ನವದೆಹಲಿ : ಪಾಕಿಸ್ತಾನದಿಂದ ಎಲ್ಲಾ ರೀತಿಯ ನೇರ ಹಾಗೂ ಪರೋಕ್ಷ ಆಮದು ವಸ್ತುಗಳ ಮೇಲೆ ಕೇಂದ್ರ ಸರ್ಕಾರ ನೀಷೇಧ ಹೇರಿ ಆದೇಶ ಜಾರಿಗೊಳಿಸಿದೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಕ್ರಮಕ್ರಮವಾಗಿ ಪಾಕಿಸ್ತಾನಕ್ಕೆ ಆರ್ಥಿಕ ನಿರ್ಬಂಧ ಹೇರುತ್ತಿರುವ ಭಾರತ ಈಗಷ್ಟೇ ಈ ಕ್ರಮ ಕೈಗೊಂಡಿದೆ.
ಭಯೋತ್ಪಾದಕರ ತವರು ದೇಶವೆಂದೇ ಹೆಸರಾದ ಪಾಕಿಸ್ತಾನದಲ್ಲಿ ಭಾರತದ ಆರ್ಥಿಕ ನಿಷೇಧ, ಜಲದಿಗ್ಬಂಧನ ಮುಂತಾದ ಕ್ರಮಗಳಿಂದ ಕೋಲಾಹಲ ದಂತಹ ಪರಿಸ್ಥಿತಿ ಉಂಟಾಗಿದೆ.
ಎರಡು ದಿನಗಳ ಹಿಂದಷ್ಟೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಪಾಕಿಸ್ತಾನದ ಕುರಿತು ಭದ್ರತಾ ಪರಿಶೀಲನಾ ಸಭೆ ಹಮ್ಮಿಕೊಳ್ಳಲಾಗಿತ್ತು. ಅಜಿತ್ ಧೋವಲ್, ಭಾರತೀಯ ಭೂಸೇನೆ, ಜಲಸೇನೆ ಹಾಗೂ ವಾಯು ಸೇನೆಯ ಮುಖ್ಯಸ್ಥರು, ರಕ್ಷಣಾ ಸಚಿವರು ಸೇರಿದ್ದ ಈ ಸಭೆಯಲ್ಲಿ ಪಾಕ್ ವಿರುದ್ದ ಕೈಗೊಳ್ಳಬಹುದಾದ ಕಠಿಣ ಕ್ರಮಗಳ ಬಗ್ಗೆ ಚರ್ಚೆ ನಡೆಸಲಾಗಿತ್ತು.
ಈಗಾಗಲೇ ಸಿಂಧೂ ನದಿಯ ಒಪ್ಪಂದವನ್ನು ಮುರಿಯುವ ಮೂಲಕ ಪಾಕಿಸ್ತಾನಕ್ಕೆ ಜಲ ಕಂಟಕ ಎದುರಾಗುವಂತೆ ಮಾಡಿರುವ ಭಾರತ ಈಗ ಆಮದು ನಿಷೇಧದಿಂದ ಅಲ್ಲಿನ ಆರ್ಥಿಕ ಪರಿಸ್ಥಿತಿಯನ್ನೂ ಸಹ ಏರುಪೇರುಗೊಳಿಸಲಿದೆ.
