ನವದೆಹಲಿ, ಜೂನ್ 30: 2025–26ನೇ ಹಣಕಾಸು ವರ್ಷದ ಲಾಭಾಂಶವಾಗಿ ಬ್ಯಾಂಕ್ ಆಫ್ ಇಂಡಿಯಾ ಕೇಂದ್ರ ಸರ್ಕಾರಕ್ಕೆ ₹1,553.50 ಕೋಟಿ ಮೊತ್ತದ ಡಿವಿಡೆಂಡ್ (ಲಾಭಾಂಶ) ಚೆಕ್ ಅನ್ನು ಮಂಗಳವಾರ ಹಸ್ತಾಂತರಿಸಿತು.
ಜೂನ್ 17, 2026ರ ದಿನಾಂಕದ ಚೆಕ್ ಅನ್ನು ಬ್ಯಾಂಕ್ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಜನೀಶ್ ಕರ್ಣಾಟಕ ಅವರು, ಬ್ಯಾಂಕ್ನ ನಾಲ್ವರು ಕಾರ್ಯನಿರ್ವಾಹಕ ನಿರ್ದೇಶಕರೊಂದಿಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಹಣಕಾಸು ಸೇವೆಗಳ ಇಲಾಖೆಯ ಜಂಟಿ ಕಾರ್ಯದರ್ಶಿ ಶಾಲಿನಿ ಪಂಡಿತ್ ಉಪಸ್ಥಿತರಿದ್ದರು.
2025–26ನೇ ಹಣಕಾಸು ವರ್ಷಕ್ಕೆ ಬ್ಯಾಂಕ್ ಆಫ್ ಇಂಡಿಯಾ ಪ್ರತಿ ಈಕ್ವಿಟಿ ಷೇರಿಗೆ ₹4.65 (46.50%) ಲಾಭಾಂಶವನ್ನು ಘೋಷಿಸಿತ್ತು.
ಬ್ಯಾಂಕ್ನ ನಿವ್ವಳ ಲಾಭವು 2025–26ನೇ ಹಣಕಾಸು ವರ್ಷದಲ್ಲಿ 14.19 ಶೇಕಡಾ ಏರಿಕೆಯಾಗಿದ್ದು, 2024–25ರಲ್ಲಿ ದಾಖಲಿಸಿದ್ದ ₹9,219 ಕೋಟಿ ನಿವ್ವಳ ಲಾಭವು 2025–26ರಲ್ಲಿ ₹10,527 ಕೋಟಿಗೆ ಏರಿಕೆಯಾಗಿದೆ.
ಕೇಂದ್ರ ಸರ್ಕಾರಕ್ಕೆ ಲಾಭಾಂಶ ಪಾವತಿಸುವ ಮೂಲಕ ಬ್ಯಾಂಕ್ ಆಫ್ ಇಂಡಿಯಾ ತನ್ನ ದೃಢ ಹಣಕಾಸು ಸಾಧನೆ, ಷೇರುದಾರರಿಗೆ ಮೌಲ್ಯ ಸೃಷ್ಟಿಸುವ ಬದ್ಧತೆ ಹಾಗೂ ನಿರಂತರ ಉತ್ತಮ ಆದಾಯ ಗಳಿಸುವ ಸಾಮರ್ಥ್ಯವನ್ನು ಮತ್ತೊಮ್ಮೆ ಪ್ರದರ್ಶಿಸಿದೆ ಎಂದು ಬ್ಯಾಂಕ್ ಪ್ರಕಟಣೆಯಲ್ಲಿ ತಿಳಿಸಿದೆ.
