ಆಪರೇಷನ್ ಸಿಂಧೂರ್: ರಾತ್ರೋರಾತ್ರಿ ನಡೆದ ಕಾರ್ಯಾಚರಣೆಯ ಮೇಲೆ ಮೋದಿ ನಿಗಾ; ಇಂಚಿಂಚೂ ಮಾಹಿತಿ ಪಡೆದ ಪ್ರಧಾನಿ

ನವದೆಹಲಿ: ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಉಗ್ರರ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ಪಾಕಿಸ್ತಾನದ ಉಗ್ರ ಸಂಘಟನೆಗಳ 9 ಶಿಬಿರಗಳ ಮೇಲೆ ರಾತ್ರೋ ರಾತ್ರಿ ಕ್ಷಿಪಣಿ ದಾಳಿ ನಡೆಸಿದೆ.
ರಾತ್ರೋ ರಾತ್ರಿ ನಡೆದ ಈ ಕಾರ್ಯಾಚರಣೆ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆದಿದೆ. ಪ್ರಧಾನಿ ನರೇಂದ್ರ ಮೋದಿ ಅವರು ರಾತ್ರಿಯಿಡೀ ಭಾರತೀಯ ಸೇನೆ ನಡೆಸಿದ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಯ ಮೇಲೆ ನಿಗಾ ಇಟ್ಟಿದ್ದರು ಎಂದು ಎಎನ್ ಐ ಸುದ್ದಿ ಸಂಸ್ಥೆ ವರದಿ ತಿಳಿಸಿದೆ.
ಪ್ರಧಾನಿ ಮೋದಿಯವರು ದಾಳಿಯ ಕುರಿತು ಇಂಚಿಂಚೂ ಮಾಹಿತಿಯನ್ನು ಪಡೆದಿದ್ದಾರೆ. ರಕ್ಷಣಾ ಪಡೆಗಳ ಮುಖ್ಯಸ್ಥರು, ಹಿರಿಯ ಗುಪ್ತಚರ ಅಧಿಕಾರಿಗಳು ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋಬಾಲ್ ಅವರು ಪ್ರಧಾನಿಗೆ ನಿರಂತರವಾಗಿ ಮಾಹಿತಿ ನೀಡಿದ್ದಾರೆ. ಮಂಗಳವಾರ ರಾತ್ರಿ ಪ್ರಾರಂಭವಾಗಿ ಬುಧವಾರದ ಬೆಳಗಿನ ಜಾವದವರೆಗೂ ಪ್ರಧಾನಿ ಮತ್ತು ಭೂಸೇನೆ, ನೌಕಾಪಡೆ ಮತ್ತು ವಾಯುಪಡೆಯ ಮುಖ್ಯಸ್ಥರ ನಡುವೆ ಸಂವಹನ ನಡೆದಿದೆ ಎಂದು ಹೇಳಲಾಗಿದೆ.
****
ಭಾರತದ ಬ್ರಿಗೇಡ್ ಪ್ರಧಾನ ಕಚೇರಿ ನಾಶವಾಗಿಲ್ಲ: PIB fact check ಸ್ಪಷ್ಟನೆ

ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಭಯೋತ್ಪಾದಕ ಅಡಗುತಾಣಗಳ ವಿರುದ್ಧ ಭಾರತೀಯ ಸಶಸ್ತ್ರ ಪಡೆಗಳು ನಡೆಸಿದ ಆಪರೇಷನ್ ಸಿಂಧೂರ್ಗೆ ಪ್ರತೀಕಾರವಾಗಿ ಪಾಕಿಸ್ತಾನವು ಭಾರತೀಯ ಬ್ರಿಗೇಡ್ ಪ್ರಧಾನ ಕಚೇರಿಯನ್ನು ನಾಶಪಡಿಸಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಹಬ್ಬಿರುವ ವದಂತಿಯನ್ನು ಕೇಂದ್ರ ಸರ್ಕಾರದ ಸತ್ಯ-ಪರಿಶೀಲನಾ ಘಟಕವು ಸುಳ್ಳು ಎಂದು ಸ್ಪಷ್ಟಪಡಿಸಿದೆ.
ಈ ಮಾಹಿತಿ ನಕಲಿ ಎಂದು ಪತ್ರಿಕಾ ಮಾಹಿತಿ ಬ್ಯೂರೋ ಫ್ಯಾಕ್ಟ್ ಚೆಕ್ ಸ್ಪಷ್ಟಪಡಿಸಿದೆ. ‘ಪಾಕಿಸ್ತಾನವು ಭಾರತೀಯ ಬ್ರಿಗೇಡ್ ಪ್ರಧಾನ ಕಚೇರಿಯನ್ನು ನಾಶಪಡಿಸಿದೆ ಎಂದು ಸಾಮಾಜಿಕ ಮಾಧ್ಯಮ ಪೋಸ್ಟ್ಗಳು ತಪ್ಪಾಗಿ ಹೇಳಿಕೊಂಡಿವೆ. ಈ ಸುದ್ದಿ ನಕಲಿ, ದಯವಿಟ್ಟು ಪರಿಶೀಲಿಸದ ಮಾಹಿತಿಯನ್ನು ಹಂಚಿಕೊಳ್ಳುವುದನ್ನು ತಪ್ಪಿಸಿ ಮತ್ತು ನಿಖರವಾದ ಮಾಹಿತಿಗಾಗಿ ಭಾರತ ಸರ್ಕಾರದ ಅಧಿಕೃತ ಮೂಲಗಳನ್ನು ಮಾತ್ರ ಅವಲಂಬಿಸಿ’ ಎಂದು ಪಿಐಬಿ ಸತ್ಯ-ಪರಿಶೀಲನೆ ತಿಳಿಸಿದೆ
****
Operation Sindoor: ಜೈಷ್, ಎಲ್ಇಟಿ, ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದಕ ಸಂಘಟನೆಗಳ ಪ್ರಧಾನ ಕಚೇರಿಗಳ ಮೇಲೆ ಭಾರತೀಯ ವಾಯುಪಡೆ ದಾಳಿ

ನವದೆಹಲಿ: ನಿಷೇಧಿತ ಜೈಶ್-ಎ-ಮೊಹಮ್ಮದ್, ಲಷ್ಕರ್-ಎ-ತೈಬಾ ಮತ್ತು ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದಕರ ಪ್ರಧಾನ ಕಚೇರಿಗಳನ್ನು ‘ಆಪರೇಷನ್ ಸಿಂಧೂರ್’ ಅಡಿಯಲ್ಲಿ ಗುರಿಯಾಗಿಸಲಾಗಿದ್ದು, ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಒಂಬತ್ತು ಅಡಗುತಾಣಗಳ ಮೇಲೆ ಭಾರತೀಯ ಸೇನೆ ಮಧ್ಯರಾತ್ರಿ ದಾಳಿ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾರತೀಯ ಸೇನೆ ನಡೆಸಿದ ನಿಖರವಾದ ಕಾರ್ಯಾಚರಣೆಯಲ್ಲಿ ಗುರಿಗಳಲ್ಲಿ ಬಹಾವಲ್ಪುರದ ಮರ್ಕಜ್ ಸುಭಾನ್ ಅಲ್ಲಾ, ತೆಹ್ರಾ ಕಲಾನ್ನಲ್ಲಿರುವ ಸರ್ಜಲ್, ಕೋಟ್ಲಿಯ ಮರ್ಕಜ್ ಅಬ್ಬಾಸ್ ಮತ್ತು ಮುಜಫರಾಬಾದ್ನ ಸೈಯದ್ನಾ ಬಿಲಾಲ್ ಶಿಬಿರ (ಎಲ್ಲವೂ ನಿಷೇಧಿತ ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ಗುಂಪು) ಸೇರಿವೆ.
****
ಜೈ ಹಿಂದ್, ನ್ಯಾಯ ಸಿಕ್ಕಿದೆ’ ಭಾರತೀಯ ಸೇನೆ ಪೋಸ್ಟ್, ರಕ್ಷಣಾ ಸಚಿವಾಲಯದ ಸ್ಪಷ್ಟನೆ, ಜಮ್ಮು-ಕಾಶ್ಮೀರದಲ್ಲಿ ಸಂಭ್ರಮಾಚರಣೆ

ನವದೆಹಲಿ: ಜಮ್ಮು-ಕಾಶ್ಮೀರದ ಪಹಲ್ಗಾಮ್ನಲ್ಲಿ ಏಪ್ರಿಲ್ 22ರಂದು ನಡೆದ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂಧೂರ್ ನಿಂದ 100ಕ್ಕೂ ಹೆಚ್ಚು ಉಗ್ರರು ಹತ್ಯೆಯಾಗಿದ್ದಾರೆ ಎಂದು ಹೇಳಲಾಗುತ್ತಿದ್ದು, ಜಮ್ಮು-ಕಾಶ್ಮೀರ ಸೇರಿದಂತೆ ದೇಶಾದ್ಯಂತ ಸಂಭ್ರಮಾಚರಣೆ ಜೋರಾಗಿದೆ.
ಸಂಭ್ರಮಾಚರಣೆ, ಜಮ್ಮು-ಕಾಶ್ಮೀರದಲ್ಲಿ ರಜೆ
ಆಪರೇಷನ್ ಸಿಂಧೂರ್ ಮೂಲಕ ಪಾಕಿಸ್ತಾನಕ್ಕೆ ಭಾರತೀಯ ಸೇನೆ ತಕ್ಕ ಉತ್ತರ ನೀಡಿದ್ದು, ದೇಶಾದ್ಯಂತ ಸಂಭ್ರಮಾಚರಣೆ ಮುಗಿಲುಮುಟ್ಟಿದೆ. ಜಮ್ಮು-ಕಾಶ್ಮೀರದಲ್ಲಿ ವಿಶೇಷವಾಗಿ ದೇಶಪ್ರೇಮಿಗಳು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಪರಿಸ್ಥಿತಿ ಸೂಕ್ಷ್ಮವಾಗಿರುವುದರಿಂದ ಜಮ್ಮು-ಕಾಶ್ಮೀರದಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಮಧ್ಯರಾತ್ರಿ 1.30 ರ ಸುಮಾರಿಗೆ ಪಾಕಿಸ್ತಾನದ ಉಗ್ರರ ಅಡಗುದಾಣಗಳ ಮೇಲೆ ಭಾರತೀಯ ಸೇನೆ ಆಪರೇಷನ್ ಸಿಂಧೂರ್ (Operation Sindoor) ಹೆಸರಿನಲ್ಲಿ ಕ್ಷಿಪಣಿ ದಾಳಿ ಮಾಡಿದೆ. ಪಾಕಿಸ್ತಾನದ 9 ಸ್ಥಳಗಳ ಮೇಲೆ ದಾಳಿ ನಡೆದಿದೆ. ಈ ದಾಳಿಯಲ್ಲಿ ಅನೇಕ ಭಯೋತ್ಪಾದಕರು ಮೃತಪಟ್ಟಿದ್ದಾರೆ. ದಾಳಿಯ ನಂತರ, ಭಾರತೀಯ ಸೇನೆಯು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿ, ‘‘ಜೈ ಹಿಂದ್, ನ್ಯಾಯ ಸಿಕ್ಕಿದೆ (Justice is Served. Jai Hind!)’’ ಎಂದು ಉಲ್ಲೇಖಿಸಿದೆ. ಈ ಕಾರ್ಯಾಚರಣೆಯನ್ನು ಪ್ರಾರಂಭಿಸುವ ಮೊದಲು, ‘‘ಸೈನ್ಯವು ದಾಳಿ ಮಾಡಲು ಸಿದ್ಧವಾಗಿದೆ, ಗೆಲ್ಲಲು ತರಬೇತಿ ಪಡೆದಿದೆ’’ ಎಂದು ಪೋಸ್ಟ್ ಮಾಡಿತ್ತು.
***
ಶತ್ರುವನ್ನು ಹೇಗೆ ಎದುರಿಸಬೇಕೆಂದು ಚೆನ್ನಾಗಿ ಗೊತ್ತಿದೆ- ಪಾಕ್ ಪ್ರೈಮ್ ಮಿನಿಸ್ಟರ್

ನವದೆಹಲಿ: ಪಾಕ್ ಆಕ್ರಮಿತ ಕಾಶ್ಮೀರ ಮತ್ತು ಪಂಜಾಬ್ ಪ್ರಾಂತ್ಯದಲ್ಲಿನ ಭಯೋತ್ಪಾದಕ ನೆಲೆಗಳ ಮೇಲೆ ಭಾರತೀಯ ಸೇನೆ ಕ್ಷಿಪಣಿ ದಾಳಿ ನಡೆಸಿರುವುದು “ಯುದ್ಧದ ಕೃತ್ಯ” ಎಂದು ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಹೇಳಿದ್ದು, “ಸೂಕ್ತ ಪ್ರತ್ಯುತ್ತರ” ನೀಡುವುದಾಗಿ ತಿಳಿಸಿದ್ದಾರೆ.
ಭಾರತ, ಪಾಕಿಸ್ತಾನದ ಉಗ್ರರ ನೆಲೆಗಳ ಮೇಲೆ ನಡೆಸಿರುವ ದಾಳಿಯನ್ನು ಪಾಕ್ ದೃಢಪಡಿಸಿದೆ, ಅಲ್ಲಿನ ಪ್ರಧಾನಿ ಷೆಹ್ಬಾಜ್ ಷರೀಫ್ ಅವರು ಟ್ವೀಟ್ ಮಾಡಿದ್ದು, ಪಾಕಿಸ್ತಾನದ ಐದು ಸ್ಥಳಗಳ ಮೇಲೆ ದಾಳಿ ಮಾಡಿದೆ ಎಂದು ʼಎಕ್ಸ್ʼನಲ್ಲಿ ಪೋಸ್ಟ್ ಮಾಡಿದ್ದಾರೆ.
ಕುತಂತ್ರಿ ವೈರಿಯು ಪಾಕಿಸ್ತಾನದ ಐದು ಸ್ಥಳಗಳ ಮೇಲೆ ಹೇಡಿತನದ ದಾಳಿ ನಡೆಸಿದೆ. ಭಾರತ ಹೇರಿರುವ ಈ ಯುದ್ಧ ಕ್ರಮದ ವಿರುದ್ಧ ಶಕ್ತಿಯುವಾದ ಪ್ರತಿಕ್ರಿಯೆ ನೀಡುವ ಎಲ್ಲ ಹಕ್ಕುಗಳೂ ಪಾಕಿಸ್ತಾನಕ್ಕೆ ಇವೆ. ಮತ್ತು ಅತ್ಯಂತ ಪ್ರಬಲ ಪ್ರತಿಕ್ರಿಯೆಯನ್ನು ನೀಡಲಾಗುತ್ತಿದೆ. ಇಡೀ ದೇಶವು ಪಾಕಿಸ್ತಾನ ಸಶಸ್ತ್ರ ಪಡೆಗಳಿಗೆ ಬೆಂಬಲವಾಗಿ ನಿಂತಿದೆ. ಶತ್ರುವನ್ನು ಹೇಗೆ ಎದುರಿಸಬೇಕು ಎಂಬುದು ಪಾಕಿಸ್ತಾನಕ್ಕೆ ಮತ್ತು ಪಾಕಿಸ್ತಾನದ ಸಶಸ್ತ್ರ ಪಡೆಗಳಿಗೆ ಚೆನ್ನಾಗಿ ಗೊತ್ತಿದೆ. ಶತ್ರುವಿನ ದುಷ್ಟ ಗುರಿಗಳು ಯಶಸ್ವಿಯಾಗುವುದಕ್ಕೆ ನಾವು ಯಾವತ್ತೂ ಬಿಡುವುದಿಲ್ಲ ಎಂದು ಅವರು ಉರ್ದುವಿನಲ್ಲಿ ಪೋಸ್ಟ್ ಹಾಕಿದ್ದಾರೆ.
****
