ತುಮಕೂರು: ಭಕ್ತಿ, ಕೀರ್ತನೆ ಹಾಗೂ ಪ್ರಾರ್ಥನೆಯ ಮೂಲಕ ಉಡುಪಿ ಶ್ರೀಕೃಷ್ಣನ ಕೃಪೆಗೆ ಪಾತ್ರರಾದ ಕನಕದಾಸರು ಮಹಾನ್ ಭಕ್ತರು ಹಾಗೂ ಪವಾಡ ಪುರುಷರಾಗಿದ್ದು, ತಮ್ಮ ಕೀರ್ತನೆಗಳ ಮೂಲಕ ಜಾತಿ ವ್ಯವಸ್ಥೆಯ ವಿರುದ್ಧ ಜನಜಾಗೃತಿ ಮೂಡಿಸಿದ ಸಮಾಜ ಸುಧಾರಕರು ಎಂದು ಎಸ್.ಪಿ. ಡೆವಲಪರ್ಸ್ನ ವ್ಯವಸ್ಥಾಪಕ ನಿರ್ದೇಶಕ ಎಸ್.ಪಿ. ಚಿದಾನಂದ್ ಹೇಳಿದರು.
ನಗರದ ಶ್ರಮಜೀವಿ ಬೀದಿಬದಿ ವ್ಯಾಪಾರಿಗಳ ಸಂಘದ ಕಚೇರಿಯಲ್ಲಿ ಆಯೋಜಿಸಿದ್ದ ಕನಕ ಜಯಂತಿ ಕಾರ್ಯಕ್ರಮದಲ್ಲಿ ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದ ಅವರು, ಕನಕದಾಸರು ಭಕ್ತಿ ಮಾರ್ಗದ ಮೂಲಕ ಸಮಾಜದಲ್ಲಿ ಪರಿವರ್ತನೆಗೆ ಕಾರಣರಾದ ಮಹಾನ್ ಸಂತರು. ಉಡುಪಿ ಶ್ರೀಕೃಷ್ಣನ ದೇವಸ್ಥಾನದಲ್ಲಿ ಪ್ರವೇಶ ನಿರಾಕರಿಸಿದ ಸಂದರ್ಭದಲ್ಲಿ ಅವರ ಭಕ್ತಿ ಮತ್ತು ಪ್ರಾರ್ಥನೆಗೆ ಒಲಿದ ಶ್ರೀಕೃಷ್ಣನು ಕಿಂಡಿಯ ಮೂಲಕ ದರ್ಶನ ನೀಡಿದ ಪ್ರಸಂಗವು ಕನಕದಾಸರ ಭಕ್ತಿಯ ಶಕ್ತಿಯನ್ನು ಸಾರುತ್ತದೆ ಎಂದರು.
ಕನಕದಾಸರು ಯಾವುದೇ ಒಂದು ಸಮಾಜ ಅಥವಾ ಸಮುದಾಯಕ್ಕೆ ಸೀಮಿತರಾದವರಲ್ಲ. ಅವರ ವಿಚಾರಧಾರೆಗಳು ಇಡೀ ವಿಶ್ವಕ್ಕೆ ಪ್ರೇರಣೆಯಾಗಿವೆ. ಆಧ್ಯಾತ್ಮಿಕ ಚಿಂತನೆಗಳ ಮೂಲಕ ಅನೇಕ ಕೀರ್ತನೆಗಳನ್ನು ರಚಿಸಿ, ಮನುಷ್ಯ ಜೀವನದಲ್ಲಿ ಹೇಗೆ ನಡೆದುಕೊಳ್ಳಬೇಕು, ಸಮಾಜದಲ್ಲಿ ಸಮಾನತೆ ಮತ್ತು ಮಾನವೀಯ ಮೌಲ್ಯಗಳನ್ನು ಹೇಗೆ ಪಾಲಿಸಬೇಕು ಎಂಬುದನ್ನು ತಮ್ಮ ಸಾಹಿತ್ಯದ ಮೂಲಕ ತಿಳಿಸಿಕೊಟ್ಟಿದ್ದಾರೆ ಎಂದು ಹೇಳಿದರು.
ಶ್ರಮಜೀವಿ ಬೀದಿಬದಿ ವ್ಯಾಪಾರಿಗಳ ಸಂಘದ ರಾಜ್ಯಾಧ್ಯಕ್ಷ ಎಂ. ಗೋಪಿ ಮಾತನಾಡಿ, ಸಂಘದ ವತಿಯಿಂದ ಎಲ್ಲ ಮಹನೀಯರ ಜಯಂತಿಗಳನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಕನಕದಾಸರು ಸಾರಿದ ಸಮಾನತೆಯ ಸಂದೇಶದಂತೆ ನಮ್ಮ ಸಂಘದಲ್ಲಿ ಯಾವುದೇ ಜಾತಿ ಭೇದವಿಲ್ಲ. ಬಡ ಬೀದಿಬದಿ ವ್ಯಾಪಾರಿಗಳೇ ಸಂಘದ ಸದಸ್ಯರಾಗಿದ್ದು, ಎಲ್ಲರೂ ಒಂದೇ ಎಂಬ ಸಮಾನತೆಯ ಭಾವನೆಯೊಂದಿಗೆ ಸಂಘಟಿತರಾಗಿ ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡ ಟಿ.ಆರ್. ಸದಾಶಿವಯ್ಯ, ನಟರಾಜಶೆಟ್ಟಿ, ಭವ್ಯಶ್ರೀ, ಶಿವಮೂರ್ತಿ, ಲಕ್ಷ್ಮೀನಾರಾಯಣ, ಪ್ರೇಮ, ಕನ್ನಡ ಮತ್ತು ಸಂಸ್ಕೃತಿ ವೇದಿಕೆ ಅಧ್ಯಕ್ಷ ಕನ್ನಡ ಪ್ರಕಾಶ್, ಶಿವಣ್ಣ, ರಾಜಣ್ಣ, ಆದಿಲ್ ಬಾಷಾ, ವಿಜಯಕುಮಾರ್, ಅನಿತಾ, ರಾಮಾಂಜನಯ್ಯ, ನಾಸುರುದ್ದೀನ್, ಸಿದ್ಧಲಿಂಗೇಶ್ವರ, ಪಾರ್ವತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವರದಿ : ಕೆ ಬಿ ಚಂದ್ರಚೂಡ್
