ಬೇಲೂರು– ತಾಲೂಕಿನಲ್ಲಿ ಕಾಡಾನೆ-ಮಾನವರ ನಡುವಿನ ಸಂಘರ್ಷ ತಾರಕಕ್ಕೇರಿದ್ದು, ಆನೆ ದಾಳಿಗೆ ಮತ್ತೊಂದು ಬಲಿಯಾಗಿದೆ. ತೋಟದ ಕೆಲಸಕ್ಕೆ ತೆರಳುತ್ತಿದ್ದ ಮಹಿಳೆ ಮೇಲೆ ಕಾಡಾನೆ ಏಕಾಏಕಿ ದಾಳಿ ಮಾಡಿ ಬಲಿ ಪಡೆದಿದೆ.
ತಾಲೂಕಿನ ಅಂಕಿಹಳ್ಳಿ ಗ್ರಾಮದಲ್ಲಿ ಈ ದುರಂತ ಘಟಿಸಿದ್ದು, ಗಜೇಂದ್ರಪುರ ಗ್ರಾಮದ ಚಂದ್ರಮ್ಮ (45) ಮೃತ ಮಹಿಳೆ. ಚಂದ್ರಮ್ಮ ಸೇರಿದಂತೆ ಒಟ್ಟು 12 ಮಹಿಳೆಯರು ತೋಟದ ಕೆಲಸಕ್ಕೆ ತೆರಳುತ್ತಿದ್ದ ವೇಳೆ ಏಕಾಏಕಿ 5 ಕಾಡಾನೆ ಹಿಂಡು ದಾಳಿ ಮಾಡಿವೆ. ಈ ವೇಳೆ ಎಲ್ಲರೂ ದಿಕ್ಕಪಾಲಾಗಿ ಓಡಿದ್ದು, ದುರದೃಷ್ಟವಶಾತ್ ಚಂದ್ರಮ್ಮ ಕಾಡಾನೆಗೆ ಸಿಲುಕಿ ಜೀವ ಕಳೆದುಕೊಂಡಿದ್ದಾರೆ.
ಸೊಂಡಿಲಿನಿಂದ ಎತ್ತಿ ಬಿಸಾಡಿ, ಕಾಲಿನಿಂದ ತುಳಿದು ಬರ್ಬರವಾಗಿ ಜೀವ ತೆಗೆದಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸರು ದೌಡಾಯಿಸಿದ್ದಾರೆ.
ರಸ್ತೆ ತಡೆ: ಮಲೆನಾಡು ಭಾಗದಲ್ಲಿ ಕಾಡಾನೆ ದಾಳಿ ಮಿತಿ ಮೀರಿದ್ದು, ಕೂಲಿ ಕಾರ್ಮಿಕರೇ ಹೆಚ್ಚಾಗಿ ಬಲಿಯಾಗುತ್ತಿರುವುದು ಈ ಭಾಗದ ಜನರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಕೂಡಲೇ ಆನೆಗಳನ್ನು ಸೆರೆ ಹಿಡಿದು ಸ್ಥಳಾಂತರಿಸುವಂತೆ ಹತ್ತಾರು ಬಾರಿ ಮನವಿ ಮಾಡಿದರೂ ಸರ್ಕಾರವಾಗಲೀ, ಅರಣ್ಯ ಇಲಾಖೆಯಾಗಲೀ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಆರೋಪಿಸಿ ಸ್ಥಳೀಯರು ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಅದ್ದೂರಿ ಚೇತನ್ ಕುಮಾರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.
ಮೃತದೇಹ ಮೇಲೆತ್ತಲು ಬಿಡದೆ, ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಬಂದ ಆಂಬ್ಯುಲೆನ್ಸ್ ಹಾಗೂ ಅಧಿಕಾರಿಗಳ ವಾಹನ ತಡೆದು ನಮಗೆ ಶಾಶ್ವತ ಪರಿಹಾರ ಬೇಕು. ನೊಂದ ಕುಟುಂಬಕ್ಕೆ ಸಾಂತ್ವನ ಹೇಳಲು ಮೇಲಾಧಿಕಾರಿಗಳು, ಸಚಿವರು ಬಂದು ನಮಗೆ ಸೂಕ್ತ ನ್ಯಾಯ ದೊರಕುವರೆಗೂ ಶವ ಮೇಲೆತ್ತಲು ಬಿಡುವುದಿಲ್ಲ ಎಂದು ಮಳೆಯ ನಡುವೆಯೂ ಪ್ರತಿಭಟನೆ ಮುಂದುವರಿಸಿದರು.
6 ಮಂದಿ ಬಲಿ: ಕೇವಲ ಅಮಾಯಕರೇ ಆನೆ ದಾಳಿಗೆ ಬಲಿ ಯಾಗುತ್ತಿದ್ದಾರೆ. ಕಳೆದ ಮೂರ್ನಾಲ್ಕು ತಿಂಗಳ ಅಂತರದಲ್ಲಿ 6 ಮಂದಿ ಮೃತಪಟ್ಟಿದ್ದಾರೆ. ಅರಣ್ಯ ಸಚಿವರು ಕೇವಲ ಭರವಸೆ ನೀಡುತ್ತಿದ್ದಾರೆಯೇ ಹೊರತು ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ಕಂಡು ಹಿಡಿಯುವಲ್ಲಿ ವಿಫಲರಾಗಿದ್ದಾರೆ ಎಂದು ಕಿಡಿಕಾರಿದರು. ಸ್ಥಳಕ್ಕೆ ಅರಣ್ಯ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ಆಗಮಿಸಬೇಕು, ಅಲ್ಲಿಯವರೆಗೂ ಮೃತದೇಹ ಮೇಲೆತ್ತಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು.
ಇದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಯಾವುದೇ ಅಹಿತರಕ ಘಟನೆ ನಡೆಯದಂತೆ ಬಿಗಿ ಪೆÇಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಡಿಸಿ-ಎಸ್ಪಿ ಭೇಟಿ: ಸ್ಥಳಕ್ಕೆ ಜಿಲ್ಲಾಧಿಕಾರಿ ಸಿ.ಸತ್ಯಭಾಮ, ಎಸ್ಪಿ ಮೊಹಮ್ಮದ್ ಸುಜೀತಾ, ಸಿಸಿಎಫ್ ಏಡುಕುಂಡಲ, ಡಿಎಫ್ಓ ಸೌರಭ್ ಕುಮಾರ್ ಆಗಮಿಸಿ ಪ್ರತಿಭಟನಾಕಾರರ ಸಮಸ್ಯೆ ಆಲಿಸಿದರು. ಮೃತ ಮಹಿಳೆ ಜೊತೆಗಿದ್ದ ಮಹಿಳೆಯರು ಕಣ್ಣೀರಿಟ್ಟು, ಕಾಡಾನೆ ಪೀಡಿತ ಪ್ರದೇಶದ ಜನರು ನಿತ್ಯ ಅನುಭವಿಸುತ್ತಿರುವ ಸಮಸ್ಯೆಗಳನ್ನು ಅಧಿಕಾರಿಗಳ ಮುಂದೆ ತೆರೆದಿಟ್ಟರು.
ಮನವೊಲಿಸಿದ ಅಧಿಕಾರಿಗಳು: ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಅಧಿಕಾರಿಗಳು, ಹಲವು ಭರವಸೆ ನೀಡಿ ಪ್ರತಿಭಟನಾಕಾರರ ಮನ ವೊಲಿಸುವಲ್ಲಿ ಯಶಸ್ವಿಯಾದರು. ಈಗಿನಿಂದಲೇ ಕಾಡಾನೆ ಚಲನ ವಲನದ ಬಗ್ಗೆ ಸರಿಯಾದ ಮಾಹಿತಿ ಪಡೆದು, ಸಮಸ್ಯೆಗೆ ಪರಿಹಾರ ಕಂಡು ಹಿಡಿಯಲು ಸರ್ಕಾರದೊಂದಿಗೆ ಚರ್ಚೆ ನಡೆಸುತ್ತೇವೆ. ರಾತ್ರಿ ವೇಳೆ ವಿದ್ಯುತ್ ಕಡಿತ ಮಾಡದಂತೆ ಸೆಸ್ಕಾಂ ಇಲಾಖೆಗೆ ಸೂಚನೆ ನೀಡಲಾಗಿದೆ. ಕಾಡಾನೆ ಹಾವಳಿ ತಪ್ಪಿಸಲು ಸಾಕಷ್ಟು ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿ ಮೃತರ ಕುಟುಂಬಕ್ಕೆ 20 ಲಕ್ಷದ ಪರಿಹಾರದ ಚೆಕ್ ವಿತರಿಸಿದರು. ಬಳಿಕ ಪ್ರತಿಭಟನಾಕಾರರು ಧರಣ ಹಿಂಪಡೆದರು. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಬೇಲೂರು ತಾಲ್ಲೂಕು ಆಸ್ಪತ್ರೆಗೆ ಕೊಂಡೊಯ್ಯಲಾಯಿತು.
