ತುಮಕೂರು: ಸೈಕಲ್ನಲ್ಲಿ ರಾಕೆಟ್ ಭಾಗಗಳನ್ನು ಸಾಗಿಸಿ, ಎತ್ತಿನಗಾಡಿಯಲ್ಲಿ ಉಪಗ್ರಹ ಪ್ರಯೋಗಗಳ ಉಪಕರಣಗಳನ್ನು ಸಾಗಿಸುತ್ತಿದ್ದ ಕಾಲದಿಂದ ಇಂದು ಜಾಗತಿಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಮುಂಚೂಣಿಯಲ್ಲಿರುವ ಹಂತಕ್ಕೆ ಬೆಳೆದಿದೆ. ಸುಮಾರು 13,500 ಕೋಟಿ ರೂ. ವೆಚ್ಚದ ಅತ್ಯಾಧುನಿಕ ‘ನಿಸಾರ್’ ಉಪಗ್ರಹ ಹಾಗೂ 6,000 ಕೆ.ಜಿ. ತೂಕದ ವಾಣಿಜ್ಯ ಉಪಗ್ರಹಗಳನ್ನು ಉಡಾವಣೆ ಮಾಡುವ ಸಾಮರ್ಥ್ಯವನ್ನು ಭಾರತ ಹೊಂದಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಧ್ಯಕ್ಷ ಹಾಗೂ ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿ ಡಾ. ವಿ. ನಾರಾಯಣನ್ ಹೇಳಿದರು.
ನಗರದ ಅಗಳಕೋಟೆಯ ಶ್ರೀ ಸಿದ್ದಾರ್ಥ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ (ಸಾಹೇ) ವಿಶ್ವವಿದ್ಯಾಲಯದ 15ನೇ ವಾರ್ಷಿಕ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, ಭಾರತದ ಬಾಹ್ಯಾಕಾಶ ಸಾಧನೆಗಳ ಕುರಿತು ಹೆಮ್ಮೆಯಿಂದ ವಿವರಿಸಿದರು.

1963ರ ನವೆಂಬರ್ 21ರಂದು ಅಮೆರಿಕ ನೀಡಿದ್ದ ಸಣ್ಣ ರಾಕೆಟ್ ಅನ್ನು ಸೈಕಲ್ನಲ್ಲಿ ಸಾಗಿಸಿ, ಚರ್ಚ್ ಕಟ್ಟಡವೊಂದರಲ್ಲಿ ಜೋಡಿಸಿ ಉಡಾವಣೆ ಮಾಡಲಾಗಿತ್ತು. ಅಂದು ಸೀಮಿತ ಸಂಪನ್ಮೂಲಗಳೊಂದಿಗೆ ಆರಂಭವಾದ ಭಾರತದ ಬಾಹ್ಯಾಕಾಶ ಪಯಣ ಇಂದು ಅತ್ಯಾಧುನಿಕ ತಂತ್ರಜ್ಞಾನ ಮತ್ತು ಬೃಹತ್ ಉಪಗ್ರಹಗಳನ್ನು ಉಡಾವಣೆ ಮಾಡುವ ಮಟ್ಟಕ್ಕೆ ಬೆಳೆದಿದೆ. ಈ ಸಾಧನೆ ದೇಶದ ವಿಜ್ಞಾನಿಗಳು, ತಂತ್ರಜ್ಞರು ಹಾಗೂ ಸಂಶೋಧಕರ ಪರಿಶ್ರಮಕ್ಕೆ ಸಾಕ್ಷಿಯಾಗಿದೆ ಎಂದರು.
ಗೌರವ ಡಾಕ್ಟರೇಟ್ ಪದವಿ ಸ್ವೀಕರಿಸಿದ ಪದ್ಮಶ್ರೀ ಪುರಸ್ಕೃತ (2025) ಹಾಗೂ ಖ್ಯಾತ ಜೀವಶಾಸ್ತ್ರ ವಿಜ್ಞಾನಿ ಡಾ. ಶುಭಾ ವೆಂಕಟೇಶ ಅಯ್ಯಂಗಾರ್ ಮಾತನಾಡಿ, ವಿದ್ಯಾರ್ಥಿಗಳು ಮುಂದಿನ ಶಿಕ್ಷಣ ಅಥವಾ ವೃತ್ತಿಜೀವನದಲ್ಲಿ ಯಾವುದೇ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡರೂ ನಿರಂತರ ಕಲಿಕೆ, ಕಠಿಣ ಪರಿಶ್ರಮ, ದೃಢಸಂಕಲ್ಪ ಹಾಗೂ ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಬೇಕು. ಜೀವನದಲ್ಲಿ ಕಷ್ಟಗಳು ಮತ್ತು ಸೋಲುಗಳು ಎದುರಾದಾಗ ಧೃತಿಗೆಡದೆ, ಆತ್ಮವಿಶ್ವಾಸದಿಂದ ಪ್ರಯತ್ನ ಮುಂದುವರಿಸಿದರೆ ಯಶಸ್ಸು ಸಾಧಿಸಲು ಸಾಧ್ಯ ಎಂದು ಕಿವಿಮಾತು ಹೇಳಿದರು.
ಗೌರವ ಡಾಕ್ಟರೇಟ್ ಪದವಿ ಸ್ವೀಕರಿಸಿದ ಹಿರಿಯ ಸಾಹಿತಿ ಹಾಗೂ ಚಲನಚಿತ್ರ ನಿರ್ದೇಶಕ ಪ್ರೊ. ಬರಗೂರು ರಾಮಚಂದ್ರಪ್ಪ ಮಾತನಾಡಿ, ಉಪಮುಖ್ಯಮಂತ್ರಿ ಹಾಗೂ ಸಾಹೇ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ. ಜಿ. ಪರಮೇಶ್ವರ ಅವರೊಂದಿಗಿನ ತಮ್ಮ ಸಂಬಂಧ ರಾಜಕೀಯವನ್ನು ಮೀರಿದ ಆತ್ಮೀಯತೆಯದ್ದಾಗಿದೆ. ಅವರು ರಾಜಕಾರಣಿಯಾಗುವ ಮೊದಲಿನಿಂದಲೂ ತಮ್ಮ ನಡುವೆ ವಿಶೇಷ ಬಾಂಧವ್ಯವಿದೆ ಎಂದು ತಿಳಿಸಿದರು.
ಸಾಹೇ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಕೆ. ಬಿ. ಲಿಂಗೇಗೌಡ ಅವರು ವಿಶ್ವವಿದ್ಯಾಲಯದ ವಾರ್ಷಿಕ ಪ್ರಗತಿಯ ವರದಿಯನ್ನು ಮಂಡಿಸಿದರು. ಈ ಬಾರಿ ಘಟಿಕೋತ್ಸವವನ್ನು ಹೊರಾಂಗಣ ವೇದಿಕೆಯಲ್ಲಿ ಆಯೋಜಿಸಲಾಗಿದ್ದು, ಸುಮಾರು ಐದು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಆಸನ ಮತ್ತು ಊಟದ ವ್ಯವಸ್ಥೆ ಕಲ್ಪಿಸಲಾಗಿತ್ತು.
ಸಮಾರಂಭದಲ್ಲಿ ಕನ್ನಿಕಾ ಪರಮೇಶ್ವರಿ, ಡಾ. ಜಿ. ಎಸ್. ಆನಂದ್, ಡಾ. ಅಶೋಕ್ ಮೆಹತಾ, ಡಾ. ಸುನೀಲ್ ಕೆ., ಡಾ. ವಿವೇಕ್ ವೀರಯ್ಯ, ಡಾ. ಸಾಣಿಕೊಪ್ಪ, ಡಾ. ಬಿ. ಪ್ರವೀಣ್ ಕುಡುವ, ಡಾ. ಸುದೀಪ್ ಕುಮಾರ್, ಡಾ. ದಿವಾಕರ್, ಡಾ. ಮಹಾಂತೇಶ್ ಎಂ. ನಡಕಟ್ಟಿ, ಶ್ರೀ ವಿರೇಶಾನಂದ ಸರಸ್ವತಿ ಸ್ವಾಮೀಜಿ, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಪೊಲೀಸ್ ವರಿಷ್ಠಾಧಿಕಾರಿ ಗೋಪಾಲ್, ಡಾ. ಎಂ. ಕೆ. ವೀರಯ್ಯ, ಡಾ. ರವಿಪ್ರಕಾಶ್ ಸೇರಿದಂತೆ ಸಮೂಹ ಸಂಸ್ಥೆಗಳ ವಿವಿಧ ವಿಭಾಗಗಳ ಮುಖ್ಯಸ್ಥರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು, ಪೋಷಕರು ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.
ವರದಿ : ಕೆ ಬಿ ಚಂದ್ರಚೂಡ್
