ರಾಜ್ಯ ಸರ್ಕಾರವು ಪೊಲೀಸರಿಗೆ ಗುಡ್ನ್ಯೂಸ್ ಕೊಟ್ಟಿದೆ. ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗೆ ಗುಡ್ನ್ಯೂಸ್ ಕೊಡಲಾಗಿದೆ. ಪೊಲೀಸ್ ಇಲಾಖೆಗೆ ಈಗಾಗಲೇ ಮೂರು ಕೋಟಿ ರೂ. ಅನುದಾನ ನೀಡಲಾಗಿದೆ. ಬಜೆಟ್ನಲ್ಲಿ ಇನ್ನುಳಿದ ಅನುದಾನವನ್ನು ನೀಡಲಾಗುವುದು. ಸರ್ಕಾರವು ಮುಂದಿನ ದಿನಗಳಲ್ಲಿ ಪೊಲೀಸರಿಗೆ ಹೆಚ್ಚಿನ ಸವಲತ್ತುಗಳನ್ನು ಕಲ್ಪಿಸಲಿದೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರು ಹೇಳಿದ್ದಾರೆ.

ಪೊಲೀಸರಿಗೆ ಆರು ಕೋಟಿ ರೂ. ವೆಚ್ಚದಲ್ಲಿ ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣ ಸೇರಿದಂತೆ ವಿವಿಧ ಕ್ರೀಡಾ ಸವಲತ್ತುಗಳನ್ನು ಕಲ್ಪಿಸಲಾಗುವುದು ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಹೇಳಿದ್ದಾರೆ. ಬೆಂಗಳೂರು ನಗರ ಪೊಲೀಸ್ ವತಿಯಿಂದ ಆಡುಗೋಡಿಯ ಸಿಎಆರ್ ಮೈದಾನದಲ್ಲಿ ನಡೆದ ಬೆಂಗಳೂರು ನಗರ ಪೊಲೀಸ್ “ವಾರ್ಷಿಕ ಕ್ರೀಡಾಕೂಟ 2024” ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ, ವಿವಿಧ ಕ್ರೀಡೆಗಳಲ್ಲಿ ವಿಜೇತರಾದ ಪೊಲೀಸ್ ಕ್ರೀಡಾಪಟುಗಳಿಗೆ ಹಾಗೂ ತಂಡಗಳಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.
ಈಗಾಗಲೇ ಮೂರು ಕೋಟಿ ರೂ. ಅನುದಾನ ನೀಡಲಾಗಿದೆ. ಬಜೆಟ್ನಲ್ಲಿ ಇನ್ನುಳಿದ ಅನುದಾನವನ್ನು ನೀಡಲಾಗುವುದು. ಸರ್ಕಾರವು ಮುಂದಿನ ದಿನಗಳಲ್ಲಿ ಪೊಲೀಸರಿಗೆ ಹೆಚ್ಚಿನ ಸವಲತ್ತುಗಳನ್ನು ಕಲ್ಪಿಸುತ್ತದೆ. ದೇಶದ ಬೇರೆ ಮಹಾನಗರ ಪೊಲೀಸರಿಗಿಂತ ಬೆಂಗಳೂರು ನಗರ ಪೊಲೀಸ್ ಅತ್ಯುತ್ತಮವಾಗಿ ಕೆಲಸ ಮಾಡುತ್ತಿದೆ. ಕರ್ನಾಟಕ ಪೊಲೀಸರು ಇನ್ನು ಹೆಚ್ಚಿನ ರೀತಿಯಲ್ಲಿ ಸಮರ್ಥವಾಗಿ ಕೆಲಸ ಮಾಡಬೇಕಿದೆ ಎಂದು ನನಗೆ ಅನ್ನಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ದಕ್ಷತೆ ಮತ್ತು ಪ್ರಾಮಾಣಿಕತೆಯಲ್ಲಿ ಕರ್ನಾಟಕ ಪೊಲೀಸ್ ಎರಡನೇ ಸ್ಥಾನದಲ್ಲಿದೆ ಎಂಬುದನ್ನು ರಾಷ್ಟ್ರಮಟ್ಟದ ಜಾಗರಣಾ ಪತ್ರಿಕೆ ವರದಿ ಮಾಡಿದೆ. ಇದು ಸಂತೋಷ ತಂದಿದೆಯಾದರು. ಕರ್ನಾಟಕ ಪೊಲೀಸ್ ದೇಶದಲ್ಲಿ ಮೊದಲ ಸ್ಥಾನದಲ್ಲಿರಬೇಕು ಎಂದ ಅವರು, ಕರ್ತವ್ಯದ ವೇಳೆ ಪ್ರಾಣಾರ್ಪಣೆ ಮಾಡಿದ ಸಿಬ್ಬಂದಿಗಳನ್ನು ಸ್ಮರಿಸಿ, ಕೃತಜ್ಞತೆ ಸಲ್ಲಿಸಿದರು.
ಉತ್ತಮ ಆರೋಗ್ಯ ಮತ್ತು ದೈಹಿಕ ಸಾಮಾರ್ಥ್ಯವನ್ನು ಕಾಪಾಡಿಕೊಳ್ಳಲು ಕ್ರೀಡೆ ಸಹಕಾರಿಯಾಗಲಿದೆ. ಮಾನಸಿಕವಾಗಿ ಏಕತೆಯ ಭಾವನೆ ಮೂಡಿಸುತ್ತದೆ. ಕರ್ತವ್ಯದಲ್ಲಿನ ಮಾನಸಿಕ ಒತ್ತಡಗಳನ್ನು ತಡೆಯುವ ಶಕ್ತಿ ಕ್ರೀಡೆಯಿಂದ ಬರುತ್ತದೆ. ಜೀವನದಲ್ಲಿ ಅನೇಕಸಲ ಸೋಲು, ಗೆಲುವುಗಳನ್ನು ಕಾಣುತ್ತೇವೆ. ಸೋಲನ್ನು ಸ್ವೀಕರಿಸುವ ಶಕ್ತಿ ಕ್ರೀಡೆಯಿಂದ ಬರುತ್ತದೆ. ಸ್ವತಃ ಕ್ರೀಡಾಪಟುವಾಗಿ ಇಂತಹ ಅನುಭವ ಕಂಡಿದ್ದೇನೆ ಎಂದರು.
ಇನ್ನು ಕೆಲವೇ ದಿನಗಳಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರವು ಬಜೆಟ್ ಮಂಡನೆ ಮಾಡಲಿದೆ. ಈ ಬಜೆಟ್ನಲ್ಲಿ ರಾಜ್ಯ ಪೊಲೀಸರಿಗೆ ವಿಶೇಷ ಅನುದಾನವನ್ನು ಮೀಸಲಿರಿಸುವ ಸಾಧ್ಯತೆ ಇದೆ. ಇದರ ಸುಳಿವನ್ನು ಗೃಹ ಸಚಿವ ಜಿ ಪರಮೇಶ್ವರ್ ಅವರು ಕೊಟ್ಟಿದ್ದಾರೆ.
ಕಾರ್ಯಕ್ರಮದಲ್ಲಿ ಗೃಹ ಸಚಿವರ ಪತ್ನಿ ಕನ್ನಿಕಾ ಪರಮೇಶ್ವರಿ, ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ ಅಲೋಕ್ ಮೋಹನ್, ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಸೇರಿದಂತೆ ಹಲವರು ಇದ್ದರು.
