ಉತ್ತರಖಂಡದ :-ಚಾರ್ಧಾಮ್ ಯಾತ್ರೆ ಆರಂಭವಾಗಿದೆ. ಅಕ್ಷಯ ತೃತೀಯದಿಂದ ನಾಲ್ಕು ಧಾಮಗಳಲ್ಲಿ ಒಂದಾದ ಕೇದಾರನಾಥ ದೇವಾಲಯವನ್ನು ತೆರೆಯಲಾಗಿದ್ದು ಇಂದಿನಿಂದ (ಮೇ 2)ಭಕ್ತರ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಇಂದು ಬೆಳಿಗ್ಗೆ 7 ಗಂಟೆಯಿಂದ ಭಕ್ತರ ದರ್ಶನಕ್ಕಾಗಿ ದೇವಾಲಯ ತೆರೆಯಲಾಗಿದೆ.
ಪ್ರತೀ ವರ್ಷ ಚಾರ್ ಧಾಮ್ ಯಾತ್ರೆ ಕೇವಲ ಆರು ತಿಂಗಳು ಮಾತ್ರ ಇರುತ್ತದೆ. ಇನ್ನೂ ಆರು ತಿಂಗಳು ಇಲ್ಲಿ ಹೆಚ್ಚು ಹಿಮಪಾತವಾಗುವುದರಿಂದ ದೇವಸ್ಥಾನದ ಬಾಗಿಲು ಮುಚ್ಚಲಾಗುತ್ತದೆ. ದೀಪಾವಳಿಯ ಎರಡು ದಿನಗಳ ನಂತರ ಅಂದರೆ ಭಾಯಿ ದೂಜ್ ದಿನದಂದು ಕೇದಾರನಾಥ ದೇವಾಲಯವನ್ನು ಮುಚ್ಚಲಾಗುತ್ತದೆ. ಚಳಿಗಾಲದ ತಿಂಗಳುಗಳಲ್ಲಿ ದೇವಾಲಯ ಹಿಮದಿಂದ ಆವೃತವಾಗಿರುತ್ತದೆ. ಜೊತೆಗೆ ಭಕ್ತರಿಗೆ ದರ್ಶನಕ್ಕೆ ಅವಕಾಶ ಇರುವುದಿಲ್ಲ. ಇಂದು ದೇವಸ್ಥಾನದ ಬಾಗಿಲು ತೆರೆಯುವುದರಿಂದ ದೇವಸ್ಥಾನವನ್ನು 108 ಕ್ವಿಂಟಾಲ್ ಹೂವುಗಳಿಂದ ಅಲಂಕರಿಸಲಾಗಿದೆ.
ಇನ್ನೂ ಕೇದಾರನಾಥ ದೇವಾಲಯದ ಬಾಗಿಲು ತೆರೆದಿರುವುದರಿಂದ ಕೇದಾರನಾಥ ಧಾಮ ಯಾತ್ರೆಗೆ ಹೆಲಿಕಾಪ್ಟರ್ ಸೇವೆಗಳು ಮೇ 1 ರಿಂದ ಉತ್ತರಾಖಂಡದ ಸೋನ್ಪ್ರಯಾಗದಿಂದ ಪ್ರಾರಂಭವಾಗಿವೆ. ಹೆಲಿಕಾಪ್ಟರ್ ಮೂಲಕ ಭಕ್ತರು ಸುಲಭವಾಗಿ ದೇವಾಲಯವನ್ನು ತಲುಪಬಹುದು.
ಬುಧವಾರ (ಏಪ್ರಿಲ್ 30) ಬೆಳಿಗ್ಗೆ ಗಂಗೋತ್ರಿ ದೇವಾಲಯದ ಬಾಗಿಲನ್ನು ಬೆಳಿಗ್ಗೆ 10:30 ಕ್ಕೆ ವಿಶೇಷ ಪೂಜೆ ಮತ್ತು ಅಭಿಷೇಕದೊಂದಿಗೆ ತೆರೆಯಲಾಯಿತು. ಇನ್ನೂ ಯಮುನೋತ್ರಿ ಧಾಮದ ಬಾಗಿಲನ್ನು ಇದೇ ದಿನ ಬೆಳಿಗ್ಗೆ 11:55 ಕ್ಕೆ ಧಾರ್ಮಿಕ ವಿಧಿವಿಧಾನಗಳೊಂದಿಗೆ ಭಕ್ತರಿಗಾಗಿ ತೆರೆಯಲಾಯಿತು. ಬಾಗಿಲು ತೆರೆಯುವ ಸಂದರ್ಭದಲ್ಲಿ ದೇಶ ಮತ್ತು ವಿದೇಶಗಳಿಂದ ಸಾವಿರಾರು ಭಕ್ತರು ಅಖಂಡ ಜ್ಯೋತಿಯ ದರ್ಶನ ಪಡೆದು ಗಂಗಾ ಮತ್ತು ಯಮುನೆಯಲ್ಲಿ ಸ್ನಾನ ಮಾಡುವ ಮೂಲಕ ಪುಣ್ಯ ಗಳಿಸಿದರು.
ಗಂಗೋತ್ರಿ ಮತ್ತು ಯಮುನೋತ್ರಿ ಧಾಮದ ಉದ್ಘಾಟನಾ ಸಮಾರಂಭಗಳಲ್ಲಿ ಭಾಗವಹಿಸಿದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಮಾತೃ ಗಂಗಾ ಮತ್ತು ಯಮುನೆ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಅಲ್ಲದೆ ಬದರೀನಾಥ ಯಾತ್ರೆ ಮೇ 4ರಂದು ಬೆಳಿಗ್ಗೆ 6:00 ಗಂಟೆಗೆ ಪ್ರಾರಂಭವಾಗಲಿದೆ. ಬದರೀನಾಥ ದೇವಾಲಯದ ದ್ವಾರಗಳನ್ನು ಭಾನುವಾರ ಯಾತ್ರಾರ್ಥಿಗಳಿಗಾಗು ತೆರೆಯಲಾಗುತ್ತದೆ.
ಕೇದಾರನಾಥ ಧಾಮದಲ್ಲಿ ಪ್ರಾರಂಭಿಸಲಾದ ಹೆಲಿಕಾಪ್ಟರ್ ಸೇವೆಗಳ ಕುರಿತು, ಆಪರೇಷನ್ ಎಕ್ಸಿಕ್ಯೂಟಿವ್ ಪವನ್ ರಾಣಾ ಮಾತನಾಡಿ, “ಸೇವೆಗಾಗಿ ಆನ್ಲೈನ್ ಟಿಕೆಟ್ಗಳು IRCTC ಯಲ್ಲಿ ಲಭ್ಯವಿದೆ ಮತ್ತು ಆಫ್ಲೈನ್ ಟಿಕೆಟ್ಗಳು DM ಅಥವಾ ಸೆಕ್ಟರ್ ಮ್ಯಾಜಿಸ್ಟ್ರೇಟ್ ಮೂಲಕ ಲಭ್ಯವಿದೆ. ನಾವು ದಿನಕ್ಕೆ ಸುಮಾರು 20-30 ಶಟಲ್ಗಳನ್ನು ನಿರ್ವಹಿಸುತ್ತೇವೆ, 150ಕ್ಕೂ ಹೆಚ್ಚು ಯಾತ್ರಿಕರಿಗೆ ಸೇವೆ ಸಲ್ಲಿಸುತ್ತೇವೆ” ಎಂದಿದ್ದಾರೆ.
ಹವಾಮಾನ ಅನುಕೂಲಕರವಾಗಿದ್ದರೆ 25-30 ಸುತ್ತುಗಳು ಕಾರ್ಯನಿರ್ವಹಿಸುತ್ತವೆ, ಇಲ್ಲದಿದ್ದರೆ ಟಿಕೆಟ್ಗಳನ್ನು ರದ್ದುಗೊಳಿಸಲಾಗುತ್ತದೆ. ಭಕ್ತರ ಭದ್ರತೆಯನ್ನು ಕಾಪಾಡುವುದು ನಮ್ಮ ಮೊದಲ ಆಧ್ಯತೆ. ಪ್ರಯಾಣದ ಮೊದಲು ಪ್ರಯಾಣಿಕರಿಗೆ ಮಾಹಿತಿ ನೀಡಲಾಗುತ್ತದೆ. ದಿನಕ್ಕೆ 150 ಆನ್ಲೈನ್ ಬುಕಿಂಗ್ಗಳು ಮತ್ತು ಮುಂಗಡ ಬುಕಿಂಗ್ಗಳು ಸಹ ಪ್ರಕ್ರಿಯೆಯಲ್ಲಿವೆ. ಬುಕಿಂಗ್ಗಳು ಒಂದು ತಿಂಗಳವರೆಗೆ ತೆರೆದಿರುತ್ತವೆ” ಎಂದಿದ್ದಾರೆ.
ಹೆಲಿಕಾಪ್ಟರ್ ಸೇವೆ ಇರುವುದರಿಂದ ಜೊತೆಗೆ ತಿಂಗಳು ಮೊದಲೇ ಟಿಕೆಟ್ ಬುಕ್ ಆಗುತ್ತಿರುವುದರಿಂದ ಈ ಬಾರಿ ಚಾರ್ ಧಾಮ್ ಯಾತ್ರೆಗೆ ಹೋಗುವ ಭಕ್ತರ ಸಂಖ್ಯೆ ಹೆಚ್ಚಾಗುವ ನಿರೀಕ್ಷೆ ಇದೆ
