ಬೆಂಗಳೂರು- ಕರ್ನಾಟಕ ರಾಜ್ಯದಲ್ಲಿ ನಡೆಯುತ್ತಿರುವ ಕೆಎಎಸ್ ಮೇನ್ಸ್ ಪರೀಕ್ಷೆಯ ಹಿನ್ನಲೆಯಲ್ಲಿ ರಾಜ್ಯದ ಪ್ರಥಮ ದರ್ಜೆಯ ಗೆಜೆಟೆಡ್ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಕರ್ನಾಟಕ ಪಬ್ಲಿಕ್ ಸರ್ವಿಸ್ ಕಮಿಷನ್ (ಕೆಪಿಎಸ್ಸಿ) ಮತ್ತೊಮ್ಮೆ ವಿವಾದಕ್ಕೆ ಸಿಲುಕಿದೆ. ಈ ಬಾರಿ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಅಕ್ರಮ ಪ್ರವೇಶಪತ್ರ ವಿತರಣೆಗೆ ಸಂಬಂಧಿಸಿದ ಆರೋಪಗಳು ಗಂಭೀರ ರೂಪ ಕೇಳಿ ಬಂದಿದೆ.
ಇಂದು ಸಂಜೆ ಸುಮಾರು 4:40ಕ್ಕೆ ಹೈಕೋರ್ಟ್ ಮತ್ತು ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ ನೀಡಿದ ಆದೇಶದಂತೆ, ಸರಿಸುಮಾರು 500 ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಬೇಕೆಂದು ನಿರ್ದೇಶನ ನೀಡಲಾಗಿತ್ತು. ಹೈಕೋರ್ಟ್ ಈ ಪರೀಕ್ಷೆಗಳು ಎಲ್ಲರಿಗೂ ಒಂದೇ ಸಮಯದಲ್ಲಿ ನಡೆಯಬೇಕೆಂದು ಸ್ಪಷ್ಟ ಸೂಚನೆ ನೀಡಿದ್ದು, ಮುಂದಿನ ಜವಾಬ್ದಾರಿಗಳನ್ನು ಕೆಪಿಎಸ್ಸಿ ಹೊಣೆವಹಿಸಬೇಕೆಂದು ಹೇಳಿದ್ದಾರೆ.
ಆದರೆ ಈ ಆದೇಶದ ಬೆನ್ನಲ್ಲೇ ಸಂಜೆ 7:40 ರಿಂದ ನಂತರ, ಕೆಪಿಎಸ್ಸಿ ತನ್ನ ಬೆಂಗಳೂರು ಕಚೇರಿಯಲ್ಲಿ ಸುಮಾರು 270 ರಿಂದ 300 ಅಭ್ಯರ್ಥಿಗಳನ್ನು ಒಳಗಡೆ ಅಕ್ರಮವಾಗಿ ಇರಿಸಿಕೊಂಡು, ಕೇವಲ ಹೆಸರು ಕೇಳಿ ನಾಳಿನ (ಮೇನ್ಸ್) ಪರೀಕ್ಷೆಗೆ ಪ್ರವೇಶಪತ್ರವನ್ನು ಮುದ್ರಿಸಿ ನೀಡುತ್ತಿದೆ ಎಂಬ ಆಕ್ರೋಶಕಾರಿ ಮಾಹಿತಿ ಬಂದಿದೆ. ಇದನ್ನು ಪುಷ್ಟಿಪಡಿಸುವಂತೆ, ಈ ವೇಳೆ ಅಭ್ಯರ್ಥಿಗಳ ಯಾವುದೇ ದಾಖಲೆ ಅಥವಾ ಫೋಟೋ ಕೂಡ ಪಡೆಯಲಾಗುತ್ತಿಲ್ಲ.
ಕೆ ಎ ಎಸ್ ಮೇನ್ಸ್ ಪರೀಕ್ಷೆಯನ್ನು ಬೆಂಗಳೂರು ಮತ್ತು ಧಾರವಾಡದ ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲು ನಿರ್ಧರಿಸಲಾಗಿದ್ದು, ಬೆಳಿಗ್ಗೆ 7 ಗಂಟೆಯವರೆಗೆ ಪ್ರಶ್ನೆಪತ್ರಿಕೆಗಳು ಈ ಎರಡು ಕೇಂದ್ರಗಳ ಕೆಪಿಎಸ್ಸಿ ಕಚೇರಿಗಳಲ್ಲಿಯೇ ಇರುತ್ತವೆ. ಅದೆ ಸಂದರ್ಭದಲ್ಲೇ ಈ ರೀತಿ ಅಭ್ಯರ್ಥಿಗಳನ್ನು ಕಚೇರಿಯಲ್ಲಿ ಇರಿಸುವುದು ಮತ್ತು ಪ್ರವೇಶಪತ್ರಗಳನ್ನು ಅಕ್ರಮವಾಗಿ ವಿತರಿಸುವುದು ಪ್ರಶ್ನೆಪತ್ರಿಕೆ ಸೋರಿಕೆ ಶಂಕೆ ಹುಟ್ಟಿಸುತ್ತಿದೆ.

ಇನ್ನು ಹೆಚ್ಚಿನ ಗೊಂದಲವೆಂದರೆ, ಈ 500 ಅಭ್ಯರ್ಥಿಗಳ ಪೈಕಿ ಕೇವಲ 119 ಅಭ್ಯರ್ಥಿಗಳ ಹೆಸರುಗಳನ್ನು ಮಾತ್ರ ಕೆಪಿಎಸ್ಸಿ ತನ್ನ ಅಧಿಕೃತ ವೆಬ್ಸೈಟ್ನಲ್ಲಿ ಪ್ರಕಟಿಸಿದ್ದು, ಉಳಿದ ಅಭ್ಯರ್ಥಿಗಳ ಮಾಹಿತಿ ನೀಡಿಲ್ಲ. ಮಧ್ಯರಾತ್ರಿ 12ರ ವರೆಗೆ ದಾಖಲೆಗಳನ್ನು ಪಡೆದು ಪ್ರವೇಶಪತ್ರ ನೀಡುವುದಾಗಿ ರಾತ್ರಿ 9:40ಕ್ಕೆ ಪ್ರಕಟಣೆಯನ್ನು ಹೊರಡಿಸಲಾಗಿದೆ. ಇದರಿಂದ ದೂರದ ಊರುಗಳಿಂದ ಬರುವ ಅಭ್ಯರ್ಥಿಗಳು ಹೇಗೆ ಸಮಯಕ್ಕೆ ತಲುಪುತ್ತಾರೆ ಎಂಬ ಪ್ರಶ್ನೆ ಉದ್ಭವವಾಗಿದೆ.
ಇನ್ನೊಂದೆಡೆ, ಸರ್ಕಾರದ ಪರವಾಗಿ ಎಲ್. ಅತೀಕ್ ಹಾಗೂ ಕೆಪಿಎಸ್ಸಿಯ ಅಧ್ಯಕ್ಷರು, ಸದಸ್ಯರು ಖಾಸಗಿ ಹೋಟೆಲ್ನಲ್ಲಿ ಸಭೆ ನಡೆಸುತ್ತಿರುವಾಗ, ಕಚೇರಿ ರಾತ್ರಿ 12:30ರವರೆಗೆ ತೆರೆಯುವುದು ಕಾನೂನು ಉಲ್ಲಂಘನೆ ಎಂಬ ಆರೋಪ ಕೇಳಿಬಂದಿದೆ.
ಅತ್ಯಂತ ಗಂಭೀರವಾದ ವಿಷಯವೆಂದರೆ, ಅಭ್ಯರ್ಥಿಗಳ ಪ್ರವೇಶಪತ್ರದಲ್ಲಿ ಕಡ್ಡಾಯವಾಗಿರುವ ಕ್ಯೂಆರ್ ಕೋಡ್ ಕೂಡ ಇಲ್ಲದೆ ಬಿಡುಗಡೆ ಮಾಡಲಾಗಿದೆ. ಇದರಿಂದ ನಕಲಿ ಅಭ್ಯರ್ಥಿಗಳು ಪರೀಕ್ಷೆ ಬರೆಯುವ ಸಾಧ್ಯತೆ ಹೆಚ್ಚಾಗಿದ್ದು, ಪರೀಕ್ಷೆಯ ಗೌಪ್ಯತೆ ಹಾಗೂ ನಿಷ್ಠೆ ಗಂಭೀರ ಪ್ರಶ್ನೆಗೊಳಗಾಗಿದೆ.
ಈ ಎಲ್ಲ ಬೆಳವಣಿಗೆಯ ನಡುವೆ, ಕೆಪಿಎಸ್ಸಿಯ ಈ ರೀತಿಯ ಅವ್ಯವಸ್ಥಿತ ಹಾಗೂ ಅನುಚಿತ ನಡೆಗಳು ಕಾನೂನಿಗೆ ವಿರುದ್ಧವಾಗಿದ್ದು, ರಾಜ್ಯದ ಪ್ರಥಮ ದರ್ಜೆ ಹುದ್ದೆಗಳ ನೇಮಕಾತಿಯು ನ್ಯಾಯಸಮ್ಮತ ಹಾಗೂ ಪಾರದರ್ಶಕವಾಗಿ ನಡೆಯುತ್ತಿದೆಯೇ ಎಂಬುದರ ಕುರಿತು ಗಂಭೀರ ಶಂಕೆಗಳನ್ನು ಹುಟ್ಟಿಸಿವೆ.
