ಬೆಂಗಳೂರು : ಭಾರತೀಯ ಸಾಹಿತ್ಯ ಲೋಕಕ್ಕೆ ಗತಕಾಲದ ವೈಭವವನ್ನು ಜಗತ್ತಿಗೆ ಪರಿಚಯಿಸುವ ಕೆಲಸವನ್ನು ಕನ್ನಡಪರ ಸಂಘಸಂಸ್ಥೆಗಳು ಹೆಚ್ಚು ಜವಾಬ್ದಾರಿ ಹೊರಬೇಕಿದೆ ಎಂದು ಶೇಷಾದ್ರಿಪುರಂ ಕಾಲೇಜಿನ ಕನ್ನಡ ಪ್ರಾಧ್ಯಾಪಕ, ಕವಿ ಡಾ.ಎಸ್.ರಾಮಲಿಂಗೇಶ್ವರ ಅಭಿಪ್ರಾಯಪಟ್ಟರು.
ಅವರು ನಗರದ ಬಿಎಂಶ್ರೀ ಪ್ರತಿಷ್ಠಾನವು ಏರ್ಪಡಿಸಿದ್ದ ಸಿ.ಕೆ.ನಾಗರಾಜರಾವ್,ಕೆ.ಪಿ.ರಾವ್ ಮತ್ತು ಕೊರಟಿ ಶ್ರೀನಿವಾಸರಾವ್ ದತ್ತಿ ಅಡಿಯಲ್ಲಿ “ಸಾಹಿತ್ಯ ಸಂಸ್ಕೃತಿ ಸಂವರ್ಧನೆಗೆ ಸಂಘಟನೆಗಳ ಪಾತ್ರ ಕುರಿತು ವಿಶೇಷ ಉಪನ್ಯಾಸ ನೀಡುತ್ತಾ ಮಾತನಾಡಿದರು.
ಎರಡೂವರೆ ಸಾವಿರ ಇತಿಹಾಸ ಇರುವ ಕನ್ನಡ ಭಾಷೆ, ಸಾಹಿತ್ಯ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ, ಕನ್ನಡ ಸಂಘಸಂಸ್ಥೆಗಳ ಪಾತ್ರ ಮಹತ್ವದ್ದು, ಆದಿಕವಿ ಪಂಪ ಮಹಾಕವಿಯಿಂದಿಡಿದು ಇಪ್ಪತ್ತನೇ ಶತಮಾನದ ಮಹಾಕವಿ ಕುವೆಂಪು ಅವರೆಗೂ ಕನ್ನಡವು ಪ್ರವರ್ಧಮಾನಕ್ಕೆ ಬಂದಿದೆ. ಆಯಾಯ ಕಾಲಘಟ್ಟದಲ್ಲಿ ಬದಲಾವಣೆ ಹೊಂದುತ್ತಾ ಬರುತ್ತಿರುವ ಭಾಷೆಯು 40 ಕಿಲೋಮೀಟರ್ ದೂರದ ಅಂತರದಲ್ಲಿ ನಾವಾಡುವ ಭಾಷೆ , ಉಚ್ಚಾರಣೆ ಬದಲಾಗುತ್ತದೆ.

ಕನ್ನಡದ ಹೆಸರಿನಲ್ಲಿ ಇರುವ ಸಾವಿರಾರು ಸಂಘಸಂಸ್ಥೆಗಳು , ಹೋರಾಟದ ಜೊತೆಗೆ, ಸರ್ಕಾರದ ಜೊತೆಗೆ ಕೈಜೋಡಿಸಿ ವಿವಿಧ ವಿಚಾರ ವಿಷಯಗಳನ್ನು ಪರಾಮರ್ಶೆ ಮಾಡಬೇಕಿದೆ. ಒಂದನೇ ತರಗತಿಯಿಂದ ಹತ್ತನೆಯ ತರಗತಿಯವರೆಗೆ ಕನ್ನಡ ಮಾಧ್ಯಮವಾಗಬೇಕಿದೆ, ಉನ್ನತ ಶಿಕ್ಷಣದಲ್ಲಿ ಕನ್ನಡ ಪ್ರಥಮ ಭಾಷೆಯಾಗಿ ಕಡ್ಡಾಯವಾಗಿ ಓದಲೇಬೇಕು, ಬರೆಯಲೇಬೇಕು, ಮಾತನಾಡುವಂತೆ, ವ್ಯವಹರಿಸುವಂತಹ ಶಿಕ್ಷಣದ ಅವಶ್ಯಕತೆ ತುಂಬಾ ಅನಿವಾರ್ಯ ಆಗಬೇಕಿದೆ ಎಂದರು. ಹೊರರಾಜ್ಯಗಳಿಂದ ಉದ್ಯೋಗ ಅರಸಿ ಬಂದ ಪರಭಾಷಿಕರು ಕನ್ನಡ ಕಲಿಯದೆ, ಅವರಿಗೆ ಯಾವುದೇ ಸರ್ಕಾರಿ, ಅರೆ ಸರ್ಕಾರಿ, ಸಣ್ಣ ಪುಟ್ಟ ಕಂಪನಿಯವರೂ ಕೂಡಾ ಉದ್ಯೋಗ ನೀಡಬಾರದು. ಆವಾಗ ಕನ್ನಡ ಭಾಷೆ ಸಾಹಿತ್ಯ ಸಂಸ್ಕೃತಿ ಸಂವರ್ಧನೆ ತನ್ನಿಂದ ತಾನೇ ಬೆಳವಣಿಗೆ ಆಗುತ್ತದೆ.

ಕನ್ನಡ ಸಾಹಿತ್ಯ ಪರಿಷತ್ತು, ಬಿಎಂಶ್ರೀ ಪ್ರತಿಷ್ಠಾನ, ಉದಯ ಭಾನು ಕಲಾ ಸಂಘ, ಕರ್ನಾಟಕ ರಕ್ಷಣಾ ವೇದಿಕೆಯಂತಹ ಸಂಸ್ಥೆಗಳು ಕನ್ನಡ ನಾಡಿನಲ್ಲಿ ಚಟುವಟಿಕೆಗಳಿಂದ ಕೂಡಿರುವ ಸಂಘಸಂಸ್ಥೆಗಳನ್ನು ವರ್ಷಕ್ಕೊಮ್ಮೆ ಆದರೂ ಸಭೆ ಸಮಾರಂಭ ಮಾಡಿ ಅವರಿಗೆ ಕನ್ನಡ ಭಾಷಾ ಸೌಹಾರ್ದತೆಗೆ, ಬೆಳವಣಿಗೆಗೆ ಪೂರಕವಾದ ವಾತಾವರಣ ಸೃಷ್ಟಿ ಮಾಡಲು ಅನುವು ಮಾಡಿಕೊಡುವ ಪ್ರಯತ್ನ ಆಗಲಿ , ಮಾರ್ಗದರ್ಶನ ನೀಡುವಂತಾಗಬೇಕು ಎಂದರು. ಕರ್ನಾಟಕ ಸರ್ಕಾರದ ಅಡಿಯಲ್ಲಿ ಹತ್ತಾರು ಅಕಾಡೆಮಿ, ಪ್ರಾಧಿಕಾರಗಳು, ಸಂಘಸಂಸ್ಥೆಗಳು ಲಕ್ಷಾಂತರ ರೂಪಾಯಿ ಅನುದಾನ ಪಡೆಯುವವರು ತಮ್ಮ ತಮ್ಮ ಮಟ್ಟದಲ್ಲಿ ಎಷ್ಟು ಕನ್ನಡ ಬೆಳವಣಿಗೆ ಆಗಿದೆ, ಕೊಟ್ಟ ಹಣ ಪ್ರಯೋಜನ ಆಗಿದೆಯಾ ಪರಿಶೀಲಿಸಬೇಕು.
ಬೇರೆ ಯಾವ ರಾಜ್ಯದಲ್ಲಿಯೂ ಭಾಷೆಯ ಬೆಳವಣಿಗೆಗೆ ನಮ್ಮಲ್ಲಿ ಇರುವ ಹಾಗೆ ಸರ್ಕಾರದ ಮಟ್ಟದಲ್ಲಿ ಅಕಾಡೆಮಿ ಆಗಲಿ, ಪ್ರಾಧಿಕಾರ ಆಗಲಿ, ಸಂಘಸಂಸ್ಥೆಗಳಾಗಲಿ ಇಲ್ಲ. ಆದರೆ ಆಯಾ ರಾಜ್ಯ ಸರ್ಕಾರಗಳು ಆಡಳಿತದಲ್ಲಿ, ಮನೆ, ಮನಸ್ಸು ಎಲ್ಲವೂ ಅವರ ಭಾಷೆಯೇ ಇರುವುದು, ಅವರೆಲ್ಲರ ಅಭಿಮಾನವೂ ಕಾರಣವಾಗಿರುವುದೇ ಆ ಭಾಷೆಗಳು ಬೆಳೆಯಲು, ಯಾವುದೇ ಸಮಸ್ಯೆ ಇಲ್ಲದಿರುವುದು ಕಾರಣ ಎಂದರು.
ಯುವ ಮನಸ್ಸುಗಳನ್ನು ಕನ್ನಡದ ಕಡೆಗೆ ಕರೆದುತರುವ , ಅಭಿಮಾನ, ಮನಸ್ಸು ಮೂಡುವಂತಹ ಕಾರ್ಯಕ್ರಮ ಕಮ್ಮಟ, ಶಿಬಿರ ಆಯೋಜಿಸಬೇಕು ಎಂದರು.
ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಬೈರಮಂಗಲ ರಾಮೇಗೌಡರು ಅಧ್ಯಕ್ಷತೆ ವಹಿಸಿ ಕನ್ನಡ ಸಾಹಿತ್ಯ ಭಾಷೆ, ಸಂಸ್ಕೃತಿ ಸಂವರ್ಧನೆಗೆ ಹತ್ತು ಹಲವು ಗಣ್ಯರು ಸಂಘಟನೆ ಮೂಲಕ ತಮ್ಮ ಅಳಿಲು ಸೇವೆ ಸಲ್ಲಿಸಿದ್ದಾರೆ, ಅದನ್ನು ಉಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು. ಸಮಾರಂಭದಲ್ಲಿ ದತ್ತಿ ದಾನಿಗಳು, ಕಾರ್ಯದರ್ಶಿ ಡಾ.ಶಾಂತರಾಜು, ಕೋಶಾಧಿಕಾರಿ ಚಂದ್ರಶೇಖರ ನಾದೂರು, ಗುರುಪ್ರಸಾದ್ ಮುಂತಾದವರಿದ್ದರು.
