ಟಿ.ನರಸೀಪುರ : ಪೌರ ಕಾರ್ಮಿಕ ಕುಟುಂಬ ಸರ್ಕಾರಿ ಕರಾಬು ಜಾಗವೆಂದು ಶೆಡ್ ನಿರ್ಮಾಣ ಮಾಡಿದ್ದು ಇದಕ್ಕೆ ಜಮೀನಿನ ಮಾಲೀಕರು ತೀರ್ವ ವಿರೋಧ ವ್ಯಕ್ತ ಪಡಿಸಿ ಕೂಡಲೇ ತೆರವುಗೊಳಿಸುವಂತೆ ತಾಕೀತು ಮಾಡಿದರು.
ತಾಲ್ಲೂಕಿನ ಮೂಗೂರು ಹೋಬಳಿ ಸಮೀಪದ ಕನ್ನಹಳ್ಳಿ ಎಲ್ಲೆಗೆ ಬರುವ ಎಂ.ಸೀಹಳ್ಳಿ ಗ್ರಾಮದಲ್ಲಿ ಕಳೆದ ನಲವತ್ತು ವರ್ಷಗಳಿಂದ ವಾಸವಾಗಿದ್ದ ಪೌರಕಾರ್ಮಿಕ ಕುಟುಂಬಸ್ಥರು ಊರಿನ ಹೊರವಲಯದಲ್ಲಿ ವಾಸ ಮಾಡಲು ಯೋಗ್ಯವಿಲ್ಲವೆಂದು ಸರ್ಕಾರಿ ಕರಾಬು ಜಾಗವೆಂದು ತಿಳಿದು ಗ್ರಾಮದ ಸರ್ವೇ ನಂ 259/3 ರ ಜಮೀನಿನಲ್ಲಿ ಟೆಂಟ್ ನಿರ್ಮಾಣ ಮಾಡಿದ್ದರು.
ಈ ಸಂಬಂಧ ಜಮೀನಿನ ಮಾಲೀಕರು ದಾಖಲೆಯೊಂದಿಗೆ ಸ್ಥಳಕ್ಕಾಗಮಿಸಿ ಈ ಜಾಗದಲ್ಲಿ ಯಾವುದೇ ಕರಾಬು ಇರುವುದಿಲ್ಲ ಇದು ನನಗೆ ಪಿತ್ರಾರ್ಜಿತವಾಗಿ ಬಂದ ಆಸ್ಥಿಯಾಗಿದ್ದು ಅಕ್ರಮವಾಗಿ ನನ್ನ ಜಮೀನಿನಲ್ಲಿ ಶೆಡ್ ನಿರ್ಮಾಣ ಮಾಡಿದ್ದಾರೆಂದು ಜಮೀನಿನ ಮಾಲೀಕ ಗುರುರಾಜ್ ಆರೋಪಿಸಿ ಆಕ್ಷೇಪಿಸಿದರು.
ಈ ಸಂಬಂಧ ಪೌರ ಕಾರ್ಮಿಕರು ಹಾಗೂ ಜಮೀನಿನ ಮಾಲೀಕರು ಮತ್ತು ಗ್ರಾಮಸ್ಥರ ನಡುವೆ ಮಾತಿನ ವಾಕ್ಸಮರ ನಡೆದ ಹಿನ್ನಲೆಯಲ್ಲಿ ತಾಲ್ಲೂಕು ಪಂಚಾಯತಿ ಮಾಜಿ ಸದಸ್ಯ ಗುರುಮೂರ್ತಿಯವರು ಮದ್ಯ ಪ್ರವೇಶಿಸಿ ಇದು ಸರ್ಕಾರಿ ಕರಾಬು ಜಾಗವೇ ಆಗಿದ್ದು ನನ್ನ ಬಳಿ ಅಗತ್ಯ ದಾಖಲೆಗಳು ಇವೆ.ಪೌರಕಾರ್ಮಿಕರ ಕುಟುಂಬ ಕಳೆದ ನಲವತ್ತು ವರ್ಷಗಳಿಂದ ಗ್ರಾಮಕ್ಕೆ ಸೇವೆ ನೀಡುತ್ತಾ ಬರುತ್ತಿದ್ದಾರೆ.ಅವರು ಹಾಲಿ ವಾಸವಿರುವ ಸ್ಥಳ ವಾಸಕ್ಕೆ ಯೋಗ್ಯವಿಲ್ಲವಾಗಿದೆ.ಆದ್ದರಿಂದ ಸರ್ಕಾರಿ ಜಾಗದಲ್ಲಿ ವಾಸಕ್ಕೆ ಶೆಡ್ ನಿರ್ಮಾಣ ಮಾಡಿದ್ದಾರೆಂದು ತಿಳಿಸಿದರು.

ಆತ್ಮಹತ್ಯೆ ಬೆದರಿಕೆ
ಪೌರ ಕಾರ್ಮಿಕ ಕುಟುಂಬದ ಮಹಿಳೆ ಲಕ್ಮೀ ಮಾತನಾಡಿ ಕಳೆದ ನಲವತ್ತು ವರ್ಷದಿಂದ ಇಲ್ಲೇ ಕೆಲಸ ಮಾಡುತ್ತಾ ವೋಟರ್ ಐಡಿ,ಆಧಾರ್ ಕಾರ್ಡ್ ಹಾಗೂ ರೇಷನ್ ಕಾರ್ಡ್ ಮಾಡಿಸಿ ಬರುವಂತಹ ಚುನಾವಣೆಗಳಲ್ಲಿ ಮತವನ್ನು ಚಲಾಯಿಸಿದ್ದೇವೆ.ಮತ ಹಾಕಲು ಮಾತ್ರ ನಾವು ಬೇಕು ಆದರೆ ನಮ್ಮ ಹಿತ ಕಾಪಾಡಲು ಯಾರೂ ಮುಂದೆ ಬರುತ್ತಿಲ್ಲ.ವಿದ್ಯುತ್ ದೀಪದ ಸೇವೆಯಿಂದ ಹೊರಗಿದ್ದೇವೆ.ಓದುವ ನಮ್ಮ ಮಕ್ಕಳೂ ಕಷ್ಟಪಡಬೇಕೆ.ನಮಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ ಬದುಕಲು ಅವಕಾಶ ಕೊಡಿ ನಾವು ಮನುಷ್ಯರಲ್ಲವೇ ಎಂದು ತಮ್ಮ ಅಳಲನ್ನು ತೋಡಿಕೊಂಡು ಸ್ಥಳ ಬಿಟ್ಟು ನಿರ್ಗಮಿಸಬೇಕಾದ ಸಂದರ್ಭ ಬಂದರೆ ಈ ಸ್ಥಳದಲ್ಲಿಯೇ ಪ್ರಾಣ ಹತ್ಯೆ ಮಾಡಿಕೊಳ್ಳುತ್ತೇನೆಂದು ಕಂಬನಿ ಮಿಡಿದರು.

ಎಚ್ಚರಿಕೆ
ಇಷ್ಟರಲ್ಲಿ ಮೈಸೂರು ಜಿಲ್ಲಾ ಸಫಾಯಿ ಕರ್ಮಚಾರಿ ವಿಚಕ್ಷಣಾ ಜಾಗೃತಿ ಸಮಿತಿ ಶಾಶ್ವತ ಸದಸ್ಯ ಕೆ.ನಂಜಪ್ಪ ಬಸವನಗುಡಿ ಸ್ಥಳಕ್ಕೆ ಆಗಮಿಸಿ ಮಾತನಾಡಿ ತಲೆ ಮೇಲೆ ಮಲ ಹೊತ್ತು ಸೇವೆ ಸಲ್ಲಿಸುತ್ತಿದ್ದ ಕಾಲಘಟ್ಟದಿಂದಲೂ ತಮ್ಮ ಕಾಯಕ ಮಾಡುತ್ತಾ ಬರುತ್ತಿದ್ದಾರೆ.ಇಂತಹವರಿಗೆ ಸರ್ಕಾರಿ ಕರಾಬು ಜಾಗದಲ್ಲಿ ಮನೆ ನಿರ್ಮಿಸಿಕೊಳ್ಳಲು ಅವಕಾಶ ಕೊಡಿ ಎಂದು ಈಗಾಗಲೇ ತಾಲ್ಲೂಕು ಆಡಳಿತಕ್ಕೆ ಮನವಿ ಸಲ್ಲಿಸಿದ್ದೇವೆಂದರು.ಆಗ ಜಮೀನಿನ ಮಾಲೀಕರು ಸೇರಿದಂತೆ ಕೆಲವು ಮಹಿಳೆಯರು ಹಾಗೂ ಪುರುಷರು ಏರು ಧ್ವನಿಯಲ್ಲಿ ಮಾತುಕತೆ ನಡೆದಾಗ ಸ್ಥಳದಲ್ಲಿದ್ದ ಮೂಗೂರು ಉಪಠಾಣೆಯ ದಫೇಧಾರ್ ಚಂದ್ರಶೇಖರ್ ರವರು ತಾಲ್ಲೂಕು ಪೊಲೀಸ್ ಅಧಿಕಾರಿಗೆ ವಿಷಯ ಮುಟ್ಚಿಸಿದರು. ಸ್ಥಳಕ್ಕೆ ಇನ್ಸ್ಪೆಕ್ಟರ್ ಧನಂಜಯ್ ರವರು ಆಗಮಿಸಿ ಪರಿಸ್ಥಿತಿಯನ್ನು ಅವಲೋಕಿಸಿ ಗ್ರಾಮದಲ್ಲಿ ಈ ವಿಷಯದಿಂದ ಶಾಂತಿ ಕದಡದಂತೆ ಎಚ್ಚರಿಕೆ ವಹಿಸಬೇಕೆಂದು ತಿಳಿಸಿದರು.ಮುಂದೆ ಏನಾದರು ಅಹಿತಕರ ಘಟನೆ ಸಂಭವಿಸಿದರೆ ಘಟನೆಗೆ ಕಾರಣರಾದವರು ಹೊಣೆಗಾರರಾಗಬೇಕಾಗುತ್ತದೆಂದು ಎಚ್ಚರಿಸಿದರು.

ಬೀದಿಗೆ ತರಬೇಡಿ
ಡಾ.ಬಿ.ಆರ್.ಅಂಬೇಡ್ಕರ್ ರವರನ್ನು ಬೀದಿಗೆ ತಂದು ಎಲ್ಲೆಂದರಲ್ಲಿ ಅವರ ಪೋಟೋ ಇಟ್ಚು ಅಪಮಾನಿಸಬೇಡಿ.ಈಗಾಗಲೇ ಪೋಟೋಗೆ ಅಪಮಾನ ಮಾಡಿರುವ ಇದರಿಂದ ಘರ್ಷಣೆ, ಗಲಾಟೆಗಳು ಸಂಭವಿಸಿವೆ.ಮನೆಯಲ್ಲಿ ಇಡುವವರನ್ನು ಬೀದಿಯಲ್ಲಿ ತಂದು ನಿಲ್ಲಿಸಬೇಡಿ ಎಂದರು.

ಜಾಗದ ವಿಚಾರವನ್ನು ಸರ್ಕಾರದ ಗಮನಕ್ಕೆ ತಂದು ಅದು ನಿಮ್ಮ ಹೆಸರಿಗೆ ಮಂಜೂರು ಆದ ನಂತರ ನೀವು ಸ್ಥಳದಲ್ಲಿ ಮುಂದಿನ ಸಿದ್ದತೆಗೆ ಅಣಿಯಾಗಬೇಕೆ ಹೊರತು ಏಕಾಏಕಿ ಶೆಡ್ ನಿರ್ಮಾಣ ಮಾಡಬಾರದೆಂದು ಸಲಹೆ ನೀಡಿದರು.ಈ ಸಂದರ್ಭದಲ್ಲಿ ಕೆ.ನಂಜಪ್ಪ ಬಸವನಗುಡಿ ಮದ್ಯಪ್ರವೇಶಿಸಿ ಮಾತನಾಡಿ ಸರ್ಕಾರಿ ಜಾಗ ಆಗಿರುವುದರಿಂದ ಅವರು ಶೆಡ್ ನಿರ್ಮಾಣ ಮಾಡಿದ್ದಾರೆ.ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಪೊಲೀಸ್ ರಕ್ಷಣೆ ನೀಡಬೇಕೆಂದಾಗ ಯಾರೇ ಆದರೂ ಕಾನೂನಿನ ಚೌಕಟ್ಟಿನ ಒಳಗೆ ಕೆಲಸ ಮಾಡಬೇಕೆ ಹೊರತು ಕಾನೂನನ್ನು ಮೀರಿ ಯಾವುದನ್ನು ಮಾಡಲು ಸಾಧ್ಯವಿಲ್ಲ.ಏನೂ ಅರಿಯದ ಅಮಾಯಕರನ್ನು ಈ ರೀತಿ ಎತ್ತಿ ಕಟ್ಚಿ ಗ್ರಾಮದಲ್ಲಿ ಅಶಾಂತಿ ವಾತಾವರಣ ಸೃಷ್ಟಿಸಿದರೆ ನೀವೇ ಹೊಣೆಗಾರರಾಗಬೇಕಾಗುತ್ತದೆಂದು ಎಚ್ಚರಿಕೆ ನೀಡಿದರು. ಎಚ್ಚರಿಕೆ ನೀಡುವ ಮೂಲಕ ಪರಿಸ್ಥಿತಿಯನ್ನು ತಿಳಿಗೊಳಿಸಿದರು.
– ಎಂ.ನಾಗೇಂದ್ರ ಕುಮಾರ್
