ಚನ್ನರಾಯಪಟ್ಟಣ: ಮನುಷ್ಯನಿಗೆ ಕಣ್ಣು ಅತ್ಯಮೂಲ್ಯ ಅಂಗವಾಗಿದೆ. ಅದನ್ನು ರಕ್ಷಿಸಿಕೊಂಡು ಬದುಕಿನಲ್ಲಿ ಮುನ್ನಡೆಯಬೇಕು ಎಂದು ಬೇಲೂರು ಶಾಸಕ ಎಚ್.ಕೆ. ಸುರೇಶ್ ಹೇಳಿದರು.
ಪಟ್ಟಣದ ಕೋಟೆ ಕೊಳದ ಬೀದಿಯಲ್ಲಿ ನೂತನವಾಗಿ ನಿರ್ಮಿಸಲಾದ ಸಾಯಿ ನೇತ್ರ ಚಿಕಿತ್ಸಾಲಯದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. “ಮನುಷ್ಯನ ದೇಹದ ಪ್ರತಿಯೊಂದು ಅಂಗವೂ ಅತ್ಯವಶ್ಯಕವಾದರೂ, ಕಣ್ಣಿಗೆ ವಿಶಿಷ್ಟ ಸ್ಥಾನವಿದೆ. ನಾವೆಲ್ಲರೂ ದಿನಚರ್ಯೆಯಲ್ಲಿ ಕಣ್ಣುಗಳ ಮುಖಾಂತರ ಅನೇಕ ವಿಷಯಗಳನ್ನು ಗ್ರಹಿಸುತ್ತೇವೆ. ಇಂತಹ ಸಮಯದಲ್ಲಿ ತಾಲೂಕು ಮಟ್ಟದಲ್ಲಿ ಸುಸಜ್ಜಿತ ನೇತ್ರ ಚಿಕಿತ್ಸಾಲಯ ಆರಂಭವಾಗಿರುವುದು ಖುಷಿಯ ವಿಚಾರವಾಗಿದೆ,” ಎಂದು ಅವರು ಅಭಿಪ್ರಾಯಪಟ್ಟರು.
ಈ ಹಿಂದೆ ಜನರು ಕಣ್ಣಿನ ತಪಾಸಣೆ ಅಥವಾ ಶಸ್ತ್ರಚಿಕಿತ್ಸೆಗಾಗಿ ಜಿಲ್ಲಾಮಟ್ಟಕ್ಕೆ ಅಥವಾ ಹೊರ ಜಿಲ್ಲೆಗೆ ತೆರಳಬೇಕಾಗುತ್ತಿತ್ತು. ಇದೀಗ ಸ್ಥಳದಲ್ಲೇ ಉತ್ತಮ ಚಿಕಿತ್ಸಾ ಸೌಲಭ್ಯ ಲಭ್ಯವಾಗುತ್ತಿದೆ ಎಂಬುದು ಜನತೆಗೆ ಅನುಕೂಲವಿದೆ ಎಂದು ಅವರು ಹೇಳಿದರು.
ಉದ್ಘಾಟನಾ ಸಮಾರಂಭದಲ್ಲಿ ಡಾ. ರಘು, ಬಿಜೆಪಿ ಮುಖಂಡ ಅಣತಿ ಆನಂದ್, ತಾಲೂಕು ಮಾಜಿ ಬಿಜೆಪಿ ಅಧ್ಯಕ್ಷ ರವಿ ದಮನಿಂಗಲ, ಪಕ್ಷದ ಮುಖಂಡರುಗಳಾದ ನಂಜುಂಡ ಮೈಮ್, ಕೇಶವಮೂರ್ತಿ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
- ಮಂಜುನಾಥ್ ಐ.ಕೆ
