ಬೆಂಗಳೂರು: ‘1,300 ವರ್ಷಗಳ ಹಿಂದೆಯೇ ಶಂಕರಾಚಾರ್ಯರು ಸಮಾನತೆಯನ್ನು ಪ್ರತಿಪಾದಿಸಿದ್ದರು. ಇನ್ನು ಇಪ್ಪತ್ತು ವರ್ಷಗಳ ಬಳಿಕವಾದರೂ ಸಮಾನತೆ ತಂದವರು ಯಾರು ಎಂದು ಕೇಳಿದಾಗ ಅಂಬೇಡ್ಕರ್ ಬದಲು ಶಂಕರಾಚಾರ್ಯರ ಹೆಸರು ಹೇಳುವಂತಾಗಬೇಕು’ ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎನ್.
ಕುಮಾರ್ ತಿಳಿಸಿದರು.
ಬಬ್ಬೂರುಕಮ್ಮೆ ಸೇವಾ ಸಮಿತಿ ಶುಕ್ರವಾರ ಹಮ್ಮಿಕೊಂಡಿದ್ದ ಶಂಕರಾಚಾರ್ಯ ಜಯಂತಿ, ವಿಶ್ವ ವಿಪ್ರತ್ರಯೀ ಪರಿಷತ್ ನೀಡುವ ‘ಶಂಕರ ಪ್ರಶಸ್ತಿ’ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಅಂಬೇಡ್ಕರ್ ಸಮಾನತೆಯನ್ನು ತಂದರು ಎಂದು ಹಾದಿ ಬೀದಿಯಲ್ಲಿರುವವರೆಲ್ಲ ಮಾತನಾಡುತ್ತಿದ್ದಾರೆ. ಅಂಬೇಡ್ಕರ್ ಇಲ್ಲದೇ ಇರುತ್ತಿದ್ದರೆ ಸಮಾನತೆ ಇರುತ್ತಿರಲಿಲ್ಲ ಎಂದು ಹೇಳುವವರು ಜಾಸ್ತಿಯಾಗಿದ್ದಾರೆ. ಅಮೆರಿಕ, ಇಂಗ್ಲೆಂಡ್ನಿಂದ ಸಮಾನತೆಯನ್ನು ತರಲಾಯಿತು ಎಂದು ಹೇಳುವ ಬುದ್ಧಿವಂತರು ಇನ್ನೊಂದು ಕಡೆ ಇದ್ದಾರೆ. ಫ್ರೆಂಚ್ ಕ್ರಾಂತಿಯಿಂದ ಸಮಾನತೆ ಬಂತು ಎಂದೂ ಹೇಳುವವರಿದ್ದಾರೆ. ಸಾವಿರ ವರ್ಷಗಳ ಹಿಂದೆಯೇ ಸಮಾನತೆ ಸಾರಿದ್ದ ಶಂಕರಾಚಾರ್ಯರ ತತ್ವಗಳೇ ನಮಗೆ ಗೊತ್ತಿಲ್ಲ’ ಎಂದರು.
‘ಶಂಕರಾಚಾರ್ಯರ ತತ್ವಗಳನ್ನು ಪಾಲನೆ ಮಾಡಿದ್ದರೆ ಇಂಥ ದುಃಸ್ಥಿತಿ ನಮಗೆ ಬರುತ್ತಿರಲಿಲ್ಲ. ದೇಶವೂ ಹಿಂದುಳಿಯುತ್ತಿರಲಿಲ್ಲ. ಈಗಲೂ ಕಾಲ ಮಿಂಚಿಲ್ಲ. ಗುರುಗಳು ಪ್ರತಿಪಾದಿಸಿದ ಸಮಾನತೆಯನ್ನು ಅನುಷ್ಠಾನಕ್ಕೆ ತರಬೇಕು’ ಎಂದು ಹೇಳಿದರು.
‘ನಾವು ಒಪ್ಪದಿದ್ದರೂ ಜಗತ್ತು ಶಂಕರಾಚಾರ್ಯರ ಅದ್ವೈತ ತತ್ವವನ್ನು ಒಪ್ಪಿಕೊಂಡಿದೆ. ಅತಿ ಬುದ್ಧಿವಂತಿಕೆ ಮತ್ತು ಬೂಟಾಟಿಕೆಯಿಂದಾಗಿ ಬ್ರಾಹ್ಮಣರು ಶ್ರದ್ಧೆಯನ್ನು ಬಿಟ್ಟಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.
ಶಂಕರ ಪ್ರಶಸ್ತಿ ಸ್ವೀಕರಿಸಿದ ಪ್ರದೀಪ ಶರ್ಮ ಮಾತನಾಡಿ, ‘ವೈದಿಕರಿಗೆ ಹಣ, ಮನೆ, ಆಶ್ರಯ ಎಲ್ಲವೂ ಸಮಾಜದಲ್ಲಿ ದೊರೆಯುತ್ತಿದೆ. ಆದರೆ, ಮದುವೆಯಾಗಲು ಹೆಣ್ಣು ಸಿಗುತ್ತಿಲ್ಲ. ಪುರೋಹಿತರೇ ತಮ್ಮ ಹೆಣ್ಣು ಮಕ್ಕಳನ್ನು ಪೌರೋಹಿತ್ಯ ಮಾಡುವವರಿಗೆ ಕೊಡುತ್ತಿಲ್ಲ. ಇದೇ ಪರಿಸ್ಥಿತಿ ಮುಂದುವರಿದರೆ ಮುಂದೆ ವೈದಿಕರೇ ಇಲ್ಲದಂತಾಗಲಿದೆ’ ಎಂದರು.
ಶಂಕರ ಪ್ರಶಸ್ತಿ ಸ್ವೀಕರಿಸಿದ ಗಿರೀಶ್ ಜೋಯಿಸ್ ಮಾತನಾಡಿ, ‘ನಮ್ಮ ಸಂಸ್ಕೃತಿಯನ್ನು ನಾವೇ ಮರೆಯುತ್ತಿದ್ದೇವೆ. ಮಕ್ಕಳ ಉನ್ನತ ವಿದ್ಯಾಭ್ಯಾಸ, ಉನ್ನತ ಉದ್ಯೋಗಕ್ಕಾಗಿ ಬ್ರಾಹ್ಮಣರು ವಲಸೆ ಹೋಗುತ್ತಿದ್ದಾರೆ. ಊರುಗಳಲ್ಲಿ ಬ್ರಾಹ್ಮಣರೇ ಇಲ್ಲದಂತಾಗಿದೆ’ ಎಂದು ಹೇಳಿದರು.
‘ಪ್ರಜಾವಾಣಿ’ಯ ಮುಖ್ಯ ಉಪ ಸಂಪಾದಕ ಎಸ್. ಸೂರ್ಯಪ್ರಕಾಶ್ ಪಂಡಿತ್ ಶಂಕರ ಸಂದೇಶದ ಕುರಿತು ಮಾತನಾಡಿದರು. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಎಸ್. ರಘುನಾಥ್, ಬಬ್ಬೂರುಕಮ್ಮೆ ಸೇವಾ ಸಮಿತಿ ಅಧ್ಯಕ್ಷ ಎ.ವಿ. ಪ್ರಸನ್ನ, ಕಾರ್ಯದರ್ಶಿ ಎನ್. ಸತ್ಯಪ್ರಕಾಶ್ ಉಪಸ್ಥಿತರಿದ್ದರು.

[…] ಸಮಾನತೆ ತಂದವರು ಅಂಬೇಡ್ಕರ್ರಲ್ಲ, ಶಂಕರಾಚ… […]