ಬೆಂಗಳೂರು: ಪಾಲಿಸಿಯ ವ್ಯಾಪ್ತಿಗೆ ಒಳಪಡುವ ಕಾಯಿಲೆಗೆ ವೈದ್ಯರ ಸಲಹೆಯಂತೆ ನಿರಂತರವಾಗಿ ಚಿಕಿತ್ಸೆ ಪಡೆಯುತ್ತಿರುವ ಸಂದರ್ಭದಲ್ಲಿ ಆಸ್ಪತ್ರೆಗೆ ದಾಖಲಾಗಿಲ್ಲ ಎಂಬ ಒಂದೇ ಕಾರಣಕ್ಕೆ ಆರೋಗ್ಯ ವಿಮಾ ಪರಿಹಾರವನ್ನು ನಿರಾಕರಿಸುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಏಕಸದಸ್ಯ ಪೀಠ ಈ ತೀರ್ಪು ನೀಡಿದ್ದು, ವೈದ್ಯಕೀಯ ಕ್ಷೇತ್ರದಲ್ಲಿ ತಂತ್ರಜ್ಞಾನ ಅಭಿವೃದ್ಧಿಯಾದ ಹಿನ್ನೆಲೆಯಲ್ಲಿ ಹಲವು ಚಿಕಿತ್ಸೆಗಳು ಆಸ್ಪತ್ರೆಯಲ್ಲಿ ದಾಖಲಾಗದೆಯೇ ಪಡೆಯಲು ಸಾಧ್ಯವಾಗಿದೆ. ಆದ್ದರಿಂದ ಆಸ್ಪತ್ರೆಗೆ ದಾಖಲಾಗಿರುವುದನ್ನೇ ಚಿಕಿತ್ಸೆಯ ಮಾನದಂಡವನ್ನಾಗಿ ಪರಿಗಣಿಸುವುದು ಸಮಂಜಸವಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ನಾಲ್ಕನೇ ಹಂತದ ಪ್ರಾಸ್ಟೇಟ್ ಕ್ಯಾನ್ಸರ್ನಿಂದ ಬಳಲುತ್ತಿದ್ದ ಪದ್ಮನಾಭ ಶೆಟ್ಟಿ ಅವರಿಗೆ ವೈದ್ಯರ ಸಲಹೆಯಂತೆ ನೀಡಲಾಗಿದ್ದ ₹2.85 ಲಕ್ಷ ಮೌಲ್ಯದ ಇಂಜೆಕ್ಷನ್ಗಳ ಚಿಕಿತ್ಸಾ ವೆಚ್ಚವನ್ನು ಮರುಪಾವತಿಸುವಂತೆ ಶಾಶ್ವತ ಲೋಕ ಅದಾಲತ್ ನೀಡಿದ್ದ ಆದೇಶವನ್ನು ನ್ಯಾಷನಲ್ ಇನ್ಶೂರೆನ್ಸ್ ಕಂಪನಿ ಪ್ರಶ್ನಿಸಿತ್ತು.
ರೋಗಿಗೆ ಬ್ಯಾಂಕ್ ನಿವೃತ್ತ ನೌಕರರ ಆರೋಗ್ಯ ವಿಮಾ ಯೋಜನೆಯಡಿ ವಾರ್ಷಿಕ ₹9 ಲಕ್ಷದವರೆಗೆ ವಿಮಾ ರಕ್ಷಣೆ ಇತ್ತು. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅವರು ಕೀಮೋಥೆರಪಿ ಸೇರಿದಂತೆ ಚಿಕಿತ್ಸೆ ಪಡೆದಿದ್ದರು. ಆಸ್ಪತ್ರೆಯಲ್ಲಿದ್ದ ಅವಧಿಯ ಚಿಕಿತ್ಸಾ ವೆಚ್ಚವನ್ನು ವಿಮಾ ಸಂಸ್ಥೆ ಭರಿಸಿದ್ದರೂ, ನಂತರ ವೈದ್ಯರ ಸಲಹೆಯಂತೆ ಮೂರು ತಿಂಗಳಿಗೊಮ್ಮೆ ಪಡೆಯಬೇಕಿದ್ದ ಜೀವ ರಕ್ಷಕ ಇಂಜೆಕ್ಷನ್ಗಳ ವೆಚ್ಚವನ್ನು ಹೊರರೋಗಿ ಚಿಕಿತ್ಸೆ ಎಂಬ ಕಾರಣ ನೀಡಿ ನಿರಾಕರಿಸಿತ್ತು.
ಈ ನಿರ್ಧಾರವನ್ನು ಹೈಕೋರ್ಟ್ ಒಪ್ಪಲಿಲ್ಲ. ಕ್ಯಾನ್ಸರ್ನಂತಹ ಗಂಭೀರ ಕಾಯಿಲೆಯ ನಿರಂತರ ಚಿಕಿತ್ಸೆಯ ಭಾಗವಾಗಿಯೇ ವೈದ್ಯರು ಇಂಜೆಕ್ಷನ್ಗಳನ್ನು ಶಿಫಾರಸು ಮಾಡಿರುವುದು ಸಾಬೀತಾಗಿರುವಾಗ, ಕೇವಲ ರೋಗಿ ಆಸ್ಪತ್ರೆಗೆ ದಾಖಲಾಗಿಲ್ಲ ಎಂಬ ಕಾರಣಕ್ಕೆ ಅದರ ವೆಚ್ಚವನ್ನು ತಿರಸ್ಕರಿಸುವುದು ಸರಿಯಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
“ಆಸ್ಪತ್ರೆಗೆ ದಾಖಲಾಗುವುದು ಚಿಕಿತ್ಸೆಯ ಒಂದು ವಿಧಾನವೇ ಹೊರತು, ಚಿಕಿತ್ಸೆಯ ಅಂತಿಮ ಗುರಿಯಲ್ಲ” ಎಂಬ ಮಹತ್ವದ ಅಭಿಪ್ರಾಯವನ್ನು ನ್ಯಾಯಾಲಯ ವ್ಯಕ್ತಪಡಿಸಿದೆ.
ವಿಮಾ ಕಂಪನಿಯ ಅರ್ಜಿಯನ್ನು ವಜಾಗೊಳಿಸಿದ ಹೈಕೋರ್ಟ್, ಪದ್ಮನಾಭ ಶೆಟ್ಟಿ ಅವರಿಗೆ ₹2.85 ಲಕ್ಷವನ್ನು ಬಡ್ಡಿ ಸಮೇತ ಮರುಪಾವತಿಸುವಂತೆ ಆದೇಶಿಸಿದೆ. ಜೊತೆಗೆ ಅರ್ಜಿದಾರ ವಿಮಾ ಕಂಪನಿಗೆ ₹50 ಸಾವಿರ ದಂಡವನ್ನೂ ವಿಧಿಸಿದೆ.
ಈ ತೀರ್ಪಿನಿಂದ ಆಸ್ಪತ್ರೆಯಲ್ಲಿ ದಾಖಲಾಗದೆ ಇಂಜೆಕ್ಷನ್, ಔಷಧಿ ಅಥವಾ ಇತರ ನಿರಂತರ ಚಿಕಿತ್ಸೆಯನ್ನು ಪಡೆಯುತ್ತಿರುವ ವಿಮಾದಾರರಿಗೆ ಮಹತ್ವದ ಕಾನೂನು ರಕ್ಷಣೆ ದೊರೆತಂತಾಗಿದೆ.
