ಹಾಸನ, ಮೇ 29 – ಅಂತಿಮ ವರ್ಷದ ಪದವಿ ವಿದ್ಯಾರ್ಥಿನಿ ಕವನ.ಕೆ.ವಿ. (21) ಹೃದಯಾಘಾತದಿಂದ ದುರ್ಮರಣ ಹೊಂದಿರುವ ಘಟನೆ ಹಾಸನ ತಾಲ್ಲೂಕಿನ ಕೆಲವತ್ತಿ ಗ್ರಾಮದಲ್ಲಿ ಸಂಭವಿಸಿದೆ.
ಕೆಲವತ್ತಿ ಗ್ರಾಮದ ಪಾಪಣ್ಣ ಮತ್ತು ಗಾಯತ್ರಿ ದಂಪತಿಯ ಮಗಳು ಕವನ, ಹಾಸನ ನಗರದ ಎಂ.ಜಿ. ರಸ್ತೆಯಲ್ಲಿರುವ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿ.ಕಾಂ ಅಂತಿಮ ವರ್ಷದ ವಿದ್ಯಾರ್ಥಿನಿಯಾಗಿದ್ದರು. ಈಗಾಗಲೇ ಮೂರು ವಿಷಯಗಳ ಪರೀಕ್ಷೆಗಳನ್ನು ಬರೆದಿದ್ದ ಕವನ, ಇನ್ನೂ ಮೂರು ವಿಷಯಗಳ ಪರೀಕ್ಷೆಗಳನ್ನು ಬರೆಯಬೇಕಿತ್ತು. ನಾಳೆ ನಾಲ್ಕನೇ ವಿಷಯದ ಪರೀಕ್ಷೆ ಬರೆಯಬೇಕಿತ್ತು.
ಮಂಗಳವಾರ ಸಂಜೆ ಮನೆಗೆ ನೀರು ತರುತ್ತಿದ್ದಾಗ ಕವನಗೆ ದಿಢೀರ್ ಎದೆನೋವು ಕಾಣಿಸಿಕೊಂಡಿತು. ತಾಯಿ ಬಳಿ ಕುಡಿಯಲು ನೀರು ಕೇಳಿದ ಕವನ, ತಾಯಿ ನೀರು ತಂದುಕೊಡುವಷ್ಟರಲ್ಲಿ ಮನೆಯಲ್ಲಿಯೇ ಕುಸಿದು ಬಿದ್ದರು.
ತಕ್ಷಣವೇ ಪೋಷಕರು ಕವನಳನ್ನು ಹಾಸನದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋದರೂ, ಆಗಲೇ ಅವರು ಹೃದಯಾಘಾತದಿಂದ ಮೃತಪಟ್ಟಿದ್ದರು ಎಂದು ವೈದ್ಯರು ದೃಢಪಡಿಸಿದರು.
ಈ ಅಕಾಲಿಕ ಮರಣದಿಂದ ಪೋಷಕರು ಮುಗಿಲು ಮುಟ್ಟಿದ ಆಕ್ರಂದನದಲ್ಲಿ ಮುಗಿಲು ಮುಟ್ಟಿದೆ.
