ಸಕಲೇಶಪುರ- ಎಆರ್ಟಿಓ ಕಚೇರಿ ದಲ್ಲಾಳಿಗಳಿಂದ ಮುಕ್ತವಾಗಿ ಸಾರ್ವಜನಿಕರಿಗೆ ನೇರ ಪ್ರವೇಶವಿರಬೇಕು ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.
ತಾಲೂಕಿನ ಬಾಗೆ ಗ್ರಾಮದಲ್ಲಿ ನೂತನ ಎಆರ್ಟಿಓ ಕಚೇರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಸುಮಾರು 20 ವರ್ಷಗಳಿಂದ ಎಆರ್ಟಿಓ ಕಚೇರಿ ಬಾಳೆಗದ್ದೆಯಲ್ಲಿರುವ ಖಾಸಗಿ ಕಟ್ಟಡವೊಂದರಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಆದರೆ ಸದರಿ ಜಾಗವು ಕಿರಿದಾಗಿದ್ದರಿಂದ ಸಾರ್ವಜನಿಕರಿಗೆ ಕೆಲವೊಂದು ಸೇವೆಗಳನ್ನು ತ್ವರಿತವಾಗಿ ನೀಡಲು ಅನಾನುಕೂಲವಾಗಿತ್ತು. ಈ ನಿಟ್ಟಿನಲ್ಲಿ ಉತ್ತಮ ಎಆರ್ಟಿಓ ಕಚೇರಿ ಆಗಬೇಕೆಂಬ ದೃಷ್ಟಿಯಿಂದ ಬಾಗೆ ಗ್ರಾಮದಲ್ಲಿ ಹೊಸ ಕಚೇರಿಗೆ ಭೂಮಿ ಪೂಜೆ ನೆರವೇರಿಸಲಾಗಿದೆ ಎಂದರು.
ಎರಡು ಕಾಮಗಾರಿಗಳನ್ನು ಜೊತೆಯಾಗಿ ಮಾಡಲಾಗುತ್ತಿದ್ದು, ಎಆರ್ಟಿಓ ಕಚೇರಿ ನಿರ್ಮಾಣಕ್ಕೆ 4 ಕೋಟಿ ರೂ. ಅನುದಾನ ಮೀಸಲಿಡಲಾಗಿದ್ದು, ದ್ವಿಚಕ್ರ ಹಾಗೂ ನಾಲ್ಕು ಚಕ್ರ ವಾಹನಗಳ ಟ್ರ್ಯಾಕ್ಗೆ 5 ಕೋಟಿ ರೂ. ಮಂಜೂರಾಗಿದ್ದು, ಒಟ್ಟು 9 ಕೋಟಿ ರೂಗಳ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲಾಗಿದೆ. ಇಲ್ಲಿ ಸುಮಾರು 4.5 ಎಕರೆ ಜಾಗವಿದ್ದು, ಇದರಿಂದ ಸಾರ್ವಜನಿಕರಿಗೆ ಅನುಕೂಲವಾಗುವುದರಲ್ಲಿ ಅನುಮಾನವಿಲ್ಲ ಎಂದರು
ಈಗ ನಿರ್ಮಾಣವಾಗುತ್ತಿರುವ ಕಚೇರಿಯಿಂದ ಸಾರ್ವಜನಿಕರಿಗೆ ಸಮಸ್ಯೆ ಅನಾನುಕೂಲವಾಗುವ ಸಾಧ್ಯತೆ ಹೆಚ್ಚು, ಮುಖ್ಯ ರಸ್ತೆಯಿಂದ ಇಲ್ಲಿಗೆ ಬರಲು ಜಾಗ ಅತ್ಯಂತ ಕಿರಿದಾಗಿದೆ. ಒಂದು ವಾಹನ ಬಂದರೆ ಮತ್ತೊಂದು ವಾಹನ ಹೋಗಲು ಅವಕಾಶವಿಲ್ಲ. ಇಷ್ಟೆಲ್ಲಾ ಹಣ ಖರ್ಚುಮಾಡಿ ವಾಹನಗಳು ಸರಾಗವಾಗಿ ತಿರುಗಾಡದಿದ್ದರೆ ಸಾರ್ವಜನಿಕರಿಗೆ ಅನಾನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಎಆರ್ಟಿಓ ಕಚೇರಿಗೆ ಹೋಗುವ ರಸ್ತೆಯು ಸಾರ್ವಜನಿಕರು ನೆಮ್ಮದಿಯಾಗಿ ತಿರುಗಾಡುವಂತಿರಬೇಕು. ಕನಿಷ್ಠ 15ರಿಂದ 20 ಅಡಿ ಅಗಲದ ರಸ್ತೆಯನ್ನು ಇಲ್ಲಿಗೆ ವಿಸ್ತರಿಸಲು ನಾನು ತಹಶೀಲ್ದಾರರೊಂದಿಗೆ ಚರ್ಚೆ ಮಾಡುತ್ತೇನೆ ಎಂದು ಅವರು ಹೇಳಿದರು.
ಎಆರ್ಟಿಓ ಮುರಳಿ ಮಾತನಾಡಿ, 2018–19ರಲ್ಲಿ ಎಆರ್ಟಿಓ ಕಚೇರಿ ಮಾಡಲು ಜಾಗ ಮಂಜೂರಾಯಿತು. ಆದರೆ ಬಹಳ ನಿಧಾನಗತಿಯಲ್ಲಿ ಯೋಜನೆಗೆ ಚಾಲನೆ ದೊರಕಿತು. ಇಲ್ಲಿ ದ್ವಿಚಕ್ರ ವಾಹನ, ನಾಲ್ಕು ಚಕ್ರ ವಾಹನಗಳ ಟೆಸ್ಟಿಂಗ್ ಟ್ರ್ಯಾಕ್ ಹಾಗೂ ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿಯನ್ನು ನಿರ್ಮಾಣ ಮಾಡಲಾಗುತ್ತದೆ. ಮುಂದಿನ ದಿನಗಳಲ್ಲಿ ಇದು ಪ್ರಾದೇಶಿಕ ಸಾರಿಗೆ ಕಚೇರಿಯಾಗಿ ಉನ್ನತಿಕರಣವಾಗುವುದು ನಿರೀಕ್ಷಿತ ಎಂದರು.
ಸಧ್ಯ ಕಾರ್ಯ ನಿರ್ವಹಿಸುತ್ತಿರುವ ಕಟ್ಟಡ ಕಿರಿದಾಗಿದ್ದರಿಂದ ಸಾರ್ವಜನಿಕರಿಗೆ ಅನಾನುಕೂಲವಾಗುತ್ತಿತ್ತು. ಅಲ್ಲದೆ ವಾಹನಗಳ ಸಂಖ್ಯೆ ಹೆಚ್ಚಾಗಿ, ಕಡತಗಳನ್ನು ಇಡಲು ಹಾಗೂ ಮತ್ತಿತರ ಸೇವೆಗಳನ್ನು ತ್ವರಿತವಾಗಿ ನೀಡಲು ಕಷ್ಟಕರವಾಗುತ್ತಿತ್ತು. ಹೊಸ ಕಟ್ಟಡ ನಿರ್ಮಾಣದಿಂದ ಸಾರ್ವಜನಿಕರಿಗೆ ವೇಗವಾಗಿ ಸೇವೆ ನೀಡಲು ಸಾಧ್ಯವಾಗುತ್ತದೆ. ಈಗಾಗಲೇ ನಮ್ಮ ಇಲಾಖೆಯಲ್ಲಿ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಸೇವೆ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸಂಪೂರ್ಣವಾಗಿ ತಂತ್ರಜ್ಞಾನ ಆಧಾರಿತ ಸೇವೆಗಳನ್ನು ನೀಡಲಾಗುವುದು. ಇಲ್ಲಿ ನಿರ್ಮಾಣವಾಗುತ್ತಿರುವ ಟ್ರ್ಯಾಕ್ ಸಂಪೂರ್ಣ ಎಲೆಕ್ಟ್ರಾನಿಕ್ ಆಗಿರುತ್ತದೆ ಎಂದು ಅವರು ಹೇಳಿದರು.

ಈ ಸಂದರ್ಭ ಬಾಗೆ ಗ್ರಾ.ಪಂ ಅಧ್ಯಕ್ಷೆ ರೇಖಾ ಗೋಪಿನಾಥ್, ಉಪಾಧ್ಯಕ್ಷೆ ವನಜಾಕ್ಷಿ, ಗ್ರಾ.ಪಂ ಸದಸ್ಯರಾದ ಪುಷ್ಪ, ಕವಿತಾ, ಕೆಎಸ್ಆರ್ಟಿಸಿ ಅಧಿಕಾರಿಗಳಾದ ರಂಗರಾಜ್, ಶ್ರೀಹರ್, ಎಆರ್ಟಿಓ ಅಧಿಕಾರಿಗಳಾದ ಆಶಾ, ಮೋಹನ್ ಕುಮಾರ್, ಬಿಜೆಪಿ ಮುಖಂಡರಾದ ಜೈಪ್ರಕಾಶ್ ದೊಡ್ಡದೀಣೆ, ಅಶ್ವಥ್, ಅಗ್ನಿ ಸೋಮು, ನೇತ್ರಾವತಿ ಮಂಜುನಾಥ್, ಲೋಕೇಶ್, ವೈ.ಡಿ. ಬಸವಣ್ಣ, ಶಿವಕುಮಾರ್, ಪ್ರದೀಪ್, ರಾಕೇಶ್ ಮುಂತಾದವರು ಹಾಜರಿದ್ದರು.
