ಬೆಂಗಳೂರು: ಟ್ಯಾಕ್ಸಿ ಅಥವಾ ಆಟೋ ಬುಕ್ ಮಾಡುವಂತೆ, ಇನ್ನು ಮುಂದೆ ಆಂಬುಲೆನ್ಸ್ಗಳನ್ನೂ ಮೊಬೈಲ್ ಆ್ಯಪ್ ಮೂಲಕ ಕರೆಯಬಹುದಾಗಿದೆ. ಖಾಸಗಿ ಕಂಪನಿಗಳಿಂದ ಒದಗಿಸುತ್ತಿರುವ ಆಂಬುಲೆನ್ಸ್ ಸೇವೆಗಳಿಗೆ ನಿಯಂತ್ರಣ ತರಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವಿಧಾನಸಭೆಯಲ್ಲಿ ಮಾಹಿತಿ ನೀಡಿದ್ದಾರೆ.
“ಗುರುಗ್ರಾಮದಲ್ಲಿ ಈ ಮಾದರಿಯ ಸೇವೆ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಅದೇ ಮಾದರಿಯಲ್ಲಿ ನಮ್ಮ ರಾಜ್ಯದಲ್ಲಿಯೂ ಆಂಬುಲೆನ್ಸ್ ಸೇವೆಯನ್ನು ಆ್ಯಪ್ ಮೂಲಕ ಒದಗಿಸಲು ಸರ್ಕಾರ ಯೋಜನೆ ರೂಪಿಸಿದೆ,” ಎಂದು ಅವರು ತಿಳಿಸಿದರು. ಸೇವೆಗಾಗಿ ಸರ್ಕಾರವೇ ದರ ನಿಗದಿಪಡಿಸಲಿದ್ದು, ಜನತೆ ಮೊಬೈಲ್ ಆ್ಯಪ್ ಬಳಸಿ ಆಂಬುಲೆನ್ಸ್ ಕರೆಯಬಹುದು.
ಈ ಸೇವೆಯನ್ನು ನಿರ್ವಹಿಸಲು ಕರ್ನಾಟಕ ಖಾಸಗಿ ವೈದ್ಯ ಸಂಸ್ಥೆಗಳ (ಕೆಪಿಎಂಇ) ಕಾಯ್ದೆಯಡಿ ಹೊಸ ರೂಪು ನೀಡಲಾಗುತ್ತಿದೆ. “ಅನೇಕ ಖಾಸಗಿ ಸಂಸ್ಥೆಗಳು ಆಂಬುಲೆನ್ಸ್ ಸೇವೆ ನೀಡುತ್ತಿವೆ. ಆದರೆ ಅವರ ಸೇವೆ ಕುರಿತು ಜನರಿಂದ ಹಲವಾರು ದೂರುಗಳು ಬಂದಿವೆ. ಖಾಸಗಿ ಆಂಬುಲೆನ್ಸ್ಗಳ ಮಾನದಂಡವನ್ನು ಸೃಷ್ಟಿಸಿ, ನೋಂದಣಿ ಪದ್ದತಿಯ ಮೂಲಕ ನಿಯಂತ್ರಣಕ್ಕೆ ತರಲಾಗುವುದು. ಹಾಗೆಂದು ಬೇಕಾಬಿಟ್ಟಿ ಹಣ ವಸೂಲಿ ಮಾಡುವ ಪರಿಸ್ಥಿತಿಗೆ ತಡೆ ಹಾಕಲು ಉದ್ದೇಶಿಸಲಾಗಿದೆ,” ಎಂದರು.
ಈ ಹೊಸ ನಿಯಮ ಜಾರಿಯಾದ ಬಳಿಕ ಖಾಸಗಿ ಸಂಸ್ಥೆಗಳು ಆಸ್ಪತ್ರೆಗಳಂತೆಯೇ ತಮ್ಮ ಆಂಬುಲೆನ್ಸ್ಗಳನ್ನೂ ನೋಂದಣಿ ಮಾಡಿಸಬೇಕಾಗುತ್ತದೆ. ಸದ್ಯ ಕೆಲ ವಾಹನಗಳು ಕೇವಲ ಒಂದು ಬೆಡ್ ಇಟ್ಟುಕೊಂಡು ಅಂಬುಲೆನ್ಸ್ ಎನ್ನಿಸಿಕೊಂಡು ಸಂಚರಿಸುತ್ತಿವೆ. ಇದರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು.
ಅಲ್ಲದೇ ಈಗ ಖಾಸಗಿ ಕಂಪನಿಗಳ ಮೂಲಕ ನಡೆಯುತ್ತಿರುವ 108 ಆಂಬುಲೆನ್ಸ್ ಸೇವೆಯನ್ನೂ ಮುಂದಿನ ದಿನಗಳಲ್ಲಿ ಸರ್ಕಾರದ ನೇರ ಸುಪರ್ದಿಗೆ ತೆಗೆದುಕೊಳ್ಳಲಾಗುವುದು. “ಈಗಿರುವ ವ್ಯವಸ್ಥೆಯನ್ನು ಬದಲಿಸಿ ಡಿಸಿ, ಸಿಇಒ, ಡಿಎಚ್ಒಗಳ ನಿಯಂತ್ರಣದಲ್ಲಿ ಆ ವ್ಯಾನ್ಗಳ ಕಾರ್ಯ ನಿರ್ವಹಣೆ ಇರಲಿದೆ,” ಎಂದು ಸಚಿವರು ಹೇಳಿದರು.
