ಚನ್ನರಾಯಪಟ್ಟಣ: ಪಟ್ಟಣದ ತಾಲ್ಲೂಕು ಕಚೇರಿ ಮುಂಭಾಗ ನಿರ್ಮಿಸಿರುವ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆ ಅನಾವರಣಗೊಳಿಸುವಂತೆ ಆಗ್ರಹಿಸಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸ್ಥಳಕ್ಕೆ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ ಭೇಟಿ ನೀಡಿದರು.
ಪ್ರತಿಭಟನಾ ಸ್ಥಳಕ್ಕೆ ಸಚಿವರು ಆಗಮಿಸಿದ ವೇಳೆ ಪ್ರತಿಭಟನಾಕಾರರು ಕ್ರಾಂತಿಗೀತೆ ಹಾಡುತ್ತಿದ್ದರು. “ಇದು ದೋಚುವ ರಾಜ್ಯ ಅಣ್ಣ, ಕೋಲಣ್ಣ, ಇದು ದೊರೆಗಳ ರಾಜ್ಯ, ಪೊಲೀಸ್ ರಾಜ್ಯ, ತುಪಾಕಿ ರಾಜ್ಯ, ಮಂತ್ರಿಗಳು–ಕಂತ್ರಿಗಳು, ಕಳ್ಳ–ಕಾಕರ ರಾಜ್ಯ, ಇದು ನಂಬೋದು ಹೇಗೋ ಅಣ್ಣಾ” ಎಂಬ ಹಾಡನ್ನು ಹಾಡುತ್ತಿದ್ದರು.
ಪ್ರತಿಭಟನಾಕಾರರು ಹಾಡುತ್ತಿದ್ದ ಗೀತೆಯಿಂದ ಅಸಮಾಧಾನಗೊಂಡ ಸಚಿವರು ಕಾರಿನಿಂದ ಕೆಳಗಿಳಿಯದೆ, ಹಾಡು ನಿಲ್ಲಿಸಿದರೆ ಮಾತ್ರ ಪ್ರತಿಭಟನಾ ಸ್ಥಳಕ್ಕೆ ಬರುವುದಾಗಿ ತಿಳಿಸಿದರು. ಬಳಿಕ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಹಾಗೂ ಶಾಸಕ ಸಿ.ಎನ್. ಬಾಲಕೃಷ್ಣ ಅವರು ಪ್ರತಿಭಟನಾ ಸ್ಥಳಕ್ಕೆ ತೆರಳಿ ಹಾಡು ನಿಲ್ಲಿಸುವಂತೆ ಪ್ರತಿಭಟನಾಕಾರರಿಗೆ ಮನವಿ ಮಾಡಿದರು.
ಪ್ರತಿಭಟನಾಕಾರರು ಹಾಡು ನಿಲ್ಲಿಸಿದ ಬಳಿಕ ಸಚಿವ ಕೆ.ಎಂ. ಶಿವಲಿಂಗೇಗೌಡ ಧರಣಿ ಸ್ಥಳಕ್ಕೆ ಆಗಮಿಸಿದರು. ಈ ವೇಳೆ, “ನಾನು ಬಂದಾಗ ಮಂತ್ರಿ, ಕಂತ್ರಿ ಎಂದು ಹಾಡುತ್ತಿದ್ದಿರಿ. ನಾನೇಕೆ ಕಂತ್ರಿ ಎಂದು ಅನ್ನಿಸಿಕೊಳ್ಳಲಿ? ನಾನು ಕಂತ್ರಿ ಕೆಲಸ ಮಾಡಿದ್ದರೆ ರಾಜೀನಾಮೆ ಕೊಟ್ಟು ಹೋಗುತ್ತೇನೆ” ಎಂದು ಸಚಿವರು ಪ್ರತಿಭಟನಾಕಾರರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆ ಅನಾವರಣಕ್ಕೆ ಆಗ್ರಹಿಸಿ ನಡೆಯುತ್ತಿರುವ ಪ್ರತಿಭಟನೆಯ ಸಂದರ್ಭದಲ್ಲಿ ಸಚಿವರ ಭೇಟಿ ಹಾಗೂ ಪ್ರತಿಭಟನಾಕಾರರು ಹಾಡು ನಿಲ್ಲಿಸಿದ ಬಳಿಕವೇ ಅವರು ಸ್ಥಳಕ್ಕೆ ಆಗಮಿಸಿದ ಘಟನೆ ಗಮನ ಸೆಳೆಯಿತು.
ವರದಿ : ಮಂಜುನಾಥ್ ಐ ಕೆ
