ಟಿ.ನರಸೀಪುರ : ಡಾ.ಹೆಚ್.ಎನ್.ನಾಗಮೋಹನದಾಸ್ ಏಕ ಸದಸ್ಯ ವಿಚಾರಣಾ ಆಯೋಗ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆಯನ್ನು ಪಾರದರ್ಶಕತೆಯಿಂದ ಮಾಡಬೇಕು.ಯಾವುದೇ ಕುಟುಂಬದಲ್ಲಿ ಜನಿಸಿದ ಮಗುವಿನಿಂದ ಲೆಕ್ಕ ತೆಗೆದಕೊಂಡು ಸಮೀಕ್ಷೆ ನಡೆಸಬೇಕು ಇಲ್ಲದಿದ್ದರೆ ಸಮೀಕ್ಷೆ ಬೇಡವೆಂದು ತಾಲ್ಲೂಕು ಪಂಚಾಯತಿ ಮಾಜಿ ಉಪಾಧ್ಯಕ್ಷ ಬಿ.ಮರಯ್ಯ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಟಿ.ನರಸೀಪುರ ಪಟ್ಟಣದ ಬೈರಾಪುರದಲ್ಲಿ ಜಾತಿ ಗಣತಿ ವರದಿ ಮಾಡಲು ತೆರಳಿದ್ದ ಸಿಬ್ಬಂದಿಗಳನ್ನು ಸಮೀಕ್ಷೆ ಮಾಡದಂತೆ ತಡೆ ಹಿಡಿದಾಗ ತಹಶಿಲ್ದಾರ್ ಸುರೇಶ್ ಆಚಾರ್,ಬಿಇಒ ಶಿವಮೂರ್ತಿ,ಬಿ.ಆರ್.ಸಿ ನಾಗೇಶ್ ರವರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ಅವಲೋಕಿಸಿದರು.ಈ ಸಂದರ್ಭದಲ್ಲಿ ಬಿ.ಮರಯ್ಯರವರು ಜಾತಿಗಣತಿ ಪಾರದರ್ಶಕತೆಯಿಂದ ಆಗಬೇಕು.ಇದಕ್ಕಾಗಿ ಒಂದು ದಿನ ತಡವಾದರು ತೊಂದರೆ ಇಲ್ಲಾ ನಿಮ್ಮ ಸಿಬ್ಬಂದಿ ಜೊತೆಗೆ ನಮ್ಮ ಗ್ರಾಮಸ್ಥರು ಜೊತೆಗೂಡಿ ಕೈ ಜೋಡಿಸುತ್ತೇವೆ.ಕುಟುಂಬದಲ್ಲಿ ಆಗ ತಾನೆ ಜನಿಸಿದ ಮಗುವಿನಿಂದ ಲೆಕ್ಕ ತೆಗೆದುಕೊಳ್ಳಲೇಬೇಕು.ಇಲ್ಲದಿದ್ದರೆ ನಾವು ಪ್ರತಿಭಟನೆ ನಡೆಸುತ್ತೇವೆಂದು ಎಚ್ಚರಿಸಿದರು.

ಸರ್ಕಾರದ ಆದೇಶದಂತೆ ಕೆಲಸ ಮಾಡಲು ಅವಕಾಶ ನೀಡಿ.ಈಗ ಆ್ಯಪ್ ನಲ್ಲಿ ಇರುವಂತೆ ಕುಟುಂಬ ಸದಸ್ಯರ ಹೆಸರನ್ನು ನೋಂದಾಯಿಸುತ್ತೇವೆ.ಮೇಲ್ಮಟ್ಚದಿಂದ ಆದೇಶ ಬಂದ ತಕ್ಷಣ ಮಕ್ಕಳನ್ನೂ ಸಹ ಲೆಕ್ಕಕ್ಕೆ ತೆಗೆದುಕೊಳ್ಳುತ್ತೇವೆ. ನಿಮ್ಮ ಒತ್ತಾಯವನ್ನು ದೂರವಾಣಿ ಮುಖೇನ ಜಿಲ್ಲಾಧಿಕಾರಿಗಳು ಹಾಗೂ ಜಂಟಿ ನಿರ್ದೇಶಕರ ಗಮನಕ್ಕೆ ತರಲಾಗಿದೆ.ಅಲ್ಲಿಂದ ಆದೇಶ ಬಂದ ತಕ್ಷಣ ನೀವು ಹೇಳಿದ ರೀತಿ ಸಮೀಕ್ಷೆಗಳನ್ನು ಮಾಡೋಣವೆಂದರು.
ಇದಕ್ಕೆ ಮರಯ್ಯರವರು ಖಂಡಿತಾ ಸಾಧ್ಯವಿಲ್ಲ .ನಾನು ಈಗಾಗಲೇ ವಿಧಾನ ಪರಿಷತ್ ಸದಸ್ಯರುಗಳಾದ ಡಾ.ಯತೀಂದ್ರ ಸಿದ್ದರಾಮಯ್ಯರವರು ಹಾಗೂ ಡಾ.ತಿಮ್ಮಯ್ಯ ರವರ ಗಮನಕ್ಕೆ ವಿಷಯವನ್ನು ತಂದಿದ್ದೇನೆ.ಯಾವುದೇ ಕಾರಣಕ್ಕೂ ಗಣತಿ ಮಾಡಲು ಅವಕಾಶ ನೀಡುವುದಿಲ್ಲ ಸ್ಥಳಕ್ಕೆ ಜಿಲ್ಲಾಧಿಕಾರಿಗಳೇ ಬರಲಿ.ಇಲ್ಲದಿದ್ದರೆ ಡಾ.ಬಾಬುಜಗಜೀವನರಾಂ ಪುತ್ಥಳಿ ಮುಂದೆ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಬೆಳಗ್ಗೆ 10 ಗಂಟೆಯಿಂದ ಸಮಸ್ಯೆ ಬಗೆ ಹರಿಸಲು ತಹಶಿಲ್ದಾರ್ ,ಬಿಇಒ ಸೇರಿದಂತೆ ಇತರೆ ಅಧಿಕಾರಿಗಳು ಮೇಲಾಧಿಕಾರಿಗಳನ್ನು ಸಂಪರ್ಕಿಸಿ ಸಲಹೆ ಪಡೆಯುತ್ತಾ ಹರಸಾಹಸ ಪಟ್ಚು ಅಂತಿಮವಾಗಿ ಆಧಾರ್ ಇಲ್ಲದೇ ಇರುವ ಮಕ್ಕಳನ್ನು ಜಾತಿಗಣತಿಯಲ್ಲಿ ಸೇರಿಸಲು ಆ್ಯಪ್ ನಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂಬ ಮಾಹಿತಿಯನ್ನು ನೀಡಿ ಸ್ಥಳದಲ್ಲಿಯೇ ಮರಯ್ಯರವರ ಕುಟುಂಬ ಸದಸ್ಯರನ್ನೆಲ್ಲಾ ಸೇರಿಸಿ ದಾಖಲೆ ತೋರಿಸುವ ಹೊತ್ತಿಗೆ ಮಧ್ಯಾಹ್ನ 1 ಗಂಟೆಯಾಯಿತು.
ಈ ವೇಳೆ ಬಿ.ಮರಯ್ಯ ರವರು ಮಾತನಾಡಿ ಜಾತಿ ಸಮೀಕ್ಷೆಯಲ್ಲಿ ಸಣ್ಣ ಮಕ್ಕಳನ್ನು ಕಾಲಂ ನಲ್ಲಿ ಸೇರಿಸಿಕೊಳ್ಳಬಾರದೆಂದು ಬರಹ ಇತ್ತು ಇದನ್ನು ವಿರೋಧಿಸಿ ತಹಶಿಲ್ದಾರ್ ರವರನ್ನು ಸ್ಥಳಕ್ಕೆ ಕರೆಸಬೇಕಾಯಿತು.ಅದನ್ನು ಸರಿಪಡಿಸಿದ್ದಾರೆ ಅದಕ್ಕಾಗಿ ಅವರಿಗೆ ಧನ್ಯವಾದಗಳು ಎಂದರು.

ತಹಶಿಲ್ದಾರ್ ಸುರೇಶ್ ಆಚಾರ್ ಮಾತನಾಡಿ ಆಧಾರ್ ಇಲ್ಲದೇ ಇರುವ ಮಕ್ಕಳನ್ನು ಸೇರ್ಪಡೆ ಮಾಡಲು ಅವಕಾಶವಿದೆ.ಮುಂದೆ ತಾಲ್ಲೂಕಿನಲ್ಲಿ ಈ ಮಾಹಿತಿಯನ್ನು ಹಂಚಿಕೊಳ್ಳುತ್ತೇವೆ.ಈ ಸರ್ವೇಯನ್ನು ನ್ಯಾಯಯುತವಾಗಿ, ಪ್ರಮಾಣಿಕವಾಗಿ ಹಾಗೂ ನಿಖರವಾಗಿ ದಾಖಲಿಸುತ್ತೇವೆಂದರು.
ಈ ಸಂದರ್ಭದಲ್ಲಿ ಸಿಬ್ಬಂದಿಗಳಾದ ಉತ್ತಂಬಳ್ಳಿ ನಾಗರಾಜು,ಟಿಒಟಿ ನಾಗರಾಜು ಸೇರಿದಂತೆ ಗ್ರಾಮಸ್ಥರಿದ್ದರು.
ವರದಿ- ಎಂ.ನಾಗೇಂದ್ರಕುಮಾರ್
