾಜ್ಯದ ವಿಶೇಷ ಚೇತನರಿಗೆ ನೀಡಲಾಗುತ್ತಿರುವ ಮಾಸಾಶನವನ್ನು ₹5,000 ಹೆಚ್ಚಿಸುವಂತೆ ವಿಧಾನಮಂಡಲದ ಸದನದಲ್ಲಿ ಧ್ವನಿ ಎತ್ತಬೇಕು ಎಂದು ಡಾ. ಸೂರಜ್ ರೇವಣ್ಣ ಅವರನ್ನು ಕೋರಲಾಯಿತು.
ಡಿಸೆಂಬರ್ 3ರ ಗಡುವು
ಡಿಸೆಂಬರ್ 3ರೊಳಗೆ ಕನಿಷ್ಠ ವೇತನ, ಕಾಯಂ ನೇಮಕಾತಿ ಹಾಗೂ ವಿಶೇಷ ಚೇತನರ ಮಾಸಾಶನ ಹೆಚ್ಚಳದ ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಬೃಹತ್ ಪ್ರತಿಭಟನೆ ನಡೆಸುವುದಾಗಿ ಸಂಘಟನೆ ಎಚ್ಚರಿಕೆ ನೀಡಿದೆ.
ನವ ಕರ್ನಾಟಕ ಸಂಘಟನೆಯ ಸುಮಾರು 3,000 ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು, ವಿಶೇಷ ಚೇತನರು ಹಾಗೂ ಪ್ರವೀಣ್ ನಾಯಕ್ ಸುಳ್ಯ ಅವರ ನೇತೃತ್ವದ ಮತ್ತೊಂದು ಸಂಘಟನೆಯನ್ನು ಒಳಗೊಂಡು ರಾಜ್ಯಮಟ್ಟದ ಹೋರಾಟ ರೂಪಿಸಲಾಗುವುದು ಎಂದು ತಿಳಿಸಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಚನ್ನರಾಯಪಟ್ಟಣ ತಾಲೂಕು ಅಧ್ಯಕ್ಷ ಮಧು ಕರಡವು, ಉಪಾಧ್ಯಕ್ಷ ಕಿರಣ್ ಕುಮಾರ್ ಭರತ್, ನವ ಕರ್ನಾಟಕ ಸಂಘಟನೆಯ ರಾಜ್ಯ ಸಂಚಾಲಕ ಅನಿಲ್ ಕೆ. ಗೌಡ, ಪ್ರಧಾನ ಕಾರ್ಯದರ್ಶಿ ದಿನೇಶ್ ಕುಮಾರ್, ಬೆಂಗಳೂರು ವಿಭಾಗದ ಅಧ್ಯಕ್ಷ ಶ್ರೀನಿವಾಸ್ ಬಿ.ಟಿ., ಚನ್ನರಾಯಪಟ್ಟಣ ತಾಲೂಕು ಅಧ್ಯಕ್ಷ ಎಸ್.ಎಸ್. ಮಂಜುನಾಥ್, ಬೇಲೂರು ತಾಲೂಕು ಅಧ್ಯಕ್ಷ ಮಧು ಕುಮಾರ್, ಹೊಳೆನರಸೀಪುರ ತಾಲೂಕು ಮಹಿಳಾ ಅಧ್ಯಕ್ಷೆ ಜ್ಯೋತಿ, ಮಹಿಳಾ ಉಪಾಧ್ಯಕ್ಷೆ ಭಾಗ್ಯ, ಚನ್ನರಾಯಪಟ್ಟಣ ತಾಲೂಕು ಉಪಾಧ್ಯಕ್ಷ ಶಾಂತಕುಮಾರ್, ಸಂಚಾಲಕ ಕಾಂತರಾಜ್, ಪ್ರಧಾನ ಕಾರ್ಯದರ್ಶಿ ಹಾಗೂ ಖಜಾಂಚಿ ಪುಟ್ಟಸ್ವಾಮಿ ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
– ಮಂಜುನಾಥ್ ಐ.ಕೆ.
