ಚಿತ್ರರಂಗ ಬಹುತೇಕರ ಆಕರ್ಷಣೆಯ ಕ್ಷೇತ್ರ. ಇಲ್ಲಿ ಹಲವಾರು ಜನ ಬೇರೆ ಯಾವ್ಯಾವುದೋ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದವರೆಲ್ಲ ಚಿತ್ರರಂಗದಲ್ಲಿ ಹೆಸರು ಮಾಡಿದ್ದಾರೆ. ಬೇರೆ ಬೇರೆ ವಿಭಾಗಗಳಲ್ಲಿಇಲ್ಲಿ ಕೆಲಸವನ್ನು ಕೂಡ ಮಾಡುತ್ತಿದ್ದಾರೆ. ಕೇವಲ ಸಿನಿಮಾವನ್ನೇ ಧ್ಯಾನ ಮಾಡುತ್ತಾ ಅನೇಕರು ತಮ್ಮದಲ್ಲದ ಕೆಲಸಕ್ಕೆ ಗುಡ್ ಬೈ ಹೇಳಿ ಇಲ್ಲಿ ಬಂದು ಗೆದ್ದ ಅನೇಕ ಉದಾಹರಣೆಗಳು ನಮ್ಮ ಕಣ್ಮುಂದೆ ಇವೆ.
ಉದಾಹರಣೆಗೆ ಮಿನರಲ್ ವಾಟರ್ ಸಪ್ಲೈ ಕೆಲಸ ಮಾಡುತ್ತಿದ್ದ ರಿಷಬ್ ಶೆಟ್ಟಿ ಇಂದು ಕೇವಲ ಕನ್ನಡದ ಸ್ಟಾರ್ ಮಾತ್ರವಲ್ಲ ಬದಲಿಗೆ ನ್ಯಾಷನಲ್ ಸ್ಟಾರ್ ಆಗಿ ಹೊರ ಹೊಮ್ಮಿದ್ದಾರೆ. ಟಾಯ್ಲೆಟ್ ಸಾಮಗ್ರಿಗಳ ವ್ಯಾಪಾರ ಮಾಡ್ತಿದ್ದ ವಿಜಯ್ ಸೇತುಪತಿ ಇವತ್ತು ಭಾರತದ ಅತ್ಯುತ್ತಮ ಕಲಾವಿದ ಎಂದು ಅನ್ನಿಸಿಕೊಂಡಿದ್ದಾರೆ. ಛಲ, ಶ್ರದ್ದೆ ಮತ್ತು ನಿರಂತರ ಪರಿಶ್ರಮದಿಂದ ಲೈಟ್ ಬಾಯ್ ಆಗಿದ್ದ ದರ್ಶನ್ ಇವತ್ತು ಕನ್ನಡ ಚಿತ್ರರಂಗದ ಸೂಪರ್ ಸ್ಟಾರ್ ಆಗಿದ್ದಾರೆ.
ಆದರೆ.. ಇದನ್ನರಿಯದ ಕೆಲವರು ಚಿತ್ರರಂಗದಲ್ಲಿ ತಮಗೆ ಆದರ್ಶವಾಗಬೇಕಿದ್ದ ವ್ಯಕ್ತಿಗಳ ಬಗ್ಗೆಯೇ ಕೀಳಾಗಿ ಮಾತನಾಡುತ್ತಾರೆ. ಒಂದು ಸಿನಿಮಾ ಮಾಡಿದರೆ ಸಾಕು ತಮ್ಮನ್ನು ತಾವು ಸೂಪರ್ ಸ್ಟಾರ್ ಎಂದು ಅಂದುಕೊಂಡು ಭ್ರಮೆಯಲ್ಲಿ ತೇಲುವುದಲ್ಲದೇ ತಮ್ಮದೇ ಚಿತ್ರರಂಗದಲ್ಲಿ ಹೆಸರು ಮಾಡಿದವರ ಖ್ಯಾತ ಸ್ಟಾರ್ಗಳ ಸಾವನ್ನು ಬಯಸುತ್ತಾರೆ. ಈ ಮೂಲಕ ತಮ್ಮ ಕೀಳು ಮನಸ್ಥಿತಿಯ ಪ್ರದರ್ಶನವನ್ನು ಕೂಡ ಮಾಡುತ್ತಾರೆ. ಉದಾಹರಣೆಗೆ ಮಡೆನೂರು ಮನು.
ಹೌದು, ನಿನ್ನೆಯಿಂದ ಮಡೆನೂರು ಮನು ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಒಂದು ವೈರಲ್ ಆಗಿದೆ. ವೈರಲ್ ಆದ ಆ ಆಡಿಯೋದಲ್ಲಿ ಮಡೆನೂರು ಮನು ಕನ್ನಡ ಚಿತ್ರರಂಗದ ಹೆಮ್ಮೆಯ ಸ್ಟಾರ್ ಡಾ.ಶಿವರಾಜ್ ಕುಮಾರ್ ಮತ್ತು ದರ್ಶನ್ ಅವರ ಸಾವನ್ನು ಬಯಸಿದ್ದಾರೆ. ಇಷ್ಟೇ ಅಲ್ಲ ಕನ್ನಡ ಚಿತ್ರರಂಗದ ಆಕ್ಷನ್ ಪ್ರಿನ್ಸ್ ಧ್ರುವಾ ಸರ್ಜಾ ಕುರಿತು ಕೂಡ ತುಂಬಾನೇ ಕೀಳಾಗಿ ಮಾತನಾಡಿದ್ದಾರೆ.
ಮಾತನಾಡಿರುವುದು ಮಡೆನೂರು ಮನು ಅವರೇನಾ ? ಎನ್ನುವ ಪ್ರಶ್ನೆಗೆ ಸದ್ಯ ಸ್ಪಷ್ಟ ಉತ್ತರ ಇಲ್ಲವಾದರೂ ಸೋಶಿಯಲ್ ಮೀಡಿಯಾದಲ್ಲಿ ಪೊಲೀಸರ ಕಸ್ಟಡಿಯಲ್ಲಿರುವ ಮಡೆನೂರು ಮನು ವಿರುದ್ಧ ವ್ಯಾಪಕವಾದ ಆಕ್ರೋಶ ವ್ಯಕ್ತವಾಗುತ್ತಿದೆ. ಸರಿಯಾಗಿ ಒಂದು ಸಿನಿಮಾ ತೆರೆಗೆ ಬಂದಿಲ್ಲ ಆಗಲೇ ಇಷ್ಟೊಂದು ದುರಂಹಕಾರಾನಾ ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಹಲವಾರು ಜನ ಮಡೆನೂರು ಮನು ಮನಸ್ಥಿತಿಯನ್ನು ಕಂಡು ಬೆಚ್ಚಿ ಬಿದ್ದಿದ್ದು ಆಗಿದ್ದೆಲ್ಲ ಒಳ್ಳೆಯದಕ್ಕೆ ಎಂದು ಕೂಡ ಮಾತನಾಡುತ್ತಿದ್ದಾರೆ. ಮಡೆನೂರು ಮನು ವಿರುದ್ದ ಕಿಡಿ ಕಾರುತ್ತಿದ್ದಾರೆ.
ಇದರ ನಡುವೆ ನಿರ್ಮಾಪಕ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ನಿಮ್ಮ ”ಫಿಲ್ಮಿ ಬೀಟ್ ಕನ್ನಡ”ದ ಜೊತೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ್ದಾರೆ. ತಮ್ಮ ಅಸಮಾಧಾನ ಮತ್ತು ಆಕ್ರೋಶವನ್ನು ಕೂಡ ಹೊರ ಹಾಕಿದ್ದಾರೆ. ಹಾಗಿದ್ದರೆ ಉಮೇಶ್ ಬಣಕಾರ್ ವೈರಲ್ ಆದ ಆಡಿಯೋ ಕುರಿತು ಹೇಳಿದ್ದೇನು ? ಎಂದು ತಿಳಿಯಲು ಮುಂದೆ ಓದಿ
100ಕ್ಕೂ ಅಧಿಕ ಕೇಸ್ ದಾಖಲು
” ಮಡೆನೂರು ಮನು ನಿಜಕ್ಕೂ ಡಾ.ಶಿವರಾಜ್ ಕುಮಾರ್, ದರ್ಶನ್ ಮತ್ತು ಧ್ರುವಾ ಸರ್ಜಾ ಅವರ ಬಗ್ಗೆ ಮಾತನಾಡಿದ್ದು ನಿಜಾನಾ ? ಗೊತ್ತಿಲ್ಲ. ಆದರೆ ಸದ್ಯಕ್ಕೆ ಮಡೆನೂರು ಮನು ವಿರುದ್ಧ ಜಿಲ್ಲಾವಾರು ಕೇಂದ್ರಗಳಲ್ಲಿ ಡಾ.ರಾಜ್ ಕುಮಾರ್ ಅಭಿಮಾನಿಗಳ ಒಕ್ಕೂಟದಿಂದ ನೂರಕ್ಕೂ ಅಧಿಕ ದೂರು ದಾಖಲಾಗುತ್ತಿವೆ. ಅಖಿಲ ಕರ್ನಾಟಕ ಡಾ. ರಾಜಕುಮಾರ್ ಅಭಿಮಾನಿ ಸಂಘಗಳ ಒಕ್ಕೂಟದ ಗೌರವಾಧ್ಯಕ್ಷರಾದ ಎನ್.ಆರ್.ರಮೇಶ್ ಅವರು ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚೆ ಮಾಡಲು ಬುಧವಾರ ವಾಣಿಜ್ಯ ಮಂಡಳಿಗೆ ಬರುತ್ತಿದ್ದಾರೆ” ಎಂದು ಉಮೇಶ್ ಬಣಕಾರ್ ಫಿಲ್ಮಿ ಬೀಟ್ ಕನ್ನಡಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ಧಾರೆ.
ರೋಗಿಷ್ಟ ಮನಸ್ಥಿತಿ
”ಮಡೆನೂರು ಮನು ಈಗಷ್ಟೇ ಬೆಳೆಯುತ್ತಿರುವ ಹುಡುಗ. ಮೊನ್ನೆಯಷ್ಟೇ ಒಂದು ಸಿನಿಮಾ ಬಿಡುಗಡೆಯಾಗಿದೆ. ಕೇವಲ ಒಂದು ಚಿತ್ರ ಮಾಡಿರುವ ಹುಡುಗ ಕನ್ನಡ ಚಿತ್ರರಂಗದ ದಂತಕತೆ ಡಾ.ಶಿವರಾಜ್ ಕುಮಾರ್ ಅವರ ಬಗ್ಗೆ ಮಾತನಾಡಿದ್ದು ಅಕ್ಷಮ್ಯ ಅಪರಾಧ, ಕೇವಲ ಶಿವಣ್ಣ ಮಾತ್ರವಲ್ಲ ಕನ್ನಡ ಚಿತ್ರರಂಗದ ಸೂಪರ್ ಸ್ಟಾರ್ ದರ್ಶನ್ ಮತ್ತು ಧ್ರುವಾ ಸರ್ಜಾ ಅವರ ಕುರಿತು ಅಷ್ಟೊಂದು ಕೀಳು ಮಟ್ಟದಲ್ಲಿ ಮಾತನಾಡುವ ಯಾವ ಹಕ್ಕು ಕೂಡ ಮಡೆನೂರು ಮನುಗೆ ಇಲ್ಲ, ಮಡೆನೂರು ಮನು ಮಾತನಾಡಿದ ಮಾತುಗಳನ್ನು ಕನ್ನಡ ಚಿತ್ರರಂಗ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ” ಎಂದು ಉಮೇಶ್ ಬಣಕಾರ್ ಹೇಳಿದ್ದಾರೆ. ಅವರಾಡಿರುವ ಮಾತು ಅವರ ರೋಗಿಷ್ಟ ಮನಸ್ಥಿತಿಗೆ ಕೈಗನ್ನಡಿ ಎಂದು ಹೇಳಿದ್ದಾರೆ.
ಮಡೆನೂರು ಮನು ಚಿತ್ರರಂಗದಿಂದ ನಿಷೇಧ ?
”ಮಡೆನೂರು ಮನು ಮಾತನಾಡಿದ ಮಾತುಗಳನ್ನು ಚಿತ್ರರಂಗ ನೂರಕ್ಕೆ ನೂರರಷ್ಟು ಖಂಡಿಸುತ್ತೆ. ಡಾ.ಶಿವರಾಜ್ ಕುಮಾರ್ ಅವರ ಕುಟುಂಬವಾಗಲಿ, ದರ್ಶನ್ ಅವರ ಕುಟುಂಬವಾಗಲಿ, ಧ್ರುವಾ ಸರ್ಜಾ ಅವರ ಕುಟುಂಬವಾಗಲಿ, ಕನ್ನಡ ಚಿತ್ರರಂಗದ ಯಾರೊಬ್ಬರು ಯಾವತ್ತು ಮಡೆನೂರು ಮನುಗೆ ಕೇಡು ಬಯಸಿಲ್ಲ. ಸಾಧ್ಯವಾದಷ್ಟು ಅವರ ಚಿತ್ರಕ್ಕೆ ಸಹಕಾರವನ್ನು ನೀಡುತ್ತಲೇ ಬಂದಿದೆ.
ಇನ್ನು ಇವತ್ತು ಚಿತ್ರರಂಗ ಚೂರು ಪಾರು ಉಸಿರಾಡುತ್ತಿದೆ ಅಂದರೆ ಅದಕ್ಕೆ ಶಿವಣ್ಣ ಅವರ ಕೊಡುಗೆ ದೊಡ್ಡದು. ವರ್ಷಕ್ಕೆ ಮೂರು-ನಾಲ್ಕು ಚಿತ್ರಗಳನ್ನು ಮಾಡುವ ಸ್ಟಾರ್ ಅವರು. ಅಂತಹ ವ್ಯಕ್ತಿಯ ವಿರುದ್ಧ ಮಡೆನೂರು ಮನು ಮಾತನಾಡಿರುವುದಕ್ಕೆ ಕ್ಷಮೆ ಇಲ್ಲ.
ಕನ್ನಡ ಚಿತ್ರರಂಗ ಮಡೆನೂರು ಮನು ಅವರ ಈ ಹೇಳಿಕೆಯನ್ನು ಖಂಡಿಸುತ್ತೆ, ಅವರ ವಿರುದ್ಧ ಕ್ರಮವನ್ನು ಕೈಗೊಳ್ಳುವ ನಿರ್ಧಾರವನ್ನು ಮಾಡಿದೆ, ನಿಷೇಧ ಮಾಡುವ ಹಕ್ಕು ನಮಗೆ ಇಲ್ಲವಾದರೂ ಮುಂಬರುವ ದಿನಗಳಲ್ಲಿ ಕನ್ನಡ ಚಿತ್ರರಂಗ ಮಡೆನೂರು ಮನು ಅವರನ್ನು ಚಿತ್ರರಂಗದಿಂದ ದೂರ ಇಡಲಿದೆ” ಎಂದು ಉಮೇಶ್ ಬಣಕಾರ್ ಹೇಳಿದ್ಧಾರೆ.
ಯಾರ ಸಾವನ್ನೂ ಕೂಡ ಸಂಭ್ರಮಿಸಬಾರದು
ಬೇರೆಯವರ ಸಾವನ್ನೂ ಯಾರೇ ಆಗಲಿ ಸಂಭ್ರಮಿಸಬಾರದು. ಮಡೆನೂರು ಮನು ಮಾತುಗಳನ್ನು ಕೇಳಿದರೆ ಎಂತಹವರಿಗೆ ಆದರೂ ಕೂಡ ಕೋಪ ಬರುತ್ತೆ. ಅವರು ಮದ್ಯದ ಅಮಲಿನಲ್ಲಿ ಮಾತನಾಡಿದ್ಧಾರಾ, ಗೊತ್ತಿದ್ದೂ ಗೊತ್ತಿಲ್ಲದೇ ಮಾತನಾಡಿದ್ದಾರಾ ಎನ್ನುವುದು ನಮಗೆ ಗೊತ್ತಿಲ್ಲ ಆದರೆ ಮಡೆನೂರು ಮನು ಮಾತನಾಡಿದ ಮಾತು ಕ್ಷಮೆಗೆ ಅರ್ಹವಲ್ಲ, ಮುಂಬರುವ ದಿನಗಳಲ್ಲಿ ಸಭೆ ಸೇರಿ ಚಿತ್ರರಂಗ ಕ್ರಮ ಕೈಗೊಳ್ಳಲಿದೆ ಎಂದು ಉಮೇಶ್ ಬಣಕಾರ್ ಹೇಳಿದ್ದಾರೆ.
ಅದು ಅವರ ವ್ಯೆಯಕ್ತಿಕ
ಸದ್ಯ ಮಡೆನೂರು ಮನು ಬಂಧನಕ್ಕೊಳಗಾಗಿದ್ದು ಅವರ ವ್ಯೆಯಕ್ತಿಕ ವಿಷಯಗಳಿಂದ. ಅವರು ಆ ಸಂತ್ರಸ್ತೆಯ ಜೊತೆ ಮಾಡಿದ್ದೇನು ? ಎನ್ನುವುದನ್ನು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಆ ವಿಚಾರದಲ್ಲಿ ಮಡೆನೂರು ಮನು ಅವರದ್ದು ತಪ್ಪು ಎಷ್ಟಿದೆ ಎನ್ನುವುದು ಮುಂದೆ ಗೊತ್ತಾಗಲಿದೆಯಾದರೂ ಮಡೆನೂರು ಮನು ಚಿತ್ರರಂಗದ ಬಗ್ಗೆ ಮಾತನಾಡಿದ ಮಾತುಗಳನ್ನು ಸಹಿಸಲು ಸಾಧ್ಯ ಇಲ್ಲ ಎಂದು ಕೂಡ ಉಮೇಶ್ ಬಣಕಾರ್ ಹೇಳಿದ್ದಾರೆ. ಅವರ ವ್ಯೆಯಕ್ತಿಕ ಜೀವನಕ್ಕೆ ಸಂಬಂಧಿಸಿದ ವಿಚಾರಗಳಿಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಾಗಲಿ ಅಥವಾ ಕರ್ನಾಟಕ ನಿರ್ಮಾಪಕರ ಸಂಘವಾಗಲಿ ಟೀಕೆ ಟಿಪ್ಪಣಿ ಮಾಡುವುದಿಲ್ಲ ಎಂದು ಹೇಳಿದ್ದಾರೆ.
ಸದ್ಯ ಮಡೆನೂರು ಮನು ವಿಚಾರಕ್ಕೆ ಸಂಬಂಧಿಸಿದಂತೆ ಈ ಬುಧವಾರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸಭೆ ನಡೆಯಲಿದೆ. ಈ ಸಭೆಯಲ್ಲಿ ಎನ್.ಆರ್.ರಮೇಶ್ ಅವರು ಕೂಡ ಭಾಗಿಯಾಗಲಿದ್ದು ಕನ್ನಡ ಚಿತ್ರರಂಗದ ಹಲವು ನಿರ್ಮಾಪಕರು, ನಿರ್ದೇಶಕರು ಕೂಡ ಭಾಗವಹಿಸುವ ಸಾಧ್ಯತೆ ಇದೆ.
