ಪಾಕಿಸ್ತಾನದ ಕ್ಷಿಪಣಿ, ಡ್ರೋನ್ ದಾಳಿಗೆ ಪ್ರತೀಕಾರ: ಅರೇಬಿಯನ್ ಸಮುದ್ರದಲ್ಲಿ ಭಾರತದ ಕಾರ್ಯಾಚರಣೆ

ನವದೆಹಲಿ: ಪಾಕಿಸ್ತಾನ ನಡೆಸಿದ ಸರಣಿ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳ ನಂತರ, ಭಾರತವು ಅರೇಬಿಯನ್ ಸಮುದ್ರದಲ್ಲಿ ಅನೇಕ ಪಾಕಿಸ್ತಾನಿ ಗುರಿಗಳ ವಿರುದ್ಧ ಕಾರ್ಯಾಚರಣೆಗಳನ್ನು ಪ್ರಾರಂಭಿಸಿದೆ ಎಂದು ಆಂಗ್ಲ ಸುದ್ದಿವಾಹಿನಿ ವರದಿ ಮಾಡಿದೆ.
ಪಾಕಿಸ್ತಾನವು ಜಮ್ಮು ಮತ್ತು ಕಾಶ್ಮೀರದ ಮೇಲೆ ಕ್ಷಿಪಣಿ ದಾಳಿಗೆ ಪ್ರಯತ್ನಿಸಿದಾಗ ನಿನ್ನೆ ರಾಜಸ್ಥಾನದ ಜೈಸಲ್ಮೇರ್ನಲ್ಲಿ ಡ್ರೋನ್ ದಾಳಿ ಮಾಡಿದಾಗ ಉದ್ವಿಗ್ನತೆ ಹೆಚ್ಚಾಯಿತು. ಈ ಮಧ್ಯೆ ನಿನ್ನೆ ಮತ್ತು ಇಂದು ಶುಕ್ರವಾರ ಬೆಳಗಿನ ಜಾವ ಜಮ್ಮುವಿನಲ್ಲಿ ದೊಡ್ಡ ಸ್ಫೋಟಗಳು ಕೇಳಿಬಂದವು, ಅಲ್ಲಿ ಪಾಕಿಸ್ತಾನವು ಆರ್ಎಸ್ ಪುರ, ಅರ್ನಿಯಾ, ಸಾಂಬಾ ಮತ್ತು ಹಿರಾನಗರ ಸೇರಿದಂತೆ ಹಲವಾರು ಸ್ಥಳಗಳನ್ನು ಗುರಿಯಾಗಿಸಿಕೊಂಡು ಕ್ಷಿಪಣಿಗಳನ್ನು ಹಾರಿಸಿತು.
*****
India-Pak War: ಪಾಕಿಸ್ತಾನದ 50ಕ್ಕೂ ಹೆಚ್ಚು ಡ್ರೋನ್ ಗಳ ಹೊಡೆದುರುಳಿಸಿದ Indian Army

ನವದೆಹಲಿ: ಪಹಲ್ಗಾಮ್ ಉಗ್ರ ದಾಳಿ ಮತ್ತು ಇದಕ್ಕೆ ಉತ್ತರವಾಗಿ ಭಾರತ ನಡೆಸಿದ ಆಪರೇಷನ್ ಸಿಂಧೂರ ಏರ್ ಸ್ಟ್ರೈಕ್ ಬಳಿಕ ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ವಿಗ್ನತೆ ಭುಗಿಲೆದ್ದಿದ್ದು, ಯುದ್ಧ ರೀತಿಯ ವಾತಾವರಣ ರೂಪಗೊಂಡಿದೆ.
ಬುಧವಾರ ರಾತ್ರಿ ನಿಯಂತ್ರಣ ರೇಖೆ (LoC) ಮತ್ತು ಅಂತರರಾಷ್ಟ್ರೀಯ ಗಡಿಗಳಲ್ಲಿ (IB) ದೊಡ್ಡ ಪ್ರಮಾಣದ ಡ್ರೋನ್ ನಿರೋಧಕ ಕಾರ್ಯಾಚರಣೆ ನಡೆದಿದ್ದು ಈ ವೇಳೆ ಭಾರತೀಯ ಸೇನೆಯು 50 ಕ್ಕೂ ಹೆಚ್ಚು ಪಾಕಿಸ್ತಾನಿ ಡ್ರೋನ್ಗಳನ್ನು ಹೊಡೆದುರುಳಿಸಿದೆ ಎಂದು ಮೂಲಗಳು ದೃಢಪಡಿಸಿವೆ.
ಪಾಕಿಸ್ತಾನವು ವಿವಿಧ ಸ್ಥಳಗಳಲ್ಲಿ ಭಾರತದ ಭೂಪ್ರದೇಶಕ್ಕೆ ಬಹು ಸಮೂಹ ಡ್ರೋನ್ಗಳನ್ನು ಕಳುಹಿಸಲು ವಿಫಲ ಪ್ರಯತ್ನಗಳನ್ನು ಮಾಡಿದ ನಂತರ ಈ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು ಎಂದು ಸೇನಾಮೂಲಗಳು ತಿಳಿಸಿವೆ.
ಭಾರತೀಯ ಸೇನೆಯ ವಾಯು ರಕ್ಷಣಾ ಘಟಕಗಳು ತ್ವರಿತವಾಗಿ ಪ್ರತಿಕ್ರಿಯಿಸಿ ಉಧಮ್ಪುರ, ಸಾಂಬಾ, ಜಮ್ಮು, ಅಖ್ನೂರ್, ನಾಗ್ರೋಟಾ ಮತ್ತು ಪಠಾಣ್ಕೋಟ್ ಸೇರಿದಂತೆ ಪ್ರದೇಶಗಳಲ್ಲಿ ಡ್ರೋನ್ಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿ ಅವುಗಳನ್ನು ಯಶಸ್ವಿಯಾಗಿ ಹೊಡೆದುರುಳಿಸಿವೆ.
***
ಹಮಾಸ್ ಉಗ್ರರಂತೆ ಅಗ್ಗದ ರಾಕೆಟ್ ಬಳಸುತ್ತಿರುವ ಪಾಕ್ ಸೇನೆ: ರಕ್ಷಣಾ ಮೂಲಗಳು

ನವದೆಹಲಿ: ಭಾರತದ ‘ಆಪರೇಷನ್ ಸಿಂಧೂರ’ ಕ್ಕೆ ಪ್ರತೀಕಾರವಾಗಿ ಪಾಕಿಸ್ತಾನ ಗುರುವಾರ ರಾತ್ರಿ ಭಾರತದ ಹಲವೆಡೆ ಕ್ಷಿಪಣಿ, ಡ್ರೋನ್ ಹಾಗೂ ಗುಂಡಿನ ದಾಳಿ ನಡೆಸಿದ್ದು, ಹಮಾಸ್ ಉಗ್ರರಂತೆ ದಾಳಿ ನಡೆಸುತ್ತಿರುವುದಾಗಿ ತಿಳಿದುಬಂದಿದೆ.
ಪರಿಸ್ಥಿತಿಯನ್ನು ನಿರ್ಣಯಿಸಿದ ನಂತರ, ಪಾಕಿಸ್ತಾನ ಸೇನೆಯು ಪ್ಯಾಲೆಸ್ತೀನ್ ಉಗ್ರರ ಗುಂಪು ಹಮಾಸ್ನಂತೆ ಕಾರ್ಯನಿರ್ವಹಿಸುತ್ತಿದೆ ಮತ್ತು ವರ್ತಿಸುತ್ತಿದೆ ಎಂಬುದು ಕಂಡುಬಂದಿದೆ.
ಏಪ್ರಿಲ್ನಲ್ಲಿ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐಎಸ್ಐ ಹಮಾಸ್ನೊಂದಿಗೆ ಸಭೆ ನಡೆಸಿತ್ತು ಎಂದು ರಕ್ಷಣಾ ಮೂಲಗಳಿಂದ ತಿಳಿದುಬಂದಿದೆ.
*****
ಭಾರತ-ಪಾಕ್ ಉದ್ವಿಗ್ನತೆ: ರಾಜ್ಯದ ಅಣುಸ್ಥಾವರ, ಅಣೆಕಟ್ಟುಗಳಿಗೆ ಭದ್ರತೆ ಹೆಚ್ಚಳ; ವಿಶೇಷ ಪಡೆ ನಿಯೋಜನೆ

ಬೆಂಗಳೂರು: ಆಪರೇಷನ್ ಸಿಂಧೂರ್ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ರಾಜ್ಯದ ಅಣುಸ್ಥಾವರ, ಅಣೆಕಟ್ಟುಗಳು ಸೇರಿದಂತೆ ಪ್ರಮುಖ ಸ್ಥಳಗಳ ರಕ್ಷಣೆಗೆ ಉತ್ತಮ ತರಬೇತಿ ಪಡೆದ ವಿಶೇಷ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ಗೃಹ ಸಚಿವ ಜಿ ಪರಮೇಶ್ವರ ಅವರು ಗುರುವಾರ ತಿಳಿಸಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವರು, ಭದ್ರತೆ ಹೆಚ್ಚಳಕ್ಕೆ ಸಂಬಂಧಿಸಿದಂತೆ ಎಲ್ಲಾ ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಗಳಿಗೆ(ಎಸ್ಪಿ) ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವ ಬಗ್ಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲಾಗಿದೆ ಎಂದು ಹೇಳಿದರು.
“ನಮ್ಮಲ್ಲಿ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆಯಂತಹ ಕೆಲವು ವಿಶೇಷ ಪಡೆಗಳಿವೆ. ಅವುಗಳಿಗೆ ಕಮ್ಯಾಂಡೋ ತರಬೇತಿಗಳಾಗಿರುತ್ತವೆ. ಅಂತಹ ಸಿಬ್ಬಂದಿಗಳನ್ನು ಭದ್ರತಾ ಕೆಲಸಗಳಿಗೆ ನಿಯೋಜಿಸಲಾಗುವುದು ಎಂದರು.
****
ಭಾರತ-ಪಾಕ್ ಉದ್ವಿಗ್ನತೆ: ರಾಜ್ಯ ಸರ್ಕಾರ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿದೆ; ಸಿಎಂ ಸಿದ್ದರಾಮಯ್ಯ

ಮಂಡ್ಯ: ಆಪರೇಷನ್ ಸಿಂಧೂರ ನಂತರ ಭಾರತ ಮತ್ತು ಪಾಕಿಸ್ತಾನ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ತಮ್ಮ ಸರ್ಕಾರ ರಾಜ್ಯದಾದ್ಯಂತ ಎಚ್ಚರಿಕೆ ನೀಡಿದ್ದು, ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ಹೇಳಿದ್ದಾರೆ.
ಭದ್ರತಾ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ನೀಡಿದ ಸೂಚನೆಗಳನ್ನು ಪಾಲಿಸಲಾಗುತ್ತಿದೆ ಎಂದು ಅವರು ಹೇಳಿದರು.
ರಾಜ್ಯದ ಅಣೆಕಟ್ಟುಗಳು ಮತ್ತು ಇತರ ಪ್ರಮುಖ ಸ್ಥಳಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ‘ನಾವು ಎಲ್ಲೆಡೆ ಎಚ್ಚರಿಕೆ ನೀಡಿದ್ದೇವೆ. ಏಕೆಂದರೆ, ಯಾವುದೇ ಸಮಯದಲ್ಲಿ ಏನು ಬೇಕಾದರೂ ಆಗಬಹುದು. ನಾವು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದ್ದೇವೆ’ ಎಂದರು.
