ಬೆಂಗಳೂರು : ನೆರೆಯ ರಾಜ್ಯ ಆಂಧ್ರಪ್ರದೇಶಕ್ಕೆ ಇಂದು ನಾಲ್ಕು ಕುಮ್ಕಿ ಆನೆಗಳನ್ನು ಹಸ್ತಾಂತರಿಸಲಾಯಿತು. ವಿಧಾನಸೌಧದ ಮುಂಭಾಗದ ಮೆಟ್ಟಿಲುಗಳ ಮೇಲೆ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿ ಹಾಗೂ ಅರಣ್ಯ ಸಚಿವ ಪವನ್ ಕಲ್ಯಾಣ್ ಅವರಿಗೆ ಪಳಗಿಸಿದ ಆನೆಗಳನ್ನು ಹಸ್ತಾಂತರ ಮಾಡಿದರು. ಈ ವೇಳೆ ರಾಜ್ಯದಿಂದ ಆಂಧ್ರ ಪ್ರದೇಶ ರಾಜ್ಯಕ್ಕೆ ಕುಮ್ಕಿ ಆನೆಗಳನ್ನು ಹಸ್ತಾಂತರಿಸುವ ಒಡಂಬಡಿಕೆಗೆ ಸಹಿ ಹಾಕಿದರು.
ಮಾನವ ಆನೆ ಸಂಘರ್ಷ ತಡೆಗಟ್ಟಲು ಸಹಕಾರ ಅಗತ್ಯ : ಈ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಮಾನವ ಆನೆ ಸಂಘರ್ಷ ತಡೆಗಟ್ಟಲು ಅಕ್ಕ-ಪಕ್ಕದ ರಾಜ್ಯಗಳ ಸಹಕಾರ ಅಗತ್ಯ. ದೇಶದಲ್ಲೇ ಆನೆ ಸಂಪತ್ತು ಹೆಚ್ಚಾಗಿರುವ ರಾಜ್ಯ ನಮ್ಮದು. 3695 ಆನೆಗಳು ನಮ್ಮಲ್ಲಿವೆ ಎಂದರು.
ಮಾನವ, ಆನೆ ಸಂಘರ್ಷ ತಡೆಯುವುದರಿಂದ ಜೀವ ಹಾನಿ, ಬೆಳೆ ಹಾನಿ ತಪ್ಪುತ್ತದೆ. ಈ ಮಹತ್ವದ ಉದ್ದೇಶದಿಂದಲೇ ರಾಜ್ಯದಿಂದ ಆರು ಕುಮ್ಕಿ ಆನೆಗಳನ್ನು ಆಂಧ್ರಕ್ಕೆ ಹಸ್ತಾಂತರಿಸಲಾಗುತ್ತದೆ ಎಂದು ತಿಳಿಸಿದರು.
ಸಚಿವರಾದ ಕೆ.ಜೆ. ಜಾರ್ಜ್, ದಿನೇಶ್ ಗುಂಡೂರಾವ್, ಬೈರತಿ ಸುರೇಶ್, ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ಮತ್ತಿತರರು ಹಾಜರಿದ್ದರು. ಇಂದು ನಾಲ್ಕು ಆನೆಗಳನ್ನು ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ಎರಡು ಆನೆಗಳನ್ನು ನೀಡಲಾಗುತ್ತದೆ.
