ನವದೆಹಲಿ, ಆಗಸ್ಟ್ 26: ದೇಶದಲ್ಲಿ ಔಷಧಗಳ ಗುಣಮಟ್ಟ ಹಾಗೂ ಸುರಕ್ಷತೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಭಾರತೀಯ ಫಾರ್ಮಕೋಪಿಯಾ ಆಯೋಗ (IPC) ಏಳು ಹೊಸ ನೈಟ್ರೋಸಮೈನ್ ಕಲ್ಮಶಗಳ ರೆಫರೆನ್ಸ್ ಸ್ಟ್ಯಾಂಡರ್ಡ್ಗಳನ್ನು ಬಿಡುಗಡೆ ಮಾಡಿದೆ.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಸ್ವಾಯತ್ತ ಸಂಸ್ಥೆಯಾದ IPC, ಆಗಸ್ಟ್ 25ರಂದು ಕೊಲ್ಕತ್ತಾದ ಕೇಂದ್ರ ಔಷಧ ಪ್ರಯೋಗಾಲಯ ಹಾಗೂ ಕೇಂದ್ರ ಸೌಂದರ್ಯವರ್ಧಕ ಪ್ರಯೋಗಾಲಯದಲ್ಲಿ ನಡೆದ ತನ್ನ ಮೊದಲ ಸಂವಾದಾತ್ಮಕ ಸಭೆಯಲ್ಲಿ ಈ ಮಾನದಂಡಗಳನ್ನು ಬಿಡುಗಡೆ ಮಾಡಿತು.
ಬಿಡುಗಡೆಯಾದ ಏಳು ರೆಫರೆನ್ಸ್ ಸ್ಟ್ಯಾಂಡರ್ಡ್ಗಳೆಂದರೆ N-Nitrosodimethylamine (NDMA), N-Nitrosodiethylamine (NDEA), N-Nitrosoethylisopropylamine (NEIPA), N-Nitrosodibutylamine (NDBA), N-Nitrosomethylphenylamine (NMPA), N-Nitrosodiisopropylamine (NDIPA) ಹಾಗೂ NMBA.
ನೈಟ್ರೋಸಮೈನ್ಗಳು ಆನುವಂಶಿಕ ಹಾನಿ ಉಂಟುಮಾಡುವ ಮತ್ತು ಕ್ಯಾನ್ಸರ್ಕಾರಕ ಗುಣಲಕ್ಷಣಗಳನ್ನು ಹೊಂದಿರುವ ರಾಸಾಯನಿಕ ಸಂಯುಕ್ತಗಳ ವರ್ಗವಾಗಿದೆ. ಔಷಧಗಳ ಉತ್ಪಾದನೆ, ಪ್ಯಾಕೇಜಿಂಗ್, ಸಂಗ್ರಹಣೆ ಅಥವಾ ಕಲ್ಮಶದ ಕಾರಣದಿಂದ ಇವು ಅನಿರೀಕ್ಷಿತವಾಗಿ ಉಂಟಾಗುವ ಸಾಧ್ಯತೆ ಇದೆ.
ಹೊಸ ರೆಫರೆನ್ಸ್ ಸ್ಟ್ಯಾಂಡರ್ಡ್ಗಳು ಪ್ರಯೋಗಾಲಯಗಳಲ್ಲಿ ಔಷಧ ಮಾದರಿಗಳಲ್ಲಿರುವ ನಿರ್ದಿಷ್ಟ ನೈಟ್ರೋಸಮೈನ್ ಕಲ್ಮಶಗಳನ್ನು ಗುರುತಿಸಲು, ಹೋಲಿಕೆ ಮಾಡಲು ಮತ್ತು ಅವುಗಳ ಪ್ರಮಾಣವನ್ನು ಅಳೆಯಲು ಸಹಕಾರಿಯಾಗಲಿವೆ. ಇದರಿಂದ ಔಷಧಗಳ ಗುಣಮಟ್ಟ ನಿಯಂತ್ರಣ ಮತ್ತು ಸುರಕ್ಷತಾ ಪರೀಕ್ಷೆಗಳು ಮತ್ತಷ್ಟು ಪರಿಣಾಮಕಾರಿಯಾಗುವ ನಿರೀಕ್ಷೆಯಿದೆ.
ಈ ಕ್ರಮವು ಅಧಿಕ ರಕ್ತದೊತ್ತಡ, ಜಠರ ಸಮಸ್ಯೆ, ಮಧುಮೇಹ ಮತ್ತು ಕ್ಷಯರೋಗದ ಚಿಕಿತ್ಸೆಗೆ ಬಳಸುವ ಔಷಧಗಳ ಸುರಕ್ಷತಾ ಮೇಲ್ವಿಚಾರಣೆಯಲ್ಲೂ ಮಹತ್ವದ್ದಾಗಿದೆ.
“IP 2026: Perspectives, Suggestions & Way Forward” ವಿಷಯದಡಿ ನಡೆದ ಸಭೆಯಲ್ಲಿ ಔಷಧ ಉದ್ಯಮದ ತಜ್ಞರು ಹಾಗೂ ವಿವಿಧ ಹಿತಾಸಕ್ತಿದಾರರು ಭಾಗವಹಿಸಿದ್ದರು.
