ನವದೆಹಲಿ: ” ಸೇನಾ ಗುರಿಗಳ ಮೇಲೆ ಯಾವುದೇ ದಾಳಿ ನಡೆದರೆ ಸೂಕ್ತ ಪ್ರತಿಕ್ರಿಯೆ ನೀಡಲಾಗುತ್ತದೆ ಎಂದು ಭಾರತ ಗುರುವಾರ ಪುನರುಚ್ಚರಿಸಿದೆ.
ಪಾಕಿಸ್ಥಾನದ ಉ*ಗ್ರರ ವಿರುದ್ಧ ಆಪರೇಷನ್ ಸಿಂದೂರ್ ಅನ್ನು ಮುನ್ನಡೆಸಿದ್ದ ಕರ್ನಲ್ ಸೋಫಿಯಾ ಖುರೇಷಿ ಮತ್ತು ವಿಂಗ್ ಕಮಾಂಡರ್ ವೋಮಿಕಾ ಸಿಂಗ್ ಯುದ್ಧ ಸಮವಸ್ತ್ರದಲ್ಲಿ ವಿದೇಶಾಂಗ ಸಚಿವಾಲಯದಲ್ಲಿ ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಸ್ತ್ರಿ ಅವರೊಂದಿಗೆ ಇಂದಿನ ಬೆಳವಣಿಗೆಗಳ ಬಗ್ಗೆ ಬೀಫಿಂಗ್ ನೀಡಿದರು.
ಗುರುವಾರ ಬೆಳಗ್ಗೆ ಭಾರತದ ಭೂಪ್ರದೇಶದ ಮೇಲೆ ಪಾಕಿಸ್ಥಾನ ಸೇನೆ ನಡೆಸಿದ ಕ್ಷಿಪಣಿ ದಾಳಿಯನ್ನು ಭಾರತೀಯ ಸಶಸ್ತ್ರ ಪಡೆಗಳು ವಿಫಲಗೊಳಿಸಿವೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಲಾಯಿತು.
16 ಮಂದಿ ಭಾರತೀಯ ನಾಗರಿಕರು ಸಾ*ವು
ಜಮ್ಮು ಮತ್ತು ಕಾಶ್ಮೀರದ ನಿಯಂತ್ರಣ ರೇಖೆಯ ಉದ್ದಕ್ಕೂ ಪಾಕಿಸ್ಥಾನ ನಡೆಸಿದ ನಿರಂತರ ಶೆಲ್ ದಾಳಿಯಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 16 ಮಂದಿ ಭಾರತೀಯ ನಾಗರಿಕರು ಸಾ*ವನ್ನಪ್ಪಿದ್ದಾರೆ ಮತ್ತು 59 ಮಂದಿ ಗಾಯಗೊಂಡಿದ್ದಾರೆ ಎಂದು ವಿವರ ನೀಡಿದ್ದಾರೆ.
ಪಾಕಿಸ್ಥಾನವು ಅವಂತಿಪುರ, ಶ್ರೀನಗರ, ಜಮ್ಮು, ಪಠಾಣ್ಕೋಟ್, ಅಮೃತಸರ, ಕಪುರ್ತಲಾ, ಜಲಂಧರ್, ಲೂಧಿಯಾನ, ಆದಂಪುರ, ಭಟಿಂಡಾ, ಚಂಡೀಗಢ, ನಲ್, ಫಲೋಡಿ, ಉತ್ತರಲೈ ಮತ್ತು ಭುಜ್ ಸೇರಿದಂತೆ ಉತ್ತರ ಮತ್ತು ಪಶ್ಚಿಮ ಭಾರತದ ಹಲವಾರು ಮಿಲಿಟರಿ ಗುರಿಗಳ ಮೇಲೆ ಡೋನ್ಗಳು ಮತ್ತು ಕ್ಷಿಪಣಿಗಳನ್ನು ಬಳಸಿ ದಾಳಿ ಮಾಡಲು ಪ್ರಯತ್ನಿಸಿದೆ. ಅವುಗಳನ್ನು ಇಂಟಿಗ್ರೇಟೆಡ್ ಕೌಂಟರ್ ಯುಎಎಸ್ ಗ್ರಿಡ್ ಮತ್ತು ವಾಯು ರಕ್ಷಣಾ ವ್ಯವಸ್ಥೆಗಳಿಂದ ತಟಸ್ಥಗೊಳಿಸಲಾಗಿದೆ. ಈ ದಾಳಿಯ ಅವಶೇಷಗಳನ್ನು ಈಗ ಪಾಕಿಸ್ಥಾನದ ದಾಳಿಯನ್ನು ಸಾಬೀತುಪಡಿಸುವ ಹಲವಾರು ಸ್ಥಳಗಳಿಂದ ವಶಪಡಿಸಿಕೊಳ್ಳಲಾಗುತ್ತಿದೆ” ಎಂದು ಕರ್ನಲ್ ಸೋಫಿಯಾ ಖುರೇಷಿ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.
ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ ಪಹಲ್ಲಾಮ್ ದಾಳಿಯ ಕುರಿತು ಮಾತುಕತೆ ನಡೆಯುತ್ತಿರುವಾಗ, ಪಾಕಿಸ್ಥಾನವು ಟಿಆರ್ಎಫ್ (ದಿ ರೆಸಿಸ್ಟೆನ್ಸ್ ಫ್ರಂಟ್) ಪಾತ್ರವನ್ನು ವಿರೋಧಿಸಿತು ಎಂದು ಮಿಸ್ತ್ರಿ ಹೇಳಿದರು. ಟಿಆರ್ಎಫ್ ಒಮ್ಮೆ ಅಲ್ಲ, ಎರಡು ಬಾರಿ ದಾಳಿಯ ಜವಾಬ್ದಾರಿಯನ್ನು ವಹಿಸಿಕೊಂಡ ನಂತರ ಇದು ನಡೆದಿದೆ ಎಂದರು.
‘ವಿಷಯಗಳನ್ನು ಉಲ್ಬಣಗೊಳಿಸುವುದು ನಮ್ಮ ಉದ್ದೇಶವಲ್ಲ, ಮತ್ತು ನಾವು ಉಲ್ಬಣಕ್ಕೆ ಮಾತ್ರ ಪ್ರತಿಕ್ರಿಯಿಸುತ್ತಿದ್ದೇವೆ. ನಾವು ಯಾವುದೇ ಮಿಲಿಟರಿ ಗುರಿಗಳನ್ನು ಗುರಿಯಾಗಿಸಿಕೊಂಡಿಲ್ಲ. ಪಾಕಿಸ್ಥಾನದಲ್ಲಿರುವ ಭಯೋತ್ಪಾದಕ ಮೂಲಸೌಕರ್ಯವನ್ನು ಮಾತ್ರ ಹೊಡೆಯಲಾಗಿದೆ’ ಎಂದು ಮಿಸ್ತ್ರಿ ಹೇಳಿದರು.
