ಟಿ. ನರಸೀಪುರ, ಮೇ 10,– ನಾನು ಅನ್ನೋದಿಲ್ಲದ, ನಾಟಕ ಮತ್ತು ಜನಪದ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಜನಮಾನಸದಲ್ಲಿ ಹೆಮ್ಮೆಪಡುವ ಸ್ಥಾನ ಗಳಿಸಿದ ಯಾಚೇನಹಳ್ಳಿ ಮಹದೇವ್ ಅವರಿಗೆ ಕಾಯಕ ರತ್ನ ಪ್ರಶಸ್ತಿ ಲಭಿಸಿದೆ.
ಮಂಡ್ಯ ಜಿಲ್ಲೆಯ ಜಗಜ್ಯೋತಿ ಬಸವಣ್ಣರವರ 891ನೇ ಜಯಂತಿ ಪ್ರಯುಕ್ತ ಸಿರಿಗನ್ನಡ ವೇದಿಕೆ ಸಂಸ್ಥೆಯು ಈ ಗೌರವವನ್ನು ಮಹದೇವ್ರಿಗೆ ನೀಡಿ ಸನ್ಮಾನಿಸಿದೆ. ತಾವು ನಡೆಸುತ್ತಿರುವ ನನ್ನವ್ವ ಸಾಂಸ್ಕೃತಿಕ ಕಲಾ ತಂಡದ ಮುಖಾಂತರ, ಅವರು ಕಳೆದ 15 ವರ್ಷಗಳಿಂದ 5000ಕ್ಕೂ ಹೆಚ್ಚು ಬೀದಿ ನಾಟಕಗಳು, ಸಾವಿರಕ್ಕೂ ಹೆಚ್ಚು ವೇದಿಕೆ ಪ್ರದರ್ಶನಗಳು, ರಾಜ್ಯ ಮತ್ತು ಹೊರರಾಜ್ಯಗಳಲ್ಲಿ ನಟನೆ, ದೂದರ್ಶನ ಚಂದನ ಟಿವಿ, ಎಫ್ಎಂ ವಾಹಿನಿಗಳಲ್ಲಿ ಕಾರ್ಯಕ್ರಮಗಳ ಮೂಲಕ ಜನರ ಮನಸ್ಸಿನಲ್ಲಿ ಅಚ್ಚಳಿಯ ಛಾಪು ಮೂಡಿಸಿದ್ದಾರೆ.
ಅವರು ಬರಹಗಾರರಾಗಿ ಕೂಡ ಹೆಸರು ಮಾಡಿದ್ದಾರೆ. ಜನಪದ ಹಾಗೂ ಸಾಮಾಜಿಕ ವಿಷಯಗಳಲ್ಲಿ ಆಳವಾದ ತಳಮಳ ಹೊಂದಿರುವ ಮಹದೇವ್ ಅವರು, “ಅಪ್ಪಿಕೊಂಡ ಕೈಗಳು”, “ನನ್ನವ್ವನ ಪದ” ಸೇರಿದಂತೆ ಹಲವು ಕೃತಿಗಳನ್ನು ರಚಿಸಿದ್ದಾರೆ. ವಿಶೇಷವಾಗಿ, ಟಿ. ನರಸೀಪುರದ ಆಲಗೂಡು ಮಹದೇವರ ಜೀವನ ಚರಿತ್ರೆ ‘ರೈತ ನಕ್ಷತ್ರ ಅಲಗೂಡು ಮಹದೇವ’ ಎಂಬ ಕೃತಿ ಕೇಂದ್ರ ಗ್ರಂಥಾಲಯದ ಆಯ್ಕೆಯೂ ಆಗಿದೆ.
ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಜಿಲ್ಲಾ ಯುವ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪೂರ್ವದಲ್ಲಿ ಪಡೆದಿರುವ ಇವರು, ನೂರಾರು ಕಲಾವಿದರಿಗೆ ವೇದಿಕೆಯಾಗಿರುವ ‘ನನ್ನವ್ವ’ ತಂಡದ ಮೂಲಕ ಜನಪದ ಕಲಾ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದ್ದಾರೆ. ಈ ಸೇವೆಯ ಪರಿಗಣನೆಯೊಂದಿಗೆ ‘ಕಾಯಕ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
– ಎಂ .ನಾಗೇಂದ್ರ ಕುಮಾರ
