ಆಗತಾನೇ ಮಾರುಕಟ್ಟೆಗೆ ಬರುತ್ತಿದ್ದ, ನಮ್ಮೆಲ್ಲರಿಗೂ ಸೋಜಿಗದ ವಸ್ತುವಾಗಿದ್ದ ಸೋಲಾರ್ ಲೈಟನ್ನು ಬೆಳಕಿಗಾಗಿ ಉರಿಸಲಾಯಿತು. ಎಲ್ಲರಿಗೂ ವಿಪರೀತ ಹಸಿವು. ತಿನ್ನಲು ಏನಾದರೂ ಸಿಕ್ಕರೆ ಸಾಕು, ಒಂದಷ್ಟು ತಿಂದು ಈ ಪ್ರಪಂಚವನ್ನೇ ಮರೆತು ಮರಣನಿದ್ರೆಗೆ ಜಾರೋಣ ಎಂದುಕೊಂಡಿದ್ದ ನಮಗೆ ಅಡುಗೆ ಮಾಡಲು ನೀರು ತರಬೇಕೆಂಬ ವಿಷಯ ಅರಿವಿಗೆ ಬಂದಿತು.
ದಾರಿಯುದ್ದಕ್ಕೂ ನೀರಿನ ಝರಿಗಳು, ಹರಿಯುವ ಹಳ್ಳಗಳು ಕಂಡಿದ್ದರಿಂದ ಕೈಕಾಲು, ಮುಖ ತೊಳೆದುಕೊಂಡು, ಬಾಟಲಿಗಳಲ್ಲಿ ನೀರು ತುಂಬಿಸಿಕೊಂಡು ಬಂದಿದ್ದ ನಮಗೆ ಸಂಜೆ ನಾಲ್ಕರ ನಂತರ ಯಾವುದೇ ತೊರೆ, ಹಳ್ಳಗಳು ಎದುರಾಗದಿದ್ದುದು ಅರಿವಿಗೇ ಬಂದಿರಲಿಲ್ಲ. ನಡೆಯುತ್ತಾ ನಡೆಯುತ್ತಾ ನೀರಿನ ಮೂಲವೇ ಇಲ್ಲದ ಬಂಜರು ಪ್ರದೇಶವನ್ನು ಪ್ರವೇಶಿಸಿಬಿಟ್ಟಿದ್ದೆವು. ನೀರಿನ ಬಾಟಲಿಗಳಲ್ಲಿದ್ದ ನೀರು ಅಷ್ಟೊತ್ತಿಗಾಗಲೇ ತಳಕಂಡು ಗಂಟೆಗಳೇ ಕಳೆದಿದ್ದವು. ಜೊತೆಯಲ್ಲಿದ್ದವರ ಬಾಟಲಿಗಳಲ್ಲಿದ್ದ ನೀರಿಗಾಗಿ ಅಂಗಲಾಚಿ ಕುಡಿದು, ತಂಗುದಾಣದ ನಿರೀಕ್ಷೆಯಲ್ಲಿ ಲಗುಬಗೆಯಿಂದ ನಡೆಯುತ್ತಿದ್ದೆವು.
ಆತಂಕ, ಹಸಿವು, ಬಾಯಾರಿಕೆ, ಕತ್ತಲೆಯ ಅವ್ಯಕ್ತ ಭಯ, ರೈಲು ಹಳಿಗಳ ಸಂದಿಗಳಲ್ಲಿರಬಹುದಾದ ಹಾವುಗಳ ಭೀತಿ… ಇವೆಲ್ಲದರ ನಡುವೆ ಆ ಪಾಳುಬಿದ್ದ ನಿಲ್ದಾಣವನ್ನು ತಲುಪಿದ್ದೆವು.
ಆ ರಾತ್ರಿಯ ನೀರವತೆಯಲ್ಲಿ, ಹಸಿವಿನಿಂದ ಕಂಗೆಟ್ಟಿದ್ದ ನಾವು ನೀರಿನ ಮೂಲವನ್ನು ಗುರುತಿಸುವ ಸಲುವಾಗಿ ನಿಲ್ದಾಣದ ಸುತ್ತಲೂ ನಿಶ್ಶಬ್ದವಾಗಿ ಕಣ್ಣಾಡಿಸಿದೆವು. ಎಲ್ಲಾದರೂ ನೀರು ಹರಿಯುವ, ಸುರಿಯುವ ಅಥವಾ ತೊಟ್ಟಿಕ್ಕುವ ಸದ್ದು ಕೇಳುವುದೇ ಎಂದು ಕಿವಿಗೊಟ್ಟು ತನಿಖೆ ಮಾಡಲಾರಂಭಿಸಿದೆವು. ಆದರೆ, ಏನೂ ಪ್ರಯೋಜನವಾಗಲಿಲ್ಲ. ಕಿವಿಗಡಚಿಕ್ಕುವ ಜೀರುಂಡೆಗಳ ಸದ್ದು ಬಿಟ್ಟರೆ ಬೇರೇನೂ ಕೇಳಿಸಲಿಲ್ಲ. ಒಬ್ಬರಿಗೊಬ್ಬರು ಅಸಹಾಯಕ ದೃಷ್ಟಿ ಬೀರಿದೆವು.
ಸರಿ, ಈಗ ತಂಡದ ಹದಿನೈದಿಪ್ಪತ್ತು ಮಂದಿಯ ರಾತ್ರಿಯ ಊಟಕ್ಕೆ ಏನಾದರೂ ವ್ಯವಸ್ಥೆ ಮಾಡಲೇಬೇಕಿತ್ತು. ರಾತ್ರಿಯ ಹೊತ್ತಿನಲ್ಲಿ ಹೆಡ್ಲೈಟ್ ಬಳಸಿ ಬೇಟೆಯಾಡಿ ಅನುಭವವಿದ್ದ ನಾನು, ನನ್ನ ಬ್ಯಾಗಿನಲ್ಲಿದ್ದ ಮೊಳದುದ್ದದ ಕತ್ತಿ ಹಾಗೂ ಮೂರು ಸೆಲ್ಗಳ ಎವರೆಡಿ ಟಾರ್ಚ್ ಹಿಡಿದು, “ಯಾರಾದರೂ ಇಬ್ಬರು ನನ್ನ ಜೊತೆ ಬನ್ನಿ” ಎಂದೆ.
ಹಲವರು ಆ ಕತ್ತಲಲ್ಲಿ, ಅಪರಿಚಿತ ಜಾಗದಲ್ಲಿ, ಆ ಹೊತ್ತಿನಲ್ಲಿ ನೀರು ಹುಡುಕಿ ತರುವ ಸಾಹಸಕ್ಕೆ ಉತ್ಸಾಹ ತೋರಲಿಲ್ಲ. ನನ್ನ ವೀರಪ್ಪನ್ ಲುಕ್ ನೋಡಿ ಸ್ಫೂರ್ತಿ ಪಡೆದ ತಿಪಟೂರಿನ ರಂಗಸ್ವಾಮಿ, ಬೆಂಗಳೂರಿನ ವಿನಯ್ ಹಾಗೂ ದಾವಣಗೆರೆಯ ಸತೀಶ್, “ನಡೀರಿ, ನೀರನ್ನು ತಂದೇ ತರೋಣ” ಎಂದು ಸಿದ್ಧವಾಗಿಯೇಬಿಟ್ಟರು.

ಗಂಜಿ ಅನ್ನ ಮಾಡುವ ಪಾತ್ರೆ, ಐದು ಲೀಟರ್ ಸಾಮರ್ಥ್ಯದ ಒಂದು ನೀರಿನ ಕ್ಯಾನ್ ಹಾಗೂ ಒಂದು ಬ್ಯಾಗಿನಲ್ಲಿ ನಾಲ್ಕಾರು ದೊಡ್ಡ ಗಾತ್ರದ ನೀರಿನ ಬಾಟಲಿಗಳನ್ನು ತುಂಬಿಕೊಂಡು ಹೊರಟೆವು.
ಆಳೆತ್ತರಕ್ಕೆ ಬೆಳೆದಿದ್ದ ಹುಲ್ಲು ರೈಲು ಹಳಿಗಳನ್ನೇ ನುಂಗುವಂತೆ ಅಗಾಧವಾಗಿ ಬೆಳೆದಿತ್ತು. ಎಷ್ಟು ಪ್ರಯತ್ನಿಸಿದರೂ ಟಾರ್ಚಿನಿಂದ ಮಾರುದ್ದಕ್ಕೂ ಬೆಳಕು ಚೆಲ್ಲಲು ಸಾಧ್ಯವಾಗುತ್ತಿರಲಿಲ್ಲ. ಒಂದು ಕೈಯಲ್ಲಿ ಕತ್ತಿಯಿಂದ ಹುಲ್ಲನ್ನು ಬದಿಗೆ ಸರಿಸುತ್ತಾ, ಇನ್ನೊಂದು ಕೈಯಿಂದ ಟಾರ್ಚಿನ ಬೆಳಕನ್ನು ಹರಿಸುತ್ತಾ, ಗೊತ್ತುಗುರಿಯಿಲ್ಲದೆ ಪಶ್ಚಿಮಘಟ್ಟದ ಅಬೇಧ್ಯ ಕಾಡಿನ ನಡುವೆ ಆ ನಟ್ಟಿರುಳಿನಲ್ಲಿ ಅಡುಗೆಗೆ ನೀರನ್ನರಸುತ್ತಾ ನಡೆದದ್ದನ್ನು ನೆನೆಸಿಕೊಂಡರೆ, ಈಗಲೂ “ಹೀಗೂ ಆಗುತ್ತದೆಯಾ?” ಎಂದು ಆಶ್ಚರ್ಯವಾಗುತ್ತದೆ.
ಆಳೆತ್ತರದ ಒಣಹುಲ್ಲಿನ ನಡುವೆ ಸರಬರ, ಜರಬರ ಸದ್ದು ಮಾಡುತ್ತಾ ನಡೆಯುತ್ತಿದ್ದರೆ, ನೀರಿನ ಮೂಲ ಪಕ್ಕದಲ್ಲೇ ಇದ್ದರೂ ಅದನ್ನು ಗುರುತಿಸುವುದು ಕಷ್ಟವೆಂದು ಅರಿತು, ಕೆಲಕಾಲ ಸದ್ದಿಲ್ಲದೆ ನಿಂತೆವು. ಎಲ್ಲಾದರೂ ನೀರಿನ ಹರಿವಿನ ಸದ್ದು ಕೇಳುವುದೇ ಎಂದು ಮೈಯೆಲ್ಲಾ ಕಿವಿಯಾಗಿಸಿಕೊಂಡೆವು.
ಅಲ್ಲೆಲ್ಲೋ ದೂರದಲ್ಲಿ, ಪ್ರಪಾತದ ಬುಡದಲ್ಲಿರಬಹುದಾದ ನೀರು ಸಳಸಳನೆ ಹರಿಯುತ್ತಿರುವ ಮಂಜುಳ ನಿನಾದ ಕಿವಿಗೆ ಬಿದ್ದಿತು. ನಾನು ನಿಂತಿದ್ದ ಸ್ಥಳದಿಂದ ಬಲಕ್ಕೆ, ಕೆಂಜಿಗೆ ಮುಳ್ಳಿನ ಜಿಗ್ಗಿನಾಚೆಗಿನ ಅಬೇಧ್ಯ ಕಗ್ಗಾಡಿನ ಆಳದಲ್ಲೆಲ್ಲೋ ನೀರು ಹರಿಯುತ್ತಿರುವ ಸದ್ದು, ಜೀರುಂಡೆಗಳ ಸದ್ದಿನ ನಡುವೆಯೂ ತೇಲಿಬಂದು ನಮ್ಮ ಬಾಯಾರಿಕೆಯನ್ನು ಅರ್ಧದಷ್ಟು ತಣಿಸಿತು.
ಸುತ್ತಿ ಬಳಸಿ, ಮುಳ್ಳುಕಂಟಿಗಳಿಂದ ಮುಂಗೈ, ಮೊಣಕೈಗಳನ್ನು ಗೀರುಗಾಯ ಮಾಡಿಸಿಕೊಂಡು, ಎರಡ್ಮೂರು ಬಾರಿ ಆ ಕತ್ತಲಲ್ಲೇ ಜಾರಿ, ಎಡವಿ, ಮುಗ್ಗರಿಸಿ ನುಗ್ಗುನಗ್ಗಾದೆವು. ಅಂತೂ ನೀರು ನಮ್ಮ ಕಣ್ಣಿಗೆ ಕಾಣಿಸುವಷ್ಟು ದೂರಕ್ಕೆ ತಲುಪಿದೆವು. ಆ ಒತ್ತಾಗಿ ಬೆಳೆದಿದ್ದ ಗಿಡಗಳ ನಡುವೆ ನೀರು ಹರಿಯುತ್ತಿರುವುದು ದೂರದಿಂದಲೇ ಕಾಣಿಸುತ್ತಿತ್ತು.

ಮೂರು ಸೆಲ್ಗಳ ಟಾರ್ಚಿನ ಬೆಳಕನ್ನು ನೀರಿನ ಮೇಲೆ ಬಿಟ್ಟಾಗ, ಅದರ ಪ್ರತಿಫಲನ ಮುಗಿಲೆತ್ತರದ ಮರಗಳ ಛತ್ರಿಯ ಒಳಭಾಗದಲ್ಲಿ ಮೂಡಿತು. ಆಗ ಆ ಮರದ ಯಾವುದೋ ರೆಂಬೆಯಲ್ಲಿ ಕುಳಿತು ತೂಕಡಿಸುತ್ತಿದ್ದ ಬೃಹದಾಕಾರದ ಗೂಬೆಯೊಂದು ತನ್ನ ಅಗಾಧ ವಿಸ್ತಾರದ ರೆಕ್ಕೆಗಳನ್ನು ಬಿಚ್ಚಿಕೊಂಡು ನಮ್ಮತ್ತಲೇ ಹಾರಿ, ಮತ್ತಾವುದೋ ಮರದ ರೆಂಬೆಯನ್ನರಸುತ್ತಾ ಆ ಅನಂತ ಕತ್ತಲೆಯಲ್ಲಿ ಲೀನವಾಯಿತು.
ಆ ಗೂಬೆಯ ಹರವಿದ ರೆಕ್ಕೆಯ ರಪಾರಪಾ ಸದ್ದು ಮತ್ತು ಅದು ನಮ್ಮೆಡೆಗೇ ದಾವಿಸಿ ಬಂದದ್ದನ್ನು ನೋಡಿ ಗಾಬರಿಗೊಂಡ ನಾವು, ನಮಗರಿವಿಲ್ಲದೆಯೇ ಸಣ್ಣ ಚೀತ್ಕಾರದೊಂದಿಗೆ ಕಂಪಿಸಿಬಿಟ್ಟೆವು.
ಗುಂಪಿನ ನಾಯಕನಾಗಿದ್ದ ಹಾಗೂ ವೀರಪ್ಪನ್ ಗೆಟಪ್ ತೋರಿಸಿದ್ದ ನಾನು, ಆಗಿದ್ದ ಪೇಚಾಟವನ್ನು ತೋರಿಸಿಕೊಳ್ಳದೆ, “ಬನ್ನಿ, ಬನ್ನಿ… ಇಂಥದ್ದನ್ನೆಲ್ಲಾ ನಾ ಎಷ್ಟು ನೋಡಿಲ್ಲ!” ಎಂದು ಹೇಳಿ, ನೀರಿನ ಸಮೀಪಕ್ಕೆ ಹೋಗಲು ಅವಕಾಶವಿದೆಯೇ ಎಂದು ಟಾರ್ಚಿನ ಬೆಳಕಿನಲ್ಲೇ ಲೆಕ್ಕ ಹಾಕತೊಡಗಿದೆ.
ನಮ್ಮ ಗುಂಪಿನಲ್ಲಿದ್ದ ರಂಗಸ್ವಾಮಿಗೆ, “ನಾನಿಲ್ಲೇ ನಿಂತು ಟಾರ್ಚ್ ಹಾಕುತ್ತೇನೆ. ನೀನು ಹಾಗೆಯೇ ಆ ಬೆಳಕನ್ನು ಅನುಸರಿಸಿಕೊಂಡು ನೀರಿನ ಬಳಿ ಹೋಗಲು ಸಾಧ್ಯವೇ ಪ್ರಯತ್ನಿಸು” ಎಂದೆ.
“ಓಕೆ, ಓಕೆ” ಎಂದ ರಂಗಸ್ವಾಮಿ ನನ್ನ ಕೈಯಿಂದ ಕತ್ತಿಯನ್ನು ತೆಗೆದುಕೊಂಡು ನಿಧಾನವಾಗಿ ಆ ಕೊರಕಲಿನ ಇಳಿಜಾರಿನಲ್ಲಿ ಗಿಡಗಂಟಿಗಳ ಬುಡ ಹಾಗೂ ಸಡಿಲಾಗಿ ಮಣ್ಣು ಕಳಚಿಕೊಂಡು ಬೇರುಗಳು ಹೊರಬಂದಿದ್ದ ಜಾಗಗಳನ್ನೇ ಹಿಡಿದುಕೊಂಡು, ಮೈಯೆಲ್ಲಾ ಕಣ್ಣಾಗಿಸಿಕೊಂಡು ಒಂದೊಂದೇ ಹೆಜ್ಜೆಯನ್ನಿಡುತ್ತಾ ಎಚ್ಚರಿಕೆಯಿಂದ ಇಳಿಯತೊಡಗಿದ.

ಅವನು ಶಿಲಾರೋಹಿಯೊಬ್ಬ ಕಡಿದಾದ ಕಲ್ಲಿನ ಬಿರುಕೊಂದರೊಳಗೆ ಹಗ್ಗಗಳ ಸಹಾಯದಿಂದ ಜೇಡ ಹರಿದಾಡಿದಂತೆ ಚಲಿಸುತ್ತಿದ್ದರೆ, ಮೇಲಿದ್ದ ನಾವು ಮೂವರೂ ಉಸಿರು ಬಿಗಿಹಿಡಿದು ಆ ಅಸೀಮ ಸಾಹಸವನ್ನು ನೋಡುತ್ತಿದ್ದೆವು.
ಯಾಕೋ ನನಗೆ, “ಈ ರೀತಿ ಕಷ್ಟಪಟ್ಟು ಕೆಳಗಿಳಿದು ನೀರಿನ ಮೂಲ ತಲುಪುವುದೇನೋ ಸರಿ. ಆದರೆ, ಅಲ್ಲಿಂದ ನಮ್ಮ ಅಗತ್ಯಕ್ಕೆ ಬೇಕಾದಷ್ಟು ನೀರನ್ನು ಮೇಲಕ್ಕೆ ತರಲು ಸಾಧ್ಯವೇ?” ಎಂಬ ಗುಮಾನಿ ಮೂಡತೊಡಗಿತು.
ಏನನ್ನೋ ತೀರ್ಮಾನಿಸಿದವನಂತೆ, “ರಂಗಸ್ವಾಮಿ, ಮೇಲೆ ಬಾ. ಇದ್ಯಾಕೋ ಆಗುವ ಕೆಲಸದಂತೆ ಕಾಣ್ತಿಲ್ಲ” ಎಂದು ಕೂಗಿ ಹೇಳಿ, ಟಾರ್ಚಿನಲ್ಲಿಯೇ ಸನ್ನೆ ಮಾಡಿದೆ.
ಆ ನೀರವ, ನಿರಾತಂಕ ಕಗ್ಗಾಡಿನ ಆ ಕಾಳರಾತ್ರಿಯಲ್ಲಿ ನನ್ನ ಕೂಗು ಯಾವ ಯಾವ ಪ್ರಾಣಿ-ಪಕ್ಷಿಗಳನ್ನು ಬಡಿದೆಬ್ಬಿಸಿತೋ! ಇದ್ದಕ್ಕಿದ್ದಂತೆ ಆ ಕೊರಕಲಿನ ಕಂದರದ ಸುತ್ತಮುತ್ತಲಿನ ಕಾಡು ಝಲ್ಲನೆ ವಿಹ್ವಲಗೊಂಡಿತು.
ಹತ್ತಾರು ಹಕ್ಕಿಗಳು ಭರ್ಭರ್ ಎಂದು ತೂಕಡಿಸುತ್ತಿದ್ದಲ್ಲಿಂದ ಹಾರಿದವು. ಯಾವುದೋ ಒಂದಷ್ಟು ಕಾಡುಮೃಗಗಳು ತಮ್ಮ ವಿಶ್ರಾಂತಿ ಸ್ಥಳದಿಂದ ಧಿಗ್ಗನೆ ಹೌಹಾರಿ, ಪಟಾರನೆ ಹಾರಿ ಓಟಕಿತ್ತವು.
ಆ ಗಾಬರಿಗೆ ರಂಗಸ್ವಾಮಿಯೂ ಸಮತೋಲನ ತಪ್ಪಿ, “ಓಓಓಓ…” ಅನ್ನುತ್ತಾ ಕೊರಕಲಿನೊಳಗೆ ಜಾರಿ ಕಾಣೆಯಾದ!

