ಶ್ಲೋಕ – 20
ಗುಣಾನೇತಾನತೀತ್ಯ ತ್ರೀನ್ ದೇಹೀ ದೇಹಸಮುದ್ಭವಾನ್ ।
ಜನ್ಮಮೃತ್ಯುಜರಾದುಃಖೈರ್ವಿಮುಕ್ತೋSಮೃತಮಶ್ನುತೇ ॥೨೦॥
ಗುಣಾನ್ ಏತಾನ್ ಅತೀತ್ಯ ತ್ರೀನ್ ದೇಹೀ ದೇಹ ಸಮುದ್ಭವಾನ್ ।
ಜನ್ಮ ಮೃತ್ಯು ಜರಾ ದುಃಖೈಃ ವಿಮುಕ್ತಃ ಅಮೃತಮ್ ಅಶ್ನುತೇ—ದೇಹದಲ್ಲಿ ಮೂಡಿಬರುವ ಈ ಮೂರು ಗುಣಗಳನ್ನು ದಾಟಿದಾಗ ಜೀವ ಹುಟ್ಟು ಸಾವು ಮುಪ್ಪಿನ ದುಃಖದಿಂದಲು ಪಾರಾಗಿ ಅಮರನಾಗುತ್ತಾನೆ.
ನಮ್ಮ ಸ್ವರೂಪವನ್ನು ಮುಚ್ಚಿ ಗಾಢವಾಗಿ ಪರಿಣಾಮಬೀರುವ ಈ ಮೂರು ಗುಣಗಳನ್ನು ನಾವು ದಾಟಬೇಕು. [ಇಲ್ಲಿ ಮೂರು ಗುಣದಲ್ಲಿ ಸತ್ವವನ್ನು ದಾಟುವುದು ಎಂದರೆ ಸ್ಥೂಲ ಸತ್ವವನ್ನು ದಾಟಿ, ಸೂಕ್ಷ್ಮ ಸತ್ವವನ್ನು ಸೇರುವುದು ಎಂದರ್ಥ]. ಹೀಗೆ ಮೂರು ಗುಣಗಳನ್ನು ದಾಟಿ ತ್ರಿಗುಣಾತೀತನಾದರೆ, ಆಗ ನಾವು ಈ ಸಂಸಾರದ ಹುಟ್ಟು-ಸಾವು-ರೋಗ-ಮುಪ್ಪು-ದುಃಖ ಎಲ್ಲವನ್ನು ದಾಟಿ ಭಗವಂತನನ್ನು ಸೇರಿ ಅಮರರಾಗಬಹುದು. ಇದರಿಂದ ಎಂದೂ ಹುಟ್ಟು ಸಾವಿಲ್ಲದ ಆನಂದದ ಸ್ಥಿತಿಯಾದ ಮೋಕ್ಷವನ್ನು ಪಡೆಯಲು ಸಾಧ್ಯ.
