ಗಡಿಯಲ್ಲಿ ಮುಂದುವರಿದ ಉದ್ವಿಗ್ನ ಪರಿಸ್ಥಿತಿ: ಮುಂದುವರೆದ ಪಾಕ್ ಪುಂಡಾಟ; ಸತತ 9ನೇ ದಿನವೂ ಕದನ ವಿರಾಮ ಉಲ್ಲಂಘನೆ, ಸೇನೆ ದಿಟ್ಟ ಉತ್ತರ

ಶ್ರೀನಗರ: ಪಹಲ್ಗಾಮ್ ಉಗ್ರರ ದಾಳಿ ಬಳಿಕ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧ ಮತ್ತಷ್ಟು ಹಳಸಿದ್ದು, ಉಭಯ ರಾಷ್ಟ್ರಗಳಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಸತತ 9ನೇ ದಿನವೂ ಜಮು ಮತ್ತು ಕಾಶೀರದ ಗಡಿ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನಿ ಪಡೆಗಳು ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದು, ಭಾರತೀಯ ಸೇನೆ ಇದ್ದಕ್ಕೆ ತಕ್ಕ ಪ್ರತಿಕ್ರಿಯೆ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಮೂರು ಗಡಿ ಜಿಲ್ಲೆಗಳಲ್ಲಿ ಪಾಕ್ ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದು, ಸತತ 9ನೇ ದಿನದ ರಾತ್ರಿಯೂ ಕದನ ವಿರಾಮ ಉಲ್ಲಂಘನೆಯಾಗಿದೆ ಎಂದು ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾದ ಕುಪ್ವಾರಾ, ಉರಿ ಮತ್ತು ಅಖ್ನೂರ್ ಗಡಿ ನಿಯಂತ್ರಣ ರೇಖೆಯಲ್ಲಿ ಪಾಕ್ ಕದನ ವಿರಾಮ ಉಲ್ಲಂಘಿಸಿದ್ದು, ಭಾರತೀಯ ಸೇನೆ ತಕ್ಕ ಪ್ರತ್ಯುತ್ತರ ನೀಡಿದೆ ಎಂದು ತಿಳಿಸಿದ್ದಾರೆ.
****
ಪಹಲ್ಗಾಮ್ ಉಗ್ರ ದಾಳಿ; ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸುವ ಸಮಯ ಬಂದಿದೆ: CWC
ನವದೆಹಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ಜಾತಿ ಜನಗಣತಿಗೆ ಸಂಬಂಧಿಸಿದಂತೆ ಇಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸಭೆ ನಡೆಯಿತು. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಸಚಿನ್ ಪೈಲಟ್, ಭೂಪೇಶ್ ಪಟೇಲ್ ಸೇರಿದಂತೆ ಹಿರಿಯ ನಾಯಕರು ಸಭೆಯಲ್ಲಿ ಪಾಲ್ಗೊಂಡಿದ್ದರು. ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಸಂಬಂಧಿಸಿದಂತೆ ಸಭೆಯಲ್ಲಿ ನಿರ್ಣಯವನ್ನು ಅಂಗೀಕರಿಸಲಾಯಿತು. ಈ ಪ್ರಸ್ತಾವನೆಯಲ್ಲಿ ಪಹಲ್ಗಾಮ್ನ ಭದ್ರತೆಯಲ್ಲಿ ಗಂಭೀರ ಲೋಪವಾಗಿದೆ ಎಂದು ಒಪ್ಪಿಕೊಳ್ಳಲಾಗಿದೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಏಪ್ರಿಲ್ 24 ರಂದು ಸಿಡಬ್ಲ್ಯೂಸಿಯ ತುರ್ತು ಸಭೆ ನಡೆಸಲಾಯಿತು ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಅಂದು ಒಂದು ನಿರ್ಣಯವನ್ನು ಅಂಗೀಕರಿಸಿದ್ದೇವು. ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಮತ್ತು ಭಯೋತ್ಪಾದಕರಿಗೆ ಪಾಠ ಕಲಿಸುವಲ್ಲಿ ಸರ್ಕಾರಕ್ಕೆ ಸಾಧ್ಯವಿರುವ ಎಲ್ಲ ಬೆಂಬಲವನ್ನು ನೀಡುತ್ತೇವೆ ಎಂದು ಹೇಳಿದ್ದೇವೆ. ಆದರೆ ಈ ಘಟನೆ ನಡೆದು ಹಲವು ದಿನಗಳಾದರೂ ಸರ್ಕಾರದಿಂದ ಯಾವುದೇ ಸ್ಪಷ್ಟ ಕಾರ್ಯತಂತ್ರ ಹೊರಹೊಮ್ಮಿಲ್ಲ ಎಂದು ಹೇಳಿದರು.
****
ಭಾರತದಿಂದ ದಾಳಿಯ ಭೀತಿ: ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಸುಂದರ ಕಣಿವೆ ಈಗ ಖಾಲಿಖಾಲಿ

ಮುಜಾಫಾರಾಬಾದ್: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ ನೀಲಂ ಕಣಿವೆ ಪ್ರತಿ ಬೇಸಿಗೆಯಲ್ಲಿ ಸುಮಾರು 300,000 ಪ್ರವಾಸಿಗರನ್ನು ಆಕರ್ಷಿಸುತ್ತದೆ. ಪ್ರವಾಸಿಗರು ಪಿಒಕೆಯ ನೈಸರ್ಗಿಕ ಸೌಂದರ್ಯವನ್ನು ಮೆಚ್ಚುತ್ತಾರೆ. ಆದರೆ ಭಾರತ ಪಾಕ್ ಹಾಗೂ ಪಿಒಕೆ ಮೇಲೆ ದಾಳಿ ನಡೆಸುವ ಭೀತಿಯಿಂದಾಗಿ ಅಲ್ಲಿಂದ ಪ್ರವಾಸಿಗರು ಜಾಗ ಖಾಲಿ ಮಾಡಿದ್ದು ಹೋಟೆಲ್ಗಳನ್ನು ತೊರೆಯುತ್ತಿದ್ದಾರೆ.
ಕಳೆದ ವಾರ ಭಯೋತ್ಪಾದಕರು ಭಾರತದ ರೆಸಾರ್ಟ್ ಪಟ್ಟಣವಾದ ಪಹಲ್ಗಾಮ್ನಲ್ಲಿ 26 ಪ್ರವಾಸಿಗರನ್ನು ಕೊಂದರು. ಭಾರತ ಈ ದಾಳಿಗೆ ಪಾಕಿಸ್ತಾನವನ್ನು ದೂಷಿಸಿದ ನಂತರ ಪರಮಾಣು-ಸಶಸ್ತ್ರ ರಾಷ್ಟ್ರಗಳ ನಡುವೆ ಉದ್ವಿಗ್ನತೆಯನ್ನು ಹೆಚ್ಚಾಗಿದೆ. ಈ ಮಧ್ಯೆ ಪಾಕಿಸ್ತಾನ ಭಾರತದ ಆರೋಪಗಳನ್ನು ನಿರಾಕರಿಸಿದೆ.
ನೀಲಂ ಕಣಿವೆಯು ನಿಯಂತ್ರಣ ರೇಖೆಯಿಂದ 3 ಕಿಲೋಮೀಟರ್ (1.8 ಮೈಲು) ಗಿಂತ ಕಡಿಮೆ ದೂರದಲ್ಲಿದೆ. ಇದು ಎರಡು ರಾಷ್ಟ್ರಗಳನ್ನು ವಿಭಜಿಸುವ ವಾಸ್ತವಿಕ ಗಡಿಯಾಗಿದ್ದು, ಇದು ಯಾವುದೇ ಮಿಲಿಟರಿ ಚಟುವಟಿಕೆಗೆ ಗುರಿಯಾಗುವಂತೆ ಮಾಡುತ್ತದೆ.
****
ಸುಹಾಸ್ ಶೆಟ್ಟಿ ಕೊಲೆ ಕೇಸ್: 8 ಜನ ಶಂಕಿತರು ವಶಕ್ಕೆ, ಮಂಗಳೂರು ಪೊಲೀಸರಿಂದ ತೀವ್ರ ವಿಚಾರಣೆ

ಮಂಗಳೂರು, ಮೇ 03: ನಗರದಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ರಾಜಕೀಯ ಕೋಲಾಹಲ ಎಬ್ಬಿಸಿದೆ. ಸುಹಾಶ್ ಶೆಟ್ಟಿ ಇದ್ದ ಕಾರ್ಗೆ ಗೂಡ್ಸ್ವಾಹನ ಗುದ್ದಿಸಿ ನಂತರ ಐದಾರು ಮಂದಿ ನಡುರಸ್ತೆಯಲ್ಲೇ ತಲ್ವಾರ್ಗಳಿಂದ ಕೊಚ್ಚಿ ಕೊಲೆ ಮಾಡಿದ್ದರು. ನಂತರ ಸ್ವಲ್ಪದೂರದಲ್ಲೇ ಕೃತ್ಯಕ್ಕೆ ಬಳಸಿದ ಸ್ವಿಫ್ಟ್ ಕಾರು ಬಿಟ್ಟು ಪರಾರಿಯಾಗಿದ್ದರು. ಆರೋಪಿಗಳ ಬೇಟೆಗಾಗಿ ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ ವಾಲ್ ಪೊಲೀಸರ 5 ತಂಡ ರಚನೆ ಮಾಡಿದ್ದರು. ಇದೀಗ ಮಹತ್ವದ ಬೆಳವಣಿಗೆಯಲ್ಲಿ ಘಟನೆ ನಡೆದ 24 ಗಂಟೆಯೊಳಗೆ ಪೊಲೀಸರು (police) ಶಂಕಿತ ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ.
ಸುಹಾಸ್ ಶೆಟ್ಟಿ ಕೊಲೆ ಕೇಸ್ ಸಂಬಂಧ ಒಟ್ಟು 8 ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಎಲ್ಲಾ ಶಂಕಿತ ಆರೋಪಿಗಳ ತೀವ್ರ ವಿಚಾರಣೆ ನಡೆಸಲಾಗುತ್ತಿದೆ. ಆರೋಪಿಗಳು ಮಂಗಳೂರಿನಲ್ಲೇ ಅವಿತ್ತಿದ್ದರು ಎಂದು ತಿಳಿದುಬಂದಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ವಶಕ್ಕೆಪಡೆಯಲಾಗಿದೆ.
***
ಪ್ರಜ್ವಲ್ ವಿರುದ್ಧದ ಅತ್ಯಾಚಾರ ಪ್ರಕರಣ: ಪುತ್ರನ ಹೊರತರಲು ಕೋರ್ಟ್ ಮೆಟ್ಟಿಲೇರಿದ ಭವಾನಿ ರೇವಣ್ಣ, ಅರ್ಜಿ ವಜಾ

ಬೆಂಗಳೂರು: ಹಾಸನದ ಮಾಜಿ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಅತ್ಯಾಚಾರ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯ ನಡೆಸುತ್ತಿರುವ ಸಾಕ್ಷಿಗಳ ವಿಚಾರಣಾ ಪ್ರಕ್ರಿಯೆಗೆ ತಡೆ ನೀಡಬೇಕು ಎಂದು ಕೋರಿ ಮಗನ ಪರವಾಗಿ ಭವಾನಿ ರೇವಣ್ಣ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಶುಕ್ರವಾರ ವಜಾಗೊಳಿಸಿದೆ.
ಪ್ರಜ್ವಲ್ ಪರವಾಗಿ ಅವರ ತಾಯಿ ಭವಾನಿ ರೇವಣ್ಣ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್ ವಿಶ್ವಜಿತ್ ಶೆಟ್ಟಿ ಅವರಿದ್ದ ಪೀಠ ನಡೆಸಿತು.
ಭವಾನಿ ರೇವಣ್ಣ ಪರ ವಕೀಲರು ವಾದ ಮಂಡಿಸಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಸಾವಿರಕ್ಕೂ ಹೆಚ್ಚಿನ ದಾಖಲೆಗಳನ್ನು ವಕೀಲರು ಪರಿಶೀಲಿಸಬೇಕು. ಆದರೆ ಸೂಕ್ತ ವಕೀಲರು ಸಿಗುತ್ತಿಲ್ಲ. ಇದರಿಂದ ಪ್ರಜ್ವಲ್ ರೇವಣ್ಣ ಪರ ಹೊಸ ವಕೀಲರ ನೇಮಕಕ್ಕೆ ಕನಿಷ್ಠ 7 ದಿನ ಕಾಲಾವಕಾಶ ಒದಗಿಸಬೇಕು ಎಂದು ಕೋರಿದರು.

