ಬೆಂಗಳೂರು, ಮೇ 26: ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕರ್ನಾಟಕ ಸರ್ಕಾರ ರಾಜ್ಯ ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆ 2025ಕ್ಕೆ ಅನುಮೋದನೆ ನೀಡಿದೆ. ಮೇ 15 ರಿಂದ ಜೂನ್ 14ರ ತನಕ ವರ್ಗಾವಣೆ ನಡೆಯಲಿದೆ ಎಂದು ಘೋಷಣೆ ಮಾಡಲಾಗಿದೆ
ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆಗೆ ಮಾರ್ಗಸೂಚಿಯನ್ನು ಸಹ ಬಿಡುಗಡೆ ಮಾಡಲಾಗಿದೆ. ಆದರೆ ಈಗ ಸರ್ಕಾರಿ ನೌಕರರ ವರ್ಗಾವಣೆ ಕುರಿತು ಮುಖ್ಯ ಕಾರ್ಯದರ್ಶಿಗಳು ಸೂಚನೆಯೊಂದನ್ನು ಹೊರಡಿಸಿದ್ದಾರೆ.
ಈ ಕುರಿತು ಸರ್ಕಾರದ ಎಲ್ಲಾ ಅಪರ ಮುಖ್ಯ ಕಾರ್ಯದರ್ಶಿ/ ಪ್ರಧಾನ ಕಾರ್ಯದರ್ಶಿ/ ಕಾರ್ಯದರ್ಶಿಗಳಿಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಪತ್ರವನ್ನು ಬರೆದಿದ್ದಾರೆ. ಸರ್ಕಾರಿ ನೌಕರರ ಮಾರ್ಗಸೂಚಿಯನ್ನು ಉಲ್ಲಂಘಿಸುತ್ತಿರುವ ಬಗ್ಗೆ ಉಲ್ಲೇಖಿಸಿದ್ದಾರೆ.
ಮುಖ್ಯ ಕಾರ್ಯದರ್ಶಿಗಳ ಪತ್ರ: ಈ ಹಿಂದಿನ ವರ್ಷಗಳ ವರ್ಗಾವಣೆ ಅವಧಿಯಲ್ಲಿ ಗಮನಿಸಿದ ಸನ್ನಿವೇಶಗಳ ಹಿನ್ನೆಲೆಯಲ್ಲಿ, ಸ್ಪಷ್ಟ ವರ್ಗಾವಣೆ ಮಾರ್ಗಸೂಚಿ ಹಾಗೂ ಸೂಚನೆಗಳನ್ನು ಹೊರಡಿಸಿದ್ದರೂ ಕೂಡ, ವರ್ಗಾವಣೆ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ವರ್ಗಾವಣೆ ಆದೇಶಗಳನ್ನು ಹೊರಡಿಸಿದ್ದಲ್ಲಿ ಕರ್ನಾಟಕ ಆಡಳಿತ ನ್ಯಾಯಮಂಡಳಿಯಲ್ಲಿ ಬಹಳಷ್ಟು ಪ್ರಕರಣಗಳು ದಾಖಲಾಗುವುದನ್ನು ಗಮನಿಸಲಾಗಿದೆ ಎಂದು ಪತ್ರದಲ್ಲಿ ಹೇಳಿದ್ದಾರೆ.
ಆದುದರಿಂದ, ಪ್ರತಿಯೊಬ್ಬ ಇಲಾಖಾ ಕಾರ್ಯದರ್ಶಿ/ ಮುಖ್ಯಸ್ಥರು ತಮ್ಮ ಇಲಾಖೆಯಲ್ಲಿ ಯಾವುದೇ ವರ್ಗಾವಣೆ ಆದೇಶ ಹೊರಡಿಸುವ ಮೊದಲು ಈ ಕೆಳಕಂಡ ಆಕ್ಷೇಪಣೆಗಳು ಉದ್ಭವಿಸದಂತೆ ಕಟ್ಟುನಿಟ್ಟಾಗಿ ದಿನಾಂಕ 12.05.2025ರಂದು ಹೊರಡಿಸಿದ ವರ್ಗಾವಣೆ ಮಾರ್ಗಸೂಚಿಗಳನ್ನು ಅನುಸರಿಸಿ ವರ್ಗಾವಣೆ ಆದೇಶಗಳನ್ನು ಮಾಡಲು ಸೂಚಿಸಿದೆ ಎಂದು ತಿಳಿಸಿದ್ದಾರೆ.
* ಕನಿಷ್ಠ ಅವಧಿ ಪೂರ್ಣಗೊಳಿಸದೇ ಇರುವವರನ್ನು ವರ್ಗಾಯಿಸುವುದು.
* ನಿವೃತ್ತರಾಗಲು 2 ವರ್ಷಕ್ಕಿಂತ ಕಡಿಮೆ ಸೇವಾವಧಿ ಇರುವವರ ವರ್ಗಾವಣೆಯನ್ನು ಸಕಾರಣವಿಲ್ಲದೆ ಮಾಡುವುದು.
* ಅವಧಿ ಪೂರ್ವ ವರ್ಗಾವಣೆಗಳನ್ನು ಸಕಾರಣಗಳಿಲ್ಲದೆ ಮಾಡುವುದು
* ವಿಶೇಷ ಚೇತನ ನೌಕರರಿಗೆ ನೀಡಲಾದ ವಿನಾಯಿತಿಗಳನ್ನು ಅನುಸರಿಸದೇ ವರ್ಗಾಯಿಸುವುದು.
* ವರ್ಗಾವಣೆ ಆದೇಶದಲ್ಲಿ ಹುದ್ದೆಯನ್ನು ತೋರಿಸದಿರುವುದು.
* ಸಾಮಾನ್ಯ ವರ್ಗಾವಣೆ ಅವಧಿ ಮುಗಿದ ನಂತರ ಮಾನ್ಯ ಮುಖ್ಯಮಂತ್ರಿಗಳ ಅನುಮೋದನೆ ಪಡೆಯದೆ ವರ್ಗಾಯಿಸುವುದು
* ಸರ್ಕಾರದ ಆದೇಶದಲ್ಲಿ ಸೂಚಿಸಲಾದ ಇನ್ನಿತರೆ ವರ್ಗಾವಣೆ ಮಾರ್ಗಸೂಚಿಗಳನ್ನು ಅನುಸರಿಸದಿರುವುದು.
ಸರ್ಕಾರ ತನ್ನ ಮಾರ್ಗಸೂಚಿಯಲ್ಲಿ ಸರ್ಕಾರಿ ನೌಕರ ಒಂದು ಸ್ಥಳದಲ್ಲಿರಬಹುದಾದ ಕನಿಷ್ಠ ಅವಧಿ. ಒಂದು ಸ್ಥಳದಲ್ಲಿ ಸೂಚಿಸಿರುವ ಸೇವಾವಧಿಯನ್ನು ಪೂರ್ಣಗೊಳಿಸದ ಯಾವುದೇ ಸರ್ಕಾರಿ ನೌಕರನನ್ನು ಸಾಧಾರಣವಾಗಿ ವರ್ಗಾವಣೆ/ ಚಲನವಲನ ಮಾಡುವಂತಿಲ್ಲ ಎಂದು ಹೇಳಿದೆ.
ಅಲ್ಲದೇ ಎಲ್ಲ ಗುಂಪು-ಎ ಹುದ್ದೆಗಳು 2 ವರ್ಷ, ಎಲ್ಲ ಗುಂಪು-ಬಿ ಹುದ್ದೆಗಳು 2 ವರ್ಷ, ಎಲ್ಲ ಗುಂಪು-ಸಿ ಹುದ್ದೆಗಳು 4 ವರ್ಷ ಮತ್ತು ಎಲ್ಲ ಗುಂಪು-ಡಿ ಹುದ್ದೆಗಳು 7 ವರ್ಷಗಳು ಕಾರ್ಯ ನಿರ್ವಹಣೆ ಮಾಡಬಹುದು ಎಂದು ತಿಳಿಸಿದೆ.
ಸರ್ಕಾರ ತನ್ನ ಮಾರ್ಗಸೂಚಿಯಲ್ಲಿ ಸಾಮಾನ್ಯವಾಗಿ ಅವಧಿಪೂರ್ವ ವರ್ಗಾವಣೆಗಳನ್ನು ಮಾಡತಕ್ಕದ್ದಲ್ಲ. ಆದರೆ, ಯಾವುದೇ ರೀತಿಯ ಅವಧಿಪೂರ್ವ ವರ್ಗಾವಣೆಗಳನ್ನು ಹಾಗೂ ಸಾಮಾನ್ಯ ವರ್ಗಾವಣಾ ಅವಧಿ ಮುಗಿದ ನಂತರ ಯಾವುದೇ ವರ್ಗಾವಣೆಗಳನ್ನು ಮತ್ತು ಸರ್ಕಾರಿ ನೌಕರರು ಒಂದು ಸ್ಥಳದಲ್ಲಿರಬಹುದಾದ ಅವಧಿ ವಿಸ್ತರಿಸಿ ಮಾಡುವ ವರ್ಗಾವಣೆಗಳನ್ನು ಸಚಿವಾಲಯದ ಆಡಳಿತ ಇಲಾಖೆಗಳು ಲಿಖಿತ ಮೂಲಕ ಕಾರಣಗಳನ್ನು ದಾಖಲಿಸಿ ಮಾನ್ಯ ಮುಖ್ಯಮಂತ್ರಿಯವರ ಅನುಮೋದನೆಯನ್ನು ಕಡ್ಡಾಯವಾಗಿ ಪಡೆದು ಮಾಡತಕ್ಕದ್ದು ಎಂದು ಹೇಳಿದೆ.
