ಟಿ.ನರಸೀಪುರ : ಸರ್ಕಾರದ ಐದು ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆಯಿಂದ ಹಣ ಕೊಟ್ಟು ಪ್ರಯಾಣಿಸುವ ಪುರಷ ಪ್ರಯಾಣಿಕರು ಸೇರಿದಂತೆ ಮುಂದಿನ ಭವಿಷ್ಯದ ವಿದ್ಯಾರ್ಥಿಗಳ ಭವಣೆ ಹೇಳ ತೀರದ್ದಾಗಿದ್ದು ಸರ್ಕಾರಿ ಬಸ್ಸುಗಳಲ್ಲಿ ಪ್ರಯಾಣಿಸುವುದು ಜಿಗುಪ್ಸೆ ತಂದೊಡ್ಡಿದೆ.
ಕಳೆದ ಇಪ್ಪತ್ತೆರೆಡು ತಿಂಗಳಿನಿಂದ ಸರ್ಕಾರಿ ಬಸ್ಸುಗಳಲ್ಲಿ ಪ್ರಯಾಣಿಸುವುದು ಸವಾಲಿನ ಕೆಲಸವಾಗಿದೆ.ನೆಮ್ಮದಿಯಿಂದ ಯಾವುದೇ ಕಿರಿ,ಕಿರಿ ಇಲ್ಲದೆ ಆರಾಮದಾಯಕ ಸುಖಕರ ಪ್ರಯಾಣಕ್ಕೆ ಸರ್ಕಾರಿ ಬಸ್ಸುಗಳಲ್ಲಿ ಪ್ರಯಾಣಿಸುವುದು ಒಳ್ಳೆಯದೆಂದು ಭಾವಿಸಿದ್ದ ಪ್ರಯಾಣಿಕರೀಗ ಸರ್ಕಾರಿ ಬಸ್ಸುಗಳ ಸಹವಾಸವೇ ಬೇಡ ಎಂಬ ನಿರ್ಧಾರಕ್ಕೆ ಬಂದಿದ್ದಾರೆ.ಇದರಿಂದ ಪ್ರತಿನಿತ್ಯ ಎಷ್ಟು ಕಿರಿ,ಕಿರಿ ಅನುಭವಿಸುತ್ತಿದ್ದಾರೆಂಬುದು ತಿಳಿದು ಬರುತ್ತದೆ.

ನಿಲ್ದಾಣದಲ್ಲಿ ತುಂಬಿ ತುಳುಕುತ್ತಿರುವ ಮಹಿಳೆಯರು
ಉಚಿತವಾಗಿ ಪ್ರಯಾಣಿಸುವ ಮಹಿಳೆಯರು ಕರ್ನಾಟಕ ರಾಜ್ಯದಾದ್ಯಂತ ಇರುವ ದೇವರು,ಗುಡಿ,ಗೋಪುರಗಳು ಹಾಗೂ ಪ್ರೇಕ್ಷಣೀಯ ಸ್ಥಳಗಳಿಗೆ ತೆರಳಿ ವೀಕ್ಷಣೆ ಮಾಡುತ್ತಿದ್ದು ಇವರಿಗೆ ಯಾವುದೇ ಸಮಯದ ನಿರ್ಭಂದವಿರುವುದಿಲ್ಲ.ಬೆಳ್ಳಂಬೆಳಗ್ಗೆಯಿಂದ ಸರ್ಕಾರಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಸುವ ಮಹಿಳೆಯರದ್ದೇ ಕಾರು ಬಾರು.ಬೆಳಗ್ಗೆ ಪ್ರಯಾಣಿಸುವ ಶಾಲಾ,ಕಾಲೇಜು ವಿದ್ಯಾರ್ಥಿಗಳು, ಸರ್ಕಾರಿ,ಖಾಸಗಿ,ಕೂಲಿ ಕಾರ್ಮಿಕ ನೌಕರರು ಹಾಗೂ ಕುಟುಂಬ ಪರಿವಾರ ಸಮೇತ ಹಣ ಕೊಟ್ಟು ಪ್ರಯಾಣ ಮಾಡುವವರು ಸಮಯಕ್ಕೆ ಸರಿಯಾಗಿ ತಮ್ಮ ಕರ್ತವ್ಯ ನಿರ್ವಹಿಸಲು ಹಾಗೂ ಊರಿಂದ,ಊರಿಗೆ ಪ್ರಯಾಣಿಸವುದು ಸಾಧ್ಯವಾಗುತ್ತಿಲ್ಲ.

ಕೈ ಕೈ ಮಿಲಾಯಿಸಿ ಆಸನಗಳಿಗೆ ಕಚ್ಚಾಟ
ಬಸ್ಸನ್ನು ಹತ್ತುವಾಗಲಂತೂ ದೊಡ್ಜ ಸಾಹಸವೇ ಮಾಡಬೇಕಾಗುತ್ತದೆ.ಹತ್ತಿದ ಮೇಲಂತೂ ಮತ್ತೊಂದು ಸಾಹಸಕ್ಕೆ ಅಣಿಯಾಗಿ ಕುಳಿತುಕೊಳ್ಳುವ ಆಸನಕ್ಕೆ ಕಚ್ಚಾಟ ಆರಂಭವಾಗಿ ಕೈ,ಕೈ ಮಿಲಾಯಿಸುವ ಹಂತಕ್ಕೆ ಹೋಗುತ್ತಿದೆ.ಮಾನವೀಯತೆ ಮರೆತು ಮೃಗಗಳಂತೆ ವರ್ತಿಸುತ್ತಿರುವ ಕೆಲವು ಮಹಿಳಾ ಪ್ರಯಾಣಿಕರು ಯಾರ ಮಾತನ್ನೂ ಲೆಕ್ಕಿಸದೆ ಜಗಳವಾಡುವುದು ಸರ್ವೇಸಾಮಾನ್ಯವಾಗಿದ್ದು ಉಳಿದ ಪ್ರಯಾಣಿಕರಿಗೆ ಮುಜುಗರ ಉಂಟುಮಾಡುತ್ತಿದೆ.

ಖಾಸಗಿ ಬಸ್ಸುಗಳ ಮೊರೆ
ಶಕ್ತಿ ಯೋಜನೆಯಿಂದ ಖಾಸಗಿ ಬಸ್ಸುಗಳಲ್ಲಿ ಪ್ರಯಾಣಿಸುವವರ ಸಂಖ್ಯೆ ಕ್ಷೀಣಿಸಿತ್ತು.ಈಗ ಸರ್ಕಾರಿ ಬಸ್ಸುಗಳಲ್ಲಿ ಪ್ರಯಾಣಿಸುವುದು ಆರಾಮದಾಯಕವಿಲ್ಲವೆಂದು ಅರಿತು ಪುರುಷರು,ಉದ್ಯೋಗಸ್ಥರು,ಕುಟುಂಬ ಪರಿವಾರ ಸಮೇತ ಪ್ರಯಾಣ ಬೆಳೆಸುವವರು,ವಿದ್ಯಾರ್ಥಿಗಳು ಸೇರಿದಂತೆ ಎಲ್ಲಾ ಪ್ರಯಾಣಿಕರು ಖಾಸಗಿ ಬಸ್ಸುಗಳ ಕಡೆ ವಾಲುತ್ತಿದ್ದಾರೆ.ಹಬ್ಬ,ಹರಿದಿನಗಳು,ಅಮಾವಾಸ್ಯೆ, ಹುಣ್ಣಿಮೆ ದಿನಗಳಲ್ಲಂತೂ ಸಾಮಾನ್ಯ ಪ್ರಯಾಣಿಕರು ಪ್ರಯಾಣಿಸಲು ಆಗದೇ ಇರುವಂತ್ತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಬಸ್ಸುಗಳ ನಿರ್ವಹಣೆ ಇಲ್ಲದೆ ಪ್ರಯಾಣಿಕರ ಜೀವದ ಜೊತೆ ಚೆಲ್ಲಾಟ
ಬಸ್ಸುಗಳ ನಿರ್ವಹಣೆ ಇಲ್ಲದೆ ಎಲ್ಲೆಂದರಲ್ಲಿ ಕೆಟ್ಚು ನಿಲ್ಲುತ್ತಿವೆ.ರಾತ್ರಿ ವೇಳೆಯಲ್ಲಂತೂ ಬಹಳ ಅಪಾಯಕಾರಿಯಾಗಿದ್ದು ಮಹಿಳೆಯರು,ವಿದ್ಯಾರ್ಥಿಗಳು ಇದರ ಪರಿಣಾಮವನ್ನು ಆಗಾಗ್ಗೆ ಎದುರಿಸುತ್ತಿದ್ದಾರೆ.ಇತ್ತೀಚೆಗೆ ಮಹದೇಶ್ವರ ಬೆಟ್ಚಕ್ಕೆ ಪ್ರಯಾಣಿಸುವ ಸಂದರ್ಭದಲ್ಲಿ ಬ್ರೇಕ್ ವಿಫಲವಾಗಿ ಚಾಲಕನ ಜಾಗರೂಕತೆಯಿಂದ ಪ್ರಾಣಕ್ಕೆ ಯಾವುದೇ ತೊಂದರೆ ಆಗದೆ ಗಾಯಗಳಾಗಿ ಹೆಚ್ಚಿನ ಅನಾಹುತ ಆಗುವುದು ತಪ್ಪಿದೆ.ಬಸ್ಸುಗಳ ಕೊರತೆ ಬಾರದಂತೆ ಹೊಸ ಬಸ್ಸುಗಳನ್ನು ಖರೀದಿಸಿ,ಹಳೆಯ ಬಸ್ಸುಗಳನ್ನು ನವೀಕರಿಸಿ ಸೇವೆ ಹೊದಗಿಸಿದ್ದರೂ ಆಗಾಗ್ಗೆ ಅವುಗಳ ನಿರ್ವಹಣೆ ಕೂಡ ಹೆಚ್ಚಿನ ಜವಾಬ್ದಾರಿಯಿಂದ ಮಾಡಬೇಕಾಗುತ್ತದೆ.ಅದಕ್ಕಾಗಿ ಸಂಪನ್ಮೂಲ ಕ್ರೂಡೀಕರಣ ಮುಖ್ಯವಾಗಿರುತ್ತದೆ.
ಸರ್ಕಾರ ಎಲ್ಲಾ ಮಾದರಿಯ ಪ್ರಯಾಣಿಕರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಶಕ್ತಿಯೋಜನೆಯನ್ನು ಕೆಲವೊಂದು ಬದಲಾವಣೆಗಳನ್ನು ಮಾಡುವ ಮೂಲಕ ಸರ್ಕಾರಿ ಬಸ್ಸುಗಳಲ್ಲಿ ಪ್ರಯಾಣಿಸುವ ಅವಕಾಶವನ್ನು ಕಲ್ಪಿಸಬೇಕಾಗಿದೆ.

ಹಿರಿಯ ನಾಗರೀಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಮಾತ್ರ ಉಚಿತ ಪ್ರಯಾಣ ಮಾಡುವ ಅವಕಾಶ ಕಲ್ಪಿಸಿದ್ದರೆ ಸಾಕಾಗಿತ್ತು.ಉಳಿದ ಹಣವನ್ನು ಆಸ್ಪತ್ರೆ,ಶಾಲೆಗಳನ್ನು ಕಟ್ಟಿಸಿದ್ದರೆ ಬಡ,ಮದ್ಯಮ ವರ್ಗದ ಜನರಿಗೆ ಅನುಕೂಲವಾಗುತ್ತಿತ್ತು.ಆರ್ಥಿಕ ಪರಿಸ್ಥಿತಿಯಲ್ಲಿ ಉತ್ತಮವಾಗಿರುವವರು,ರಾಜಕಾರಣಿಗಳು ದೊಡ್ಡ,ದೊಡ್ಡ ಆಸ್ಪತ್ರೆಗಳಲ್ಲಿ ಹೋಗಿ ಚಿಕಿತ್ಸೆ ಪಡೆದು ಗುಣ ಮುಖರಾಗುತ್ತಾರೆ.ಪಾಪ ಬಡವರು ಎಲ್ಲಿ ಹೋಗ್ಬೇಕು. ಯುವ ಪೀಳಿಗೆಯ ಮುಂದಿನ ಭವಿಷ್ಯದ ಬಗ್ಗೆ ಸರ್ಕಾರ ಯೋಚನೆ ಮಾಡುತ್ತಿಲ್ಲ.ದಾಖಲೆ ಬಜೆಟ್ ಮಂಡಿಸಿರುವ ಮುಖ್ಯಮಂತ್ರಿಗಳು ಗ್ಯಾರೆಂಟಿ ಯೋಜನೆಗಳನ್ನು ಅನುಷ್ಟಾನಕ್ಕೆ ತರುವ ಮುನ್ನ ಸಾಧಕ,ಭಾಧಕಗಳ ಬಗ್ಗೆ ಯೋಚನೆ ಮಾಡಬೇಕಿತ್ತು.
- ಡಾ.ರೇವಣ್ಣ
ಖ್ಯಾತ ವೈದ್ಯರು
ಟಿ.ನರಸೀಪುರ*
*****
ಸರ್ಕಾರ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಯೋಜನೆ ರೂಪಿಸದೇ ಕೇವಲ ಓಟಿಗಾಗಿ ಮಾತ್ರ ಯೋಜನೆ ಜಾರಿಗೆ ತಂದು ಸರ್ಕಾರದ ಬೊಕ್ಕಸಕ್ಕೆ ದೊಡ್ಡ ಆರ್ಥಿಕ ಹೊಡೆತ ಬಿದ್ದಿದೆ.ಕಳೆದ ಎರೆಡು ವರ್ಷಗಳಿಂದ ಉಚಿತವಾಗಿ ಪ್ರಯಾಣಿಸುತ್ತಿರುವ ಮಹಿಳೆಯರನ್ನು ಹೊರತು ಪಡಿಸಿ ಉಳಿದ ಪ್ರಯಾಣಿಕರು ಕಷ್ಟ ಪಡುತ್ತಿರುವುದಂತೂ ಸತ್ಯ.ಜನರ ಕ್ಷೇಮವನ್ನು ಬಯಸುವುದು ಅದಕ್ಕಾಗಿ ಯೋಜನೆಗಳನ್ನು ರೂಪಿಸುವುದು ಸರ್ಕಾರದ ಕರ್ತವ್ಯ.ಅದ್ಯಾವುದು ಈ ಸರ್ಕಾರದಲ್ಲಿ ಇಲ್ಲಾ.
- ಸಾಮ್ರಾಟ್ ಸುಂದರೇಷನ್
ಅಧ್ಯಕ್ಷರು
ಜಿಲ್ಲಾ ಯುವ ಮೋರ್ಚಾ
ಮೈಸೂರು
*****
ಖಾಸಗಿ ಬಸ್ಸುಗಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದ ಸಂದರ್ಭದಲ್ಲಿ ಇಂತಹ ಪರಿಸ್ಥಿತಿ ನಿರ್ಮಾಣವಾಗಿರಲಿಲ್ಲ.ಸರ್ಕಾರಿ ಬಸ್ಸುಗಳಲ್ಲಿ ಆರಾಮದಾಯಕ ಪ್ರಯಾಣ ಮಾಡಬಹುದೆನ್ನುವುದು ಕನಲಿನ ಮಾತಾಗಿದೆ.ಸರ್ಕಾರ ಕೆಲವು ಬದಲಾವಣೆಗಳನ್ನು ಮಾಡಿ ಪುರುಷರು ಮತ್ತು ವಿದ್ಯಾರ್ಥಿ ಪ್ರಯಾಣಿತರಿಗೆ ಅನುಕೂಲ ಕಲ್ಪಿಸಬೇಕು.
- ಬಸಪ್ಪ
ಹಿರಿಯ ನಾಗರೀಕರು
ಟಿ.ನರಸೀಪುರ
– ವಿಶೇಷ ವರದಿ
ಎಂ.ನಾಗೇಂದ್ರಕುಮಾರ್*
