ನವದೆಹಲಿ/ಬರ್ಲಿನ್: ಖ್ಯಾತ ಲೇಖಕಿ ಅರುಂಧತಿ ರಾಯ್ ಅವರು ಕಥೆ ಹಾಗೂ ಚಿತ್ರಕಥೆ ಬರೆದು (ನಟನೆಯನ್ನೂ ಒಳಗೊಂಡ) 1989ರಲ್ಲಿ ಬಿಡುಗಡೆಯಾದ ಭಾರತೀಯ ಚಲನಚಿತ್ರ “In Which Annie Gives It Those Ones” ಚಿತ್ರದ ಡಿಜಿಟಲ್ನಲ್ಲಿ ಮರುಸ್ಥಾಪಿತ (Restored) 4K ಆವೃತ್ತಿ ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯಲು ಸಜ್ಜಾಗಿದೆ.
ಈ ಚಿತ್ರವು ಫೆಬ್ರವರಿ 12 ರಿಂದ 22, 2026ರವರೆಗೆ ನಡೆಯಲಿರುವ 76ನೇ ಬರ್ಲಿನ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ (Berlinale) Berlinale Classics ವಿಭಾಗದಲ್ಲಿ ವಿಶ್ವ ಪ್ರಥಮ ಪ್ರದರ್ಶನ (World Premiere) ಕಾಣಲಿದೆ.
ಪ್ರದೀಪ್ ಕೃಷ್ಣನ್ ನಿರ್ದೇಶನದ ಈ ಚಿತ್ರವು 1970ರ ದಶಕದ ದೆಹಲಿಯ ಆರ್ಕಿಟೆಕ್ಚರ್ ಕಾಲೇಜಿನ ಹಿನ್ನೆಲೆಯಲ್ಲಿನ ವಿನೋದಾತ್ಮಕ ಕ್ಯಾಂಪಸ್ ಕಾಮಿಡಿಯಾಗಿದ್ದು, ಆ ಕಾಲಘಟ್ಟದ ವಿದ್ಯಾರ್ಥಿ ಜೀವನ, ಸ್ನೇಹ, ಕನಸುಗಳು ಮತ್ತು ವ್ಯವಸ್ಥೆಯ ಮೇಲಿನ ವ್ಯಂಗ್ಯವನ್ನು ಸೊಗಸಾಗಿ ಚಿತ್ರಿಸುತ್ತದೆ.
ಇದನ್ನು ಓದು: ಗೋವಾದಲ್ಲಿ ಇಂಡಿಯನ್ ರೇಸಿಂಗ್ ಫೆಸ್ಟಿವಲ್ ಸ್ಟ್ರೀಟ್ ರೇಸ್; ಕಿಚ್ಚಾಸ್ ಕಿಂಗ್ಸ್ ತಂಡ ಸ್ಪರ್ಧೆ
ಅರುಂಧತಿ ರಾಯ್ ಅವರು ತಮ್ಮ ಸ್ವಂತ ಆರ್ಕಿಟೆಕ್ಚರ್ ವಿದ್ಯಾರ್ಥಿ ದಿನಗಳ ಅನುಭವಗಳನ್ನು ಆಧರಿಸಿ ಈ ಚಿತ್ರದ ಕಥೆ ಮತ್ತು ಚಿತ್ರಕಥೆ ರಚಿಸಿದ್ದು, ರಾಧಾ ಎಂಬ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರವು ಬಿಡುಗಡೆಯಾದ ನಂತರ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದಿದ್ದು, ವರ್ಷಗಳ ಕಾಲ ಚಿತ್ರಪ್ರೇಕ್ಷಕರ ನಡುವೆ ವಿಶಿಷ್ಟ ಸ್ಥಾನಮಾನ ಪಡೆದು ಕಲ್ಟ್ ಕ್ಲಾಸಿಕ್ ಆಗಿ ಗುರುತಿಸಿಕೊಂಡಿದೆ.
4K ತಂತ್ರಜ್ಞಾನದಲ್ಲಿ ಮರುಸ್ಥಾಪನೆಯಾದ ಈ ಆವೃತ್ತಿಯು ಅಂತರರಾಷ್ಟ್ರೀಯ ವೇದಿಕೆಯಲ್ಲಿ ಪ್ರದರ್ಶನ ಕಾಣುತ್ತಿರುವುದು ಭಾರತೀಯ ಸಮಾಂತರ ಚಲನಚಿತ್ರಗಳ ಮಹತ್ವವನ್ನು ಮತ್ತೊಮ್ಮೆ ಜಾಗತಿಕವಾಗಿ ಎತ್ತಿ ತೋರಿಸುತ್ತಿದೆ.
