ಕೆ.ಆರ್.ಪೇಟೆ :-ವಿದ್ಯಾರ್ಥಿಗಳು ಅಂಕಗಳಿಕೆಗೆ ಮಾತ್ರ ಪ್ರಾಮುಖ್ಯತೆ ನೀಡದೇ ವೃತ್ತಿ ಕೌಶಲ್ಯ ಆಧಾರಿತ ಶಿಕ್ಷಣವನ್ನು ಪಡೆದುಕೊಂಡು ನಿಮ್ಮ ವ್ಯಕ್ತಿತ್ವವನ್ನು ಸಮಗ್ರವಾಗಿ ರೂಪಿಸಿಕೊಂಡು ಸಾಧನೆ ಮಾಡಬೇಕು ಎಂದು ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶಕಿ ಡಾ.ಶೋಭಾ ಕರೆ ನೀಡಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಸಂಘದ ಸಮಾರೋಪ ಸಮಾರಂಭ ಹಾಗೂ ಕಾಲೇಜಿನ ಪತ್ರಾoಕಿತ ವ್ಯವಸ್ಥಾಪಕ ಬಿ.ಎ. ಮಂಜುನಾಥ್ ಅವರ ಬೀಳ್ಕೊಡುಗೆ ಸಮಾರಂಭವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ಜಾಗತಿಕ ಜಗತ್ತಿನ ಇಂದಿನ ಸ್ಪರ್ಧಾ ಪ್ರಪಂಚದಲ್ಲಿ ಜಾಗತಿಕ ಸವಾಲುಗಳನ್ನು ಎದುರಿಸಿ ಗುರಿಮುಟ್ಟಲು ಕೇವಲ ಅಂಕಗಳಿಕೆಯೊಂದೇ ಮಾನದಂಡವಾಗುವುದಿಲ್ಲ. ಬದಲಾಗಿ ವಿದ್ಯಾರ್ಥಿಗಳು ವಿದ್ಯೆಯ ಜ್ಞಾನದ ಬೆಳಕಿನ ಶಕ್ತಿಯ ಜೊತೆಗೆ ಲೋಕಜ್ಞಾನ ಮತ್ತು ವ್ಯಾವಹಾರಿಕ ಜ್ಞಾನವನ್ನು ಅಭಿವೃದ್ಧಿಪಡಿಸಿಕೊಂಡು ಉನ್ನತವಾದ ಸಾಧನೆಯನ್ನು ಮಾಡುವ ಮೂಲಕ ಜೀವನದಲ್ಲಿ ಗುರಿಮುಟ್ಟಬೇಕು ಎಂದು ಶೋಭಾ ಕಿವಿಮಾತು ಹೇಳಿದರು.
ಕಾಲೇಜು ಶಿಕ್ಷಣ ಇಲಾಖೆಯ ಮೈಸೂರು ವಿಭಾಗದ ಪ್ರಾದೇಶಿಕ ನಿರ್ದೇಶಕ ಡಾ. ಚಂದ್ರಶೇಖರ್ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣ ಪಡೆದುಕೊಳ್ಳುವುದು ಉತ್ತಮವಾದ ಸಂಸ್ಕಾರ ಪಡೆದುಕೊಂಡು ಸಮಾಜದಲ್ಲಿ ಎಲ್ಲರಿಗೂ ಬೇಕಾದ ಉತ್ತಮವಾದ ಪ್ರಜೆಗಳಾಗಿ ಒಳ್ಳೆಯ ಜೀವನವನ್ನು ರೂಪಿಸಿಕೊಳ್ಳುವುದಾಗಿದೆ ಎಂಬ ಸತ್ಯವನ್ನು ಅರಿತು ಒಳ್ಳೆಯ ಸಾಧನೆ ಮಾಡಬೇಕು. ಶಿಕ್ಷಣದ ಸಾಧನೆಯ ಶಕ್ತಿಯು ಸಾಧಕರ ಸ್ವತ್ತೇ ಹೊರತು ಸೋಮಾರಿಗಳ ಸ್ವತ್ತಲ್ಲ ಎಂಬ ಸತ್ಯ ಅರಿತು ಸಮಾಜಮುಖಿಯಾಗಿ ಹೆಜ್ಜೆ ಹಾಕಬೇಕು. ಸೇವಾ ಮನೋಭಾವನೆ ಹಾಗೂ ಪರೋಪಕಾರ ಗುಣಗಳು ಜೀವನದ ಉಸಿರಾಗಬೇಕು ಎಂದು ಮನವಿ ಮಾಡಿದರು.
ಮಂಡ್ಯ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಶಿವಚಿತ್ರಪ್ಪ ಮಾತನಾಡಿ, ಜಿಲ್ಲೆಯಲ್ಲಿ ಸ್ನಾತಕೋತ್ತರ ಕೇಂದ್ರಗಳನ್ನು ಹೊಂದಿರುವ ಎಲ್ಲಾ ಕಾಲೇಜುಗಳಲ್ಲಿ ಸ್ನಾತಕೋತ್ತರ ಅಧ್ಯಯನ ಕೇಂದ್ರಗಳನ್ನು ಸ್ಥಾಪಿಸಿ ಡಾಕ್ಟರೇಟ್ ಪ್ರಬಂಧ ಮಂಡಿಸುವ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಪ್ರಸ್ತುತ ಮಂಡ್ಯ ವಿಶ್ವವಿದ್ಯಾನಿಲಯದ ವ್ಯಾಪ್ತಿಯಲ್ಲಿ ಮೂರೂ ಅಧ್ಯಯನ ಕೇಂದ್ರಗಳು ಕರ್ತವ್ಯನಿರ್ವಸುತ್ತಿದ್ದು, ಸಂಶೋಧನಾ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುತ್ತಿವೆ ಎಂದು ಹೇಳಿದರು.

ಶಾಸಕ ಹೆಚ್.ಟಿ.ಮಂಜು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಕಾಲೇಜಿನಿಂದ ಬೀಳ್ಕೊಡುಗೆ ಹೊಂಡುತ್ತಿರುವ ಬಿ.ಎ.ಮಂಜುನಾಥ್ ಹಾಗೂ ಇತರೆ ಗಣ್ಯರನ್ನು ಸನ್ಮಾನಿಸಿ ಗೌರವಿಸಿ ಮಂಜುನಾಥ್ ಅವರ ಕಾರ್ಯದಕ್ಷತೆಯನ್ನು ಗುಣಗಾನ ಮಾಡಿದರು. ವಿಶ್ರಾಂತ ಪ್ರಾಂಶುಪಾಲ ಡಾ. ಜಾನೇಗೌಡ, ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಚೇತನ್ ಕುಮಾರ್ ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲ ಡಾ. ವಿ.ವಿ.ಜಗಧೀಶ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ರಾಜ್ಯ ಆರ್.ಟಿ.ಓ ಅಧಿಕಾರಿಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ, ಕೆಪಿಸಿಸಿ ಸದಸ್ಯ ಕಿಕ್ಕೇರಿ ಸುರೇಶ್, ಸಹಾಯಕ ಪ್ರಾಧ್ಯಪಕರಾದ ಡಾ.ಸಿ.ರಮೇಶ್, ಜಯಾಕೀರ್ತಿ, ಮಹಿಳಾ ಸರ್ಕಾರಿ ವಿದ್ಯಾಲಯದ ಪ್ರಾಂಶುಪಾಲೆ ಡಾ.ಪ್ರತಿಮಾ, ಮಂಜುನಾಥ್ ಅವರ ಧರ್ಮಪತ್ನಿ ದಯಾಮಣಿ, ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾದ ಕೃಷ್ಣೆಗೌಡ, ತಿಪ್ಪೇಗೌಡ, ಪುರಸಭೆ ಸದಸ್ಯರಾದ ಡಿ. ಪ್ರೇಮಕುಮಾರ್, ಹೆಚ್.ಆರ್. ಲೋಕೇಶ್, ತಾಲೂಕು ಕೃಷಿಕ ಸಮಾಜದ ಜಿಲ್ಲಾ ನಿರ್ದೇಶಕ ನಾರಾಯಣಗೌಡ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ದತ್ತಿನಿಧಿಯ ಗೌರವ ಪುರಸ್ಕಾರ ನೀಡಿ ಗೌರವಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ಅತಿಥಿಗಳನ್ನು ತೆರೆದ ವಾಹನದಲ್ಲಿ ಜಾನಪದ ಕಲಾ ತಂಡಗಳ ವೈಭವದ ಮೆರವಣಿಗೆಯೊಂದಿಗೆ ವೇದಿಕೆಗೆ ಕರೆ ತರಲಾಯಿತು.
ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ
